Uncategorized

ಸಬೂಬು ಬೇಡ; ಕಾಮಗಾರಿಗಳು ಶೀಘ್ರ ಪೂರ್ಣಗೊಳಿಸಿ: ಡಿಸಿ ಮಾಲಪಾಟಿ ಸೂಚನೆ


ಬಳ್ಳಾರಿ,ಜ.16 : ಅನೇಕ ವರ್ಷಗಳಿಂದ ಬಾಕಿ ಉಳಿದಿರುವ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವುದನ್ನು ಬಿಟ್ಟು ಸಬೂಬು ಹೇಳುವ, ಕಾರಣ ನೀಡುವ ಕೆಲಸ ಮಾಡಬೇಡಿ. ತಮಗೆ ವಹಿಸಿರುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಿ ಮತ್ತು ಬಾಕಿ ಉಳಿದಿರುವ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಎಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜ.20 ರಂದು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಪ್ರಾದೇಶಿಕ ಆಯುಕ್ತರುಗಳ, ಜಿಲ್ಲಾಧಿಕಾರಿಗಳ, ಹಾಗೂ ಜಿಲ್ಲಾ ಪಂಚಾಯತಿ ಕಾರ್ಯ ನಿರ್ವಾಹಣಾಧಿಕಾರಿಗಳ ಸಮ್ಮೇಳನ ಸಭೆಯ ಹಿನ್ನಲೆ ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಮಾಹಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿವಿಧ ಇಲಾಖೆಗಳ ಬಾಕಿ ಕಾಮಗಾರಿಗಳ ಮಾಹಿತಿ ಪಡೆದು ಶೀಘ್ರವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿದರು.
ಸುಮಾರು ವರ್ಷಗಳಿಂದ ಪೂರ್ಣವಾಗದೆ ಉಳಿದಿರುವ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ, ಕಾಮಗಾರಿ ನಡೆಯುವ ಸ್ಥಳಗಳಿಗೆ ಸ್ವತಃ ಭೇಟಿ ನೀಡಿ ಕಾಮಗಾರಿಯ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆಯುವ ಮೂಲಕ ಸಮಯ ಮತ್ತು ಹಣ ವ್ಯರ್ಥವಾಗದಂತೆ ನೋಡಿಕೊಂಡು ಹೋಗಿ ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಪ್ರವಾಹ ಹಾಗೂ ಮಳೆಯಿಂದ ಉಂಟಾದ ಮನೆ ಹಾಗೂ ಇನ್ನೀತರ ಹಾನಿಯ ಮಾಹಿತಿಯನ್ನು ಡಿಸಿ ಮಾಲಪಾಟಿ ಅವರು ಪಡೆದರು.
ಜಿಲ್ಲೆಯ 32 ಗ್ರಾಮಗಳು ನದಿ ದಡದಲ್ಲಿದ್ದು, 2020ರಲ್ಲಿ ಯಾವುದೇ ಮನೆಗಳು ಪ್ರವಾಹಕ್ಕೆ ತುತ್ತಾಗಿಲ್ಲ, ಜಿಲ್ಲೆಯಾದ್ಯಂತ 8 ಜನರು ಪ್ರವಾಹ ಮತ್ತು ಭಾರಿ ಮಳೆಯಿಂದಾಗಿ ಜೀವ ಕಳೆದುಕೊಂಡಿದ್ದು, ಒಬ್ಬರಿಗೆ ಐದು ಲಕ್ಷದಂತೆ 40 ಲಕ್ಷ ಪರಿಹಾರ ನೀಡಲಾಗಿದೆ. ಇದೇ ಸಮಯದಲ್ಲಿ 16 ಜಾನುವಾರುಗಳು, 59 ಕುರಿ ಮತ್ತು ಮೇಕೆಗಳು ಮೃತಪಟ್ಟಿದ್ದು 6 ಲಕ್ಷದ 23 ಸಾವಿರ ರೂ. ಪರಿಹಾರ ನೀಡಲಾಗಿದೆ. 10384.7 ಹೆಕ್ಟರ್ ಬೆಳೆ ಹಾನಿಯಾಗಿದ್ದು, 6766 ಫಲಾನುಭವಿಗಳಿಗೆ 4 ಕೋಟಿ 56 ಲಕ್ಷದ 81 ಸಾವಿರ ರೂ.ಪರಿಹಾರ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಸಭೆಗೆ ವಿವರಿಸಿದರು.
ಪ್ರವಾಹ ಸಮಯದಲ್ಲಿ ಮಳೆಯಿಂದ ಹಾಳಾದ ನೆರೆ ಪರಿಹಾರದ ರಸ್ತೆ ಕಾಮಗಾರಿ, ಮೇವಿನ ಲಭ್ಯತೆ ಮುಂತಾದ ಕಾಮಗಾರಿಗಳ ಬಗ್ಗೆ ಜಿಲ್ಲಾಧಿಕಾರಿ ಮಾಲಪಾಟಿ ಅವರು ಮಾಹಿತಿ ಪಡೆದರು.
ಸ್ವಚ್ಚ ಭಾರತ್ ಮಿಷನ್ ಆಡಿಯಲ್ಲಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಡಲಾಗುತ್ತದೆ. ಬಳ್ಳಾರಿ ನಗರದಲ್ಲಿ 2019ರಲ್ಲಿ 35284 ಶೌಚಾಲಯಗಳನ್ನು ನಿಮಾಣ ಮಾಡಲಾಗಿದೆ. ಸ್ವಚ್ಚ ನಗರ ನಿರ್ಮಾಣದಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ 210 ಗ್ರಾಪಂ ಕ್ರಿಯಾ ಯೋಜನೆಯು ಸರ್ಕಾರದಿಂದ ಮಾನ್ಯತೆ ಪಡೆದಿದ್ದು, ಅವುಗಳಲ್ಲಿ 102 ಗ್ರಾಪಂಗಳ ಘಟಕ ನಿರ್ಮಾಣ ಮಾಡಲು ಕ್ರಮವಹಿಸಲಾಗಿದೆ, 122 ಗ್ರಾಪಂಗಳಲ್ಲಿ ವಾಹನ ಖರೀದಿ ಮಾಡಲಾಗಿದೆ, 102 ಗ್ರಾಪಂಗಳಲ್ಲಿ ಕಸದ ಬುಟ್ಟಿಗಳನ್ನು ನೀಡಿದ್ದು, 20 ಗ್ರಾಪಂಗಳಿಗೆ ಟೆಂಡರ್ ಕರೆಯಲಾಗಿದೆ, 96 ಗ್ರಾಪಂಗಳಲ್ಲಿ ಕಸ ಸಂಗ್ರಹಣೆಯನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
ಅಮೃತ್ ಯೋಜನೆಯಡಿಯಲ್ಲಿ ನೀರು ಸರಬರಾಜು, ಒಳಚರಂಡಿ, ಮಳೆ ನೀರಿನ ಚರಂಡಿ ಉದ್ಯಾನವನ ನಿರ್ಮಾಣದಂತಹ ಹಲವು ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದ್ದು ಆದಷ್ಟು ಬೇಗ ಅವುಗಳನ್ನು ಪೂರ್ಣಗೊಳಿಸಲಾಗುವುದು ನಗರದಲ್ಲಿ ಎಲ್ಲಾ ಕಡೆ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು ಅದು ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಅಧಿಕಾರಿಗಳು ವಿವರಿಸಿದರು.
ನಗರೋತ್ಥಾನದಲ್ಲಿ ಇದುವರೆಗೆ 14 ಕಾಮಗಾರಿಗಳು ಮಂಜೂರಾಗಿದ್ದು, 7 ಕಾಮಗಾರಿಗಳು ಪೂರ್ಣಗೊಂಡಿವೆ, 4 ಕಾಮಗಾರಿಗಳು ಪ್ರಗತಿಯಲ್ಲಿದ್ದು, 3 ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡರು.
ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ವಸತಿ ಯೋಜನೆ, ಮುಂತಾದ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ಮಾಲಪಾಟಿ ಅವರು 2017-18-19ರ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ ಆದಷ್ಟು ಬೇಗ ಅವುಗಳನ್ನು ಪೂರ್ಣಗೊಳಿಸಿ ಎಂದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.


Leave a Reply