Ballary

ಉತ್ತರ ಕನ್ನಡ : ಕೋವಿಶೀಲ್ಡ್ ಲಸಿಕೆ ವಿತರಣಾ ಅಭಿಯಾನಕ್ಕೆ ಚಾಲನೆ


ಕಾರವಾರ : ಜಿಲ್ಲೆಯಲ್ಲಿ ಕೋವಿಶಿಲ್ಡ್ ಲಸಿಕೆ ನೀಡುವ ಪ್ರಕ್ರಿಯೆಗೆ ಶನಿವಾರ ಕಾರವಾರ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಜಿಲ್ಲಾಧಿಕಾರಿ ಡಾ. ಹರೀಶ್‌ಕುಮಾರ್ ಕೆ. ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ಲಸಿಕೆ ನೀಡುವ ಮುನ್ನ ಶಾಸಕಿ ರೂಪಾಲಿ ನಾಯ್ಕ ಅವರು ಲಸಿಕೆ ವಿತರಣೆ ಅಭಿಯಾನದ ಸಿದ್ಧತೆಗಳನ್ನು ಪರಿಶೀಲಿಸಿದರು. ನಂತರ ಕೊರೋನಾ ಲಸಿಕಾ ಕೇಂದ್ರ ಹಾಗೂ ನೋಂದಣಿ ಕೊಠಡಿಯನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣವನ್ನು ನೇರಪ್ರಸಾರದಲ್ಲಿ ವೀಕ್ಷಿಸಿದರು.
ಇದೇ ವೇಳೆ ಕಿಮ್ಸ್‌ನ ಡಿ ಗ್ರೂಪ್ ನೌಕರ ೪೩ ವರ್ಷದ ಬಾಲಚಂದ್ರ ಶಿರೋಡ್ಕರ್ ಅವರು ಕೋವಿಡ್-೧೯ರ ಪ್ರಥಮ ಲಸಿಕೆಯನ್ನು ಕಾರವಾರ ಮೆಡಿಕಲ್ ಕಾಲೇಜಿನ ಲಸಿಕಾ ಕೇಂದ್ರದಲ್ಲಿ ಪಡೆದರು. ಹಾಗೇನೆ ಎಕ್ಸರೇ ಟೆಕ್ನಿಷಿಯನ್ ದಿವ್ಯಾ ಕೃಷ್ಣ ಗುನಗಿ ಅವರು ೨ನೇಯವರಾಗಿ ಡೋಸ್ ಪಡೆದಿದ್ದು, ಛಾಯಾ  ದುರ್ಗೇಕರ್  ಅವರು ೩ನೇಯವರಾಗಿ ಲಸಿಕೆ ತೆಗೆದುಕೊಂಡರು.
ಜಿಲ್ಲೆಯ ೧೧ ಲಸಿಕಾ ಕೇಂದ್ರಗಳಲ್ಲಿ ಗ್ರೂಪ್ ಡಿ ಸಿಬ್ಬಂದಿ, ನರ್ಸ್, ಲ್ಯಾಬ್ ಟೆಕ್ನಿಷಿಯನ್, ಆಶಾ ಕಾರ್ಯಕರ್ತೆಯರು, ವೈದ್ಯರು ಸೇರಿದಂತೆ  ಆರೋಗ್ಯ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ.
ಲಸಿಕೆ ಪಡೆದವರಿಗೆ ೨೮ ದಿನಗಳ ನಂತರ ಮತ್ತೆ ಎರಡನೇ ಡೊಸ್ ಪಡೆಯಲು ಆಗಮಿಸುವಂತೆ ಎಸ್‌ಎಂಎಸ್ ಸಂದೇಶ ಕಳುಹಿಸಲಾಗುತ್ತದೆ. ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲಿಸಬೇಕು. ಮಾಸ್ಕ್ ಧರಿಸುವಿಕೆ ಮತ್ತು ಸ್ಯಾನಿಟೈಸರ್‌ನಿಂದ ಆಗಾಗ ಕೈಗಳ ಸ್ವಚ್ಛಗೊಳಿಸುವಿಕೆ ಕೆಲಸ ಮಾಡಬೇಕು ಎಂದು ವೈದ್ಯರು ಲಸಿಕ ಹಾಕಿಸಿಕೊಂಡವರಿಗೆ ತಿಳಿಸಿದ ದೃಶ್ಯ ಕಂಡು ಬಂದಿತು.
ಲಸಿಕೆ ಪಡೆದ ನಂತರ ಲಸಿಕೆ ಹಾಕಿಸಿಕೊಂಡವರಿಗೆ ಅಬ್ಸರ್ವೇಶನ್ ಕೊಣೆಯಲ್ಲಿ ಅರ್ಧಗಂಟೆಗಳ ಕಾಲ ನಿಗಾವಹಿಸಿರುವುದುನ್ನು  ಕೂಡ  ಮಾಡಲಾಗಿತ್ತು. ಜಿಲ್ಲೆಯಲ್ಲಿ ಯಾವುದೇ ರೀತಿಯ ಅಡ್ಡಪರಿಣಾಮಗಳು ಉಂಟಾದ ಬಗೆಗಿನ ಮಾಹಿತಿ ವರದಿಯಾಗಿಲ್ಲ.
ಈ ಸಂದರ್ಭದಲ್ಲಿ ಜಿಲ್ಲಾ  ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು,
ಜಿಪಂ ಸಿಇಓ  ಪ್ರಿಯಾಂಗಾ ಎಂ., ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ., ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಗಜಾನನ ನಾಯಕ, ಡಿಸ್ಟ್ರಿಕ್ಟ್ ಸರ್ಜನ್ ಶಿವಾನಂದ ಕುಡ್ತಕರ್, ಜಿಲ್ಲಾ ಆರೋಗ್ಯಧಿಕಾರಿ ಡಾ. ಶರದ ನಾಯಕ ಸೇರಿದಂತೆ ವೈದ್ಯಕೀಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

 


Leave a Reply