Koppal

ಜ.18 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿ : ವಿ.ರಶ್ಮಿ ಮಹೇಶ

????????????????????????????????????

ಕೊಪ್ಪಳ ಜ.16  : ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ವೇಳಾಪಟ್ಟಿಯನ್ವಯ ಮತದಾರರ ಪಟ್ಟಿ ಪರಿಷ್ಕರಣೆ ಅವಧಿ ಮುಕ್ತಾಯಗೊಂಡಿದ್ದು, ವೇಳಾಪಟ್ಟಿಯಂತೆ ಜನವರಿ.18 ರಂದು ಜಿಲ್ಲೆಯಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಮತದಾರರ ಪಟ್ಟಿ ವೀಕ್ಷಕರಾದ ವಿ.ರಶ್ಮಿ ಮಹೇಶ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶನಿವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮತದಾರರ ಪಟ್ಟಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನವರಿ.01, 2021 ಕ್ಕೆ ಅನ್ವಯವಾಗುವಂತೆ 18 ವರ್ಷ ಪೂರ್ಣಗೊಂಡ ಯುವ ಮತದಾರರು ಹಾಗೂ ಮರಣ ಹೊಂದಿದ, ಬಿಟ್ಟು ಹೋದವರ ಹೆಸರುಗಳನ್ನು ಪರಿಷ್ಕರಿಸಿ ಮತದಾರರ ಪಟ್ಟಿಯನ್ನು ಸಿದ್ಧಪಡಿಸಲು ಭಾರತ ಚುನಾವಣಾ ಆಯೋಗದಿಂದ ನೀಡಲಾಗಿದ್ದ ವೇಳಾಪಟ್ಟಿಯನ್ವಯ ಎಲ್ಲ ಕ್ರಮಗಳನ್ನು ಕೈಗೊಂಡು ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಮಿಂಚಿನ ನೋಂದಣಿ ಮೂಲಕ ಹೊಸ ಮತದಾರರ ಹೆಸರುಗಳನ್ನು ಸೇರ್ಪಡೆ ಮಾಡಲಾಗಿದೆ. ಅದರಂತೆ ಆಯೋಗದ ನಿರ್ದೇಶನದಂತೆ ಜನವರಿ.18 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಬೇಕಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ಅಂತಿಮಗೊAಡ ಪಟ್ಟಿಯನ್ನು ತಾಲ್ಲೂಕುಗಳ ತಹಶೀಲ್ದಾರರಿಗೆ ನೀಡಬೇಕು. ತಹಶೀಲ್ದಾರರು ಬೂತ್ ಮಟ್ಟದ ಅಧಿಕಾರಿಗಳಿಗೆ ತಲುಪಿಸಿ, ಮತಗಟ್ಟೆಗಳಲ್ಲಿ, ತಹಶೀಲ್ದಾರರ ಕಚೇರಿಯಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ನಮೂನೆ-06 ರಲ್ಲಿ ವಿಕಲಚೇತನರ ಹೆಸರು ಸೇರ್ಪಡೆಗೆ ಮಾಹಿತಿಯನ್ನು ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿಗಳ ಕಾರ್ಯಾಲಯದಿಂದ ಪಡೆದು, ಸ್ವಮೋಟೋದಿಂದ ಹೆಸರು ಸೇರ್ಪಡೆ ಮಾಡಬೇಕು. ಗಣ್ಯ ವ್ಯಕ್ತಿಗಳು, ಜನಪ್ರತಿನಿಧಿಗಳು, ಸಾಹಿತಿಗಳು ಮುಂತಾದ ಪ್ರಮುಖರ ಹಾಗೂ ಅವರ ಕುಟುಂಬದವರ ಹೆಸರು ಸೇರ್ಪಡೆ, ಪರಿಷ್ಕರಣೆ ಕುರಿತು ಕ್ರಮ ಕೈಗೊಳ್ಳಲು ಈ ಹಿಂದೆ ಸೂಚನೆ ನೀಡಲಾಗಿತ್ತು. ಅದನ್ನು ಇನ್ನೊಮ್ಮೆ ಪರಿಶೀಲಿಸಿಕೊಂಡು ಅಂತಿಮ ಪಟ್ಟಿಯನ್ನು ಪ್ರಕಟಿಸಿ. ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದ ನಂತರ ಅತಿ ಶೀಘ್ರದಲ್ಲಿ ಮತದಾರರ ಚೀಟಿಯನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ ಸೇರಿದಂತೆ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


Leave a Reply