10ಸಾವಿರ ಕೋವಿಶಿಲ್ಡ್ ಲಸಿಕೆ ಬಳ್ಳಾರಿ ಜಿಲ್ಲೆಗೆ ಆಗಮನ

ಕೋವಿಡ್ ಮೊದಲ ಸುತ್ತಿನ ಲಸಿಕಾ ಕಾರ್ಯಕ್ರಮ ಜ.16ರಿಂದ

ಬಳ್ಳಾರಿ, ಜ.14 : ಬಳ್ಳಾರಿ ಜಿಲ್ಲೆಯಲ್ಲಿ ಕೋವಿಡ್ ಮೊದಲ ಸುತ್ತಿನ‌ ಲಸಿಕಾ ಕಾರ್ಯಕ್ರಮ ಇದೇ 16ರಿಂದ ಆರಂಭವಾಗಲಿದ್ದು, ಜಿಲ್ಲೆಗೆ ಗುರುವಾರ ಮಧ್ಯಾಹ್ನ 10ಸಾವಿರ ಕೋವಿಶಿಲ್ಡ್ ಲಸಿಕೆಗಳು ಅತ್ಯಂತ ಸುರಕ್ಷತಾ ಭದ್ರತೆಯೊಂದಿಗೆ ವಾಹನದಲ್ಲಿ ಆಗಮಿಸಿವೆ.

ಜಿಲ್ಲಾಧಿಕಾರಿ ಪವನಕುಮಾರ್ ಮಾಲ

ಪಾಟಿ‌ ಅವರ ಸಮ್ಮುಖದಲ್ಲಿ ಕೋವಿಶಿಲ್ಡ್ ‌ಲಸಿಕೆ ಹೊತ್ತುತಂದ ವಾಹನದ ಬೀಗವನ್ನು ತೆರೆಯುವುದರ ಮೂಲಕ ಜಿಲ್ಲಾ ಆರೋಗ್ಯ ಮತ್ತು ಕುಟುಂಬ‌ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಶೀಥಲೀಕರಣ ಘಟಕದಲ್ಲಿ ಸಂಗ್ರಹಿಸಿಡಲಾಯಿತು.
ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಸಾಂಕೇತಿಕವಾಗಿ ಕೋವಿಡ್ ಲಸಿಕಾ ಬಾಕ್ಸವೊಂದನ್ನು ಡಿಎಚ್ಒ ಜನಾರ್ಧನ್, ಜಿಲ್ಲಾ ಆರ್ಸಿಎಚ್ ಅಧಿಕಾರಿ ಅನಿಲಕುಮಾರ್ ಅವರಿಗೆ ಹಸ್ತಾಂತರಿಸಿದರು.
ನಂತರ ಜಿಲ್ಲಾಧಿಕಾರಿ ಮಾಲಪಾಟಿ ಅವರು ಶೀಥಲೀಕರಣ ಘಟಕದಲ್ಲಿ ಪರಿಶೀಲನೆ ನಡೆಸಿ ಅಗತ್ಯ ಸಲಹೆ-ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಿದರು.
ನಂತರ ಜಿಲ್ಲಾಧಿಕಾರಿಗಳು ಜ.16ರಂದು‌ ಲಸಿಕೆ ನೀಡುವ ಜಿಲ್ಲಾಸ್ಪತ್ರೆಯಲ್ಲಿನ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನೋಂದಣಿ ಕೊಠಡಿ,ಚಿಕಿತ್ಸಾ ಕೊಠಡಿ,ನಿಗಾ ಕೊಠಡಿ ಸೇರಿದಂತೆ ವಿವಿಧ ರೀತಿಯಲ್ಲಿ ಕೈಗೊಳ್ಳಲಾದ ಸಿದ್ಧತೆಗಳನ್ನು ಪರಿಶೀಲಿಸಿದರು ಮತ್ತು ಲಸಿಕೆ ನೀಡುವವರೊಂದಿಗೂ ಚರ್ಚಿಸಿ,ಅವರಿಗೂ ಶುಭ ಹಾರೈಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಜಿಲ್ಲೆಗೆ ಇಂದು‌ 10ಸಾವಿರ‌ ಕೋವಿಶಿಲ್ಡ್ ‌ಲಸಿಕೆ ಬಂದಿದ್ದು,ಅವುಗಳನ್ನು ಸುರಕ್ಷಿತವಾಗಿ ಶಿಥಲೀಕರಣ ಘಟಕದಲ್ಲಿ ಸಂಗ್ರಹಿಸಿಡಲಾಗಿದೆ. ಮೊದಲ ಹಂತದಲ್ಲಿ ಆರೋಗ್ಯ ಸೇವಾ ಸಿಬ್ಬಂದಿಗೆ ಲಸಿಕೆ ನೀಡಲಾಗುತ್ತಿದ್ದು, ಲಸಿಕೆ ನೀಡುವ ಕೇಂದ್ರಗಳಲ್ಲಿ ಈಗಾಗಲೇ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಮೊದಲ ಸುತ್ತಿನಲ್ಲಿ 19432 ಆರೋಗ್ಯ ಸೇವಾ ಸಿಬ್ಬಂದಿಗಳಿಗೆ ಕೋವಿಡ್ ಲಸಿಕೆ ಹಾಕಲು ನಿರ್ಧರಿಸಲಾಗಿದೆ ಎಂದರು.
ಜ.16ರಂದು ಬೆಳಗ್ಗೆ 11ಕ್ಕೆ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರು ಆನ್‍ಲೈನ್ ಮೂಲಕ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು,ಇದೇ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ವಿಮ್ಸ್, ಜಿಲ್ಲಾಸ್ಪತ್ರೆ, 7 ಸಾರ್ವಜನಿಕ ಆಸ್ಪತ್ರೆಗಳು, ಮಿಲ್ಲರಪೇಟೆ ನಗರ ಆರೋಗ್ಯ ಕೇಂದ್ರ, ಚೆಳ್ಳಗುರ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಂದರೇ 11 ಕಡೆ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿ ಆರೋಗ್ಯ ಸಿಬ್ಬಂದಿಗೆ ಪ್ರತಿ ಕೇಂದ್ರದಲ್ಲಿ ತಲಾ 100ರಂತೆ 1100 ಜನರಿಗೆ ಲಸಿಕೆ ನೀಡಲಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಸರಕಾರಿ, ಖಾಸಗಿ ಸೇರಿದಂತೆ ‌ 145 ಲಸಿಕಾ ಕೇಂದ್ರಗಳನ್ನು ‌ಗುರುತಿಸಲಾಗಿದ್ದು,ಇಲ್ಲಿ ಈಗಾಗಲೇ ನೋಂದಾಯಿಸಲಾಗಿರುವ ಆರೋಗ್ಯ ಸೇವಾ ಸಿಬ್ಬಂದಿಗೆ‌ ಲಸಿಕೆ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.
ಇಡೀ ಕಾರ್ಯಕ್ರಮ ಸುಸೂತ್ರವಾಗಿ ಜರುಗುವ ನಿಟ್ಟಿನಲ್ಲಿ ಎಲ್ಲ ಅಗತ್ಯ ಸಿದ್ಧತೆಗಳನ್ನು ಜಿಲ್ಲಾಡಳಿತ ಕೈಗೊಂಡಿದೆ ಎಂದು ಅವರು ತಿಳಿಸಿದರು.
ಕೋವಿಡ್ ಲಸಿಕೆ ಹೊತ್ತ ವಾಹನಕ್ಕೆ ಹಾಗೂ ಲಸಿಕೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಪೂಜೆ ಸಲ್ಲಿಸಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಡಿಎಚ್ಒ ಡಾ.ಜನಾರ್ಧನ್, ಜಿಲ್ಲಾ ಆರ್ ಸಿಎಚ್ ಅಧಿಕಾರಿ ಡಾ.ಅನಿಲಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ ಮತ್ತಿತರರು ಇದ್ದರು.

Leave A Reply

Your email address will not be published.