Koppal

ಮಾವು ಬೆಳೆಗಾರರಿಗೆ ತೋಟಗಾರಿಕೆ ಇಲಾಖೆಯಿಂದ ಸಲಹೆಗಳು


ಕೊಪ್ಪಳ ಜ.೧೫: ಮಾವಿನಲ್ಲಿ ಈಗ ಹೂವಾಡುವ ಹಂತವಿದ್ದು, ಎಲ್ಲಾ ಕಡೆಗೂ ಉತ್ತಮವಾದ ಹೂವು ಬರುತ್ತಿದೆ. ಕೆಲವು ಕಡೆ ಹೂವು ಜೋಳದ ಕಾಳಿನಷ್ಟು ಗಾತ್ರದ್ದಾಗಿರುತ್ತದೆ. ಈ ಹಂತದಲ್ಲಿ ರೈತರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾ ತೋಟಗಾರಿಕೆ ಇಲಾಖೆ ಮತ್ತು ಹಾರ್ಟಿ ಕ್ಲಿನಿಕ್‌ನಿಂದ ರೈತರಿಗೆ ಸಲಹೆಗಳನ್ನು ನೀಡಲಾಗಿದೆ.
ತೋಟಗಳನ್ನು ಕಸದಿಂದ ಮುಕ್ತವಾಗಿಡಬೇಕು. ಬುಡವನ್ನು ಸಡಿಲಗೊಳಿಸಿ ೫೦೦ ಗ್ರಾಂ. ನಿಂದ ೧ ಕೆ.ಜಿ. ಯಷ್ಟು ಬೇವಿನ ಹಿಂಡಿಯನ್ನು ಕೊಡಬೇಕು. ಕಾಳು ಕಟ್ಟುವ ಹಂತದಲ್ಲಿ ಅಂಗಮಾರಿ ರೋಗ ತಡೆಗಟ್ಟಲು ಇಮಿಡಾಕ್ಲೋಪ್ಟಿಡ್ ೦.೩೦ ಮಿ.ಲೀ. ಜೊತೆಗೆ ಥಯೋಫಿನೈಟ್ ಮಿಥೈಲ್ ೧ ಗ್ರಾಂ. ೧ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ೧೫ ದಿನಗಳ ನಂತರ ಲ್ಯಾಮ್ಡಾ ಸಿಯಾಲೋಥ್ರಿನ್ ೧ ಮಿ.ಲೀ. ಜೊತೆಗೆ ಹೆಕ್ಸಾಕೊನಜೋಲ್ ೧ ಮಿ.ಲೀ. ೧ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ಬೊರ್ಡೋ ಮಿಶ್ರಣವನ್ನು ನೆಲದಿಂದ ೩ ಅಡಿ ಅಂತರದಷ್ಟು ಗಿಡದ ಬಡ್ಡೆಗೆ ಲೇಪನ ಮಾಡಬೇಕು. ಕಾಯಿಗಳು ಉದುರದಂತೆ ಪ್ಲಾನೋಫಿಕ್ಸ್ ಎನ್ನುವ ಸಸ್ಯಚೋಧಕವನ್ನು ೦.೪೦ ೧ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ಕಾಳುಗಳು ಗೋಲಿ ಗಾತ್ರದಷ್ಟಾದಾಗ ಮಾವು ಸ್ಪೆಷಲ್ ೧ ಲೀ. ನೀರಿಗೆ ೫ ಗ್ರಾಂ ಬೆರೆಸಿ ಸಿಂಡಿಸಬೇಕು.
ಈ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಉತ್ತಮ ಇಳುವರಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರ ಕಛೇರಿ, (ಜಿಪಂ) ಕೊಪ್ಪಳ, ಹಾರ್ಟಿ ಕ್ಲಿನಿಕ್ ವಿಷಯ ತಜ್ಞರಾದ ವಾಮನಮೂರ್ತಿ, ಮೊ.ಸಂ.೯೪೮೨೬೭೨೦೩೯ ಮತ್ತು ಆಯಾ ತಾಲ್ಲೂಕಾ ಕಛೇರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply