BallaryBelagavibidarGadaggulburgakarwar uttar kannadaKoppalStatevijayapur

ಬೆಳಗಾವಿ ಬಸವೇಶ್ವರ ವೃತ್ತದಲ್ಲಿ ಹೊಸ ಬಸವೇಶ್ವರರ ಮೂರ್ತಿ ಸ್ಥಾಪನೆ


ಬೆಳಗಾವಿಯ ಗೋವಾವ್ಹೇಸ್‍ನಲ್ಲಿರುವ ವಿಶ್ವಗುರು ಬಸವೇಶ್ವರ ವೃತ್ತದಲ್ಲಿ ಹೊಸದಾಗಿ ಭವ್ಯ ಬಸವೇಶ್ವರರ ಮೂರ್ತಿ ಸ್ಥಾಪನೆಗೆ ಎಲ್ಲ ರೀತಿಯ ಸಿದ್ಧತೆ ಆರಂಭವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ವಚನ ಬರೆಯುತ್ತಿರುವ ಬಸವೇಶ್ವರರ ಮೂರ್ತಿ ಸ್ಥಾಪನೆಯಾಗಲಿದೆ ಎಂದು ಬೆಳಗಾವಿ ಜಿಲ್ಲಾ ವೀರಶೈವ  ಮಹಾ ಸಭೆಯ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ತಿಳಿಸಿದ್ದಾರೆ .
ಬುಧವಾರ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಕರೆದಿದ್ದ ಲಿಂಗಾಯತ ಮುಖಂಡರ ಸಭೆಯಲ್ಲಿ ಗೋವಾವ್ಹೇಸ್‍ನಲ್ಲಿರುವ ಲಿಂಗಾಯತ ಧರ್ಮ ಸಂಸ್ಥಾಪಕ, ಮಹಾಮಾನವತಾವಾದಿ ಬಸವಣ್ಣನವರ ಮೂರ್ತಿ ಹಳೆಯದಾಗಿರುವ ಹಿನ್ನೆಲೆ ನೂತನ ಮೂರ್ತಿಯನ್ನು ಸ್ಥಾಪಿಸುವ ಸಂಬಂಧ ಸುದೀರ್ಘವಾಗಿ ಚರ್ಚಿಸಲಾಯಿತು. ಯಾವ ರೀತಿಯ ಬಸವೇಶ್ವರ ಮೂರ್ತಿ ಪ್ರತಿಷ್ಠಾಪಿಸಬೇಕು ಎಂಬ ಕುರಿತು ಹಲವು ಮುಖಂಡರು ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು. ಅಶ್ವಾರೂಢ, ವಚನ ಬರೆಯುತ್ತಿರುವ ಮೂರ್ತಿಗಳ ಬಗ್ಗೆ ಪ್ರಸ್ತಾಪಿಸಲಾಯಿತು. ಇನ್ನು ಬಹುತೇಕ ಮುಖಂಡರು ವಚನ ಬರೆಯುತ್ತಿರುವ ಬಸವೇಶ್ವರರ ಮೂರ್ತಿ ಸ್ಥಾಪಿಸಿದ್ರೆ ಒಳ್ಳೆಯದು ಎಂದು ತಮ್ಮ ಅಭಿಪ್ರಾಯ ತಿಳಿಸಿದ ಹಿನ್ನೆಲೆ ಅಂತಿಮವಾಗಿ ವಚನ ಬರೆಯುತ್ತಿರುವ ಬಸವೇಶ್ವರರ ಮೂರ್ತಿಯನ್ನೆ ಪ್ರತಿಷ್ಠಾಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಇನ್ನು ಬಸವೇಶ್ವರ ಮೂರ್ತಿ ಸ್ಥಾಪನೆಗೆ ದಕ್ಷಿಣ ಶಾಸಕ ಅಭಯ್ ಪಾಟೀಲ್ ಎರಡು ಹಂತಗಳಲ್ಲಿ 50 ಲಕ್ಷ ಅನುದಾನ ನೀಡಲು ಭರವಸೆ ನೀಡಿದ್ದಾರೆ. ಇನ್ನು ಹಿಂದಿ ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ ಅವರು ಪಾಲಿಕೆಯಿಂದ 10 ಲಕ್ಷ ಅನುದಾನವನ್ನು ಈಗಾಗಲೇ ಮಂಜೂರು ಮಾಡಿಸಿದ್ದಾರೆ. ಸಭೆಯಲ್ಲಿ ಕೆಎಲ್‍ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ ಅವರು ಮಾತನಾಡಿ ಸೊಲ್ಲಾಪುರದಿಂದ ಓರ್ವ ಮೂರ್ತಿಕಾರರು, ಬೆಂಗಳೂರಿನ ಇಬ್ಬರು ಮೂರ್ತಿಕಾರರು ಸೇರಿ ಸ್ಥಳೀಯ ಮೂರ್ತಿಕಾರರ ಜೊತೆ ಚರ್ಚಿಸೋಣ. ಈಗಾಗಲೇ ಎಲ್ಲರೂ ಹೇಳಿದಂತೆ ವಚನ ಬರೆಯುತ್ತಿರುವ ಬಸವಣ್ಣನವರ ಭವ್ಯ ಮೂರ್ತಿ ಸ್ಥಾಪನೆಗೆ ನಾವೆಲ್ಲರೂ ಕೈಜೋಡಿಸೋಣ ಎಂದು ಹೇಳಿದರು.
ಸಭೆಯಲ್ಲಿ ಕಾರಂಜಿಮಠ ಗುರುಸಿದ್ಧ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವೀರಶೈವ ಮಹಾಸಭೆ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಮುಖಂಡರಾದ, ಗುರುದೇವಿ ಹುಲೆಪ್ಪನವರಮಠ, ಶ್ರೀಮತಿ ನೀಲಗಂಗಾ ಚರಂತಿಮಠ , ಶ್ರೀಮತಿ ಪ್ರತಿಭಾ ಕಳ್ಳಿಮಠ, ಶ್ರೀಮತಿ ಜ್ಯೋತಿ ಭಾವಿಕಟ್ಟಿ, ಶ್ರೀಮತಿ ಜ್ಯೋತಿ ಬಾದಾಮಿ, ಶ್ರೀಮತಿ ಆಶಾ ಯಮಕನಮರಡಿ , ಶರಣ ಅಣ್ಣಾಸಾಹೇಬ್ ಕೊರಬು, ಡಾ.ಎಫ್.ವ್ಹಿ.ಮಾನ್ವಿ, ವಿ.ಕೆ.ಪಾಟೀಲ್. ಸಚಿನ್ ಪಾಟೀಲ್, ಈರಣ್ಣ ದಯನ್ನವರ, ನ್ಯಾಯವಾದಿ ಎಂ.ಬಿ.ಜೀರಲಿ, ಬಸವರಾಜ್ ಜಗಜಂಪಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಒಟ್ಟಾರೆ ಗೋವಾವ್ಹೇಸ್‍ನಲ್ಲಿ ಮಂತ್ರಪುರುಷ ಬಸವೇಶ್ವರರ ನೂತನ ಭವ್ಯ ಮೂರ್ತಿ ನಿರ್ಮಾಣಕ್ಕೆ ಸಿದ್ಧತೆ ಆರಂಭಗೊಂಡಿದ್ದು. ಆದಷ್ಟು ಬೇಗನೇ ಮೂರ್ತಿ ನಿರ್ಮಾಣವಾಗಿ ಜನಸಾಮಾನ್ಯರ ನೆಚ್ಚಿನ ಪವಿತ್ರ ಧಾರ್ಮಿಕ, ಪ್ರವಾಸಿ ಕೇಂದ್ರವಾಗಿ ಮುಂದಿನ ಪೀಳಿಗೆಗೆ ಬಸವಣ್ಣನವರ ಜಾತಿ, ವರ್ಣ, ವರ್ಗ ರಹಿತ ಸಮಾಜ ನಿರ್ಮಾಣದ ಪರಿಕಲ್ಪನೆ ತಿಳಿಯುವಂತಾಗಲಿ ಎನ್ನುವುದೇ ಎಲ್ಲರ ಆಶಯವಾಗಿದೆ


Leave a Reply