BallaryBelagavibidarGadaggulburgakarwar uttar kannadaKoppalStatevijayapur

RTI ಕಾಯ್ದೆಯಡಿ ಟರ್ಫ್ ಕ್ಲಬ್​ಗಳು ಮಾಹಿತಿ ನೀಡಲೇಬೇಕು; ಹೈಕೋರ್ಟ್


ಸಾರ್ವಜನಿಕ ಭೂಮಿಯನ್ನು ರಿಯಾಯಿತಿ ದರದಲ್ಲಿ ಪಡೆದಿರುವ ಸಂಸ್ಥೆಗಳು ಜನರಿಗೆ ಉತ್ತರದಾಯಿಗಳಾಗಿದ್ದು, ಮಾಹಿತಿ ನೀಡಬೇಕು ಎಂದಿರುವ ಹೈಕೋರ್ಟ್​​​​, ಅರ್ಜಿದಾರ ಸಂಸ್ಥೆಗಳು ಸಲ್ಲಿಸಿರುವ ಅರ್ಜಿಯನ್ನು ವಜಾ ಮಾಡಿ ಆದೇಶಿಸಿದೆ.
ಬೆಂಗಳೂರು: ನಗರದ ಬೆಂಗಳೂರು ಟರ್ಫ್ ಕ್ಲಬ್, ಮೈಸೂರು ಟರ್ಫ್ ಕ್ಲಬ್ ಸೇರಿದಂತೆ ಸರ್ಕಾರಿ ಭೂಮಿಯನ್ನು ರಿಯಾಯಿತಿ ದರದಲ್ಲಿ ಗುತ್ತಿಗೆ ಪಡೆದಿರುವ ಸಂಸ್ಥೆಗಳು ಮಾಹಿತಿ ಹಕ್ಕು ಕಾಯ್ದೆಯಡಿ (RTI) ಮಾಹಿತಿ ನೀಡುವ ಉತ್ತರದಾಯಿತ್ವವನ್ನು ಹೊಂದಿವೆ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕ್ಲಬ್​​​ಗಳಿಗೆ ಸಂಬಂಧಿಸಿದಂತೆ ಅರ್ಜಿದಾರರು ಕೋರಿರುವ ಮಾಹಿತಿ ನೀಡಲು ಆದೇಶಿಸಿದ್ದ ರಾಜ್ಯ ಮಾಹಿತಿ ಆಯೋಗದ ಕ್ರಮ ಪ್ರಶ್ನಿಸಿ ಬೆಂಗಳೂರು ಟರ್ಫ್ ಕ್ಲಬ್, ಮೈಸೂರು ಟರ್ಫ್ ಕ್ಲಬ್, ಲೇಡಿಸ್ ಕ್ಲಬ್ ಮತ್ತು ಇನ್​​​ಸ್ಟಿಟ್ಯೂಟ್ ಆಫ್ ಇಂಜಿನಿಯರ್ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾ.ಪಿ.ಬಿ. ಭಜಂತ್ರಿ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ಮಾಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಸರ್ಕಾರ ಈ ಸಂಸ್ಥೆಗಳಿಗೆ ರಿಯಾಯಿತಿ ದರದಲ್ಲಿ ಭೂಮಿ ಗುತ್ತಿಗೆ ನೀಡಿದೆ. ಸರ್ಕಾರಿ ಭೂಮಿ ಸಾರ್ವಜನಿಕರ ಭೂಮಿ ಇದ್ದಂತೆ. ಇಂತಹ ಭೂಮಿಯನ್ನು ಸರ್ಕಾರ ಮಾರುಕಟ್ಟೆ ಮೌಲ್ಯಕ್ಕಿಂತ ಸಾಕಷ್ಟು ಕಡಿಮೆ ಬಾಡಿಗೆಗೆ ಗುತ್ತಿಗೆ ನೀಡಿದೆ. ಈ ಮೂಲಕ ಪರೋಕ್ಷವಾಗಿ ರಿಯಾಯಿತಿ ನೀಡಿದ್ದು, ಭೂಮಿ ಗುತ್ತಿಗೆ ಪಡೆದವರು ಜನರಿಗೆ ಉತ್ತರದಾಯಿ‌ಯಾಗುತ್ತಾರೆ. ಹೀಗಾಗಿ, ಈ ಸಂಸ್ಥೆಗಳನ್ನು ಸಾರ್ವಜನಿಕ ಪ್ರಾಧಿಕಾರಗಳಂತೆ ಪರಿಗಣಿಸಬಹುದಾಗಿದೆ. ಅದರಂತೆ ಸಾರ್ವಜನಿಕರು RTI ಕಾಯ್ದೆಯಡಿ ಮಾಹಿತಿ ಪಡೆಯಬಹುದು ಎಂದು ಆದೇಶಿಸಿದೆ. ಈ ಮೂಲಕ ಮಾಹಿತಿ ನೀಡುವಂತೆ ಆದೇಶಿಸಿದ್ದ ಮಾಹಿತಿ ಆಯೋಗದ ಆದೇಶವನ್ನು ಎತ್ತಿ ಹಿಡಿದಿದೆ.
ನಗರದ ವಕೀಲ ಉಮಾಪತಿ ಹಾಗೂ ಡಾ.ಕುದೂರು ವೆಂಕಟೇಶ್ ಎಂಬುವರು ಬೆಂಗಳೂರು ಟರ್ಫ್ ಕ್ಲಬ್, ಮೈಸೂರು ಟರ್ಫ್ ಕ್ಲಬ್, ಲೇಡಿಸ್ ಕ್ಲಬ್ ಹಾಗೂ ಇನ್​​ಸ್ಟಿಟ್ಯೂಟ್ ಆಫ್​ ಇಂಜಿನಿಯರ್ ಸಂಸ್ಥೆಗಳಿಂದ ಕೆಲ ಮಾಹಿತಿ ಕೋರಿ 2012ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಸಂಸ್ಥೆಗಳು ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿದಾರರು ರಾಜ್ಯ ಮಾಹಿತಿ ಆಯೋಗಕ್ಕೆ 2013ರಲ್ಲಿ ದೂರು ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ರಾಜ್ಯ ಮಾಹಿತಿ ಆಯೋಗ 2013ರ ಜುಲೈ 1ರಂದು ಮಾಹಿತಿ ನೀಡುವಂತೆ ಸಂಸ್ಥೆಗಳಿಗೆ ಆದೇಶಿಸಿತ್ತು.
ಮಾಹಿತಿ ಆಯೋಗದ ಈ ಆದೇಶ ಪ್ರಶ್ನಿಸಿ ಅರ್ಜಿದಾರ ಸಂಸ್ಥೆಗಳು ನಾವು ಸಾರ್ವಜನಿಕ ಪ್ರಾಧಿಕಾರಗಳಲ್ಲ. ಹೀಗಾಗಿ, ಮಾಹಿತಿ ಹಕ್ಕು ಕಾಯ್ದೆ-2005ರ ಸೆಕ್ಷನ್ 2(ಎಚ್) ಅಡಿ ಮಾಹಿತಿ ನೀಡುವ ಬಾಧ್ಯತೆ ಹೊಂದಿಲ್ಲ ಎಂದು ವಾದಿಸಿದ್ದವು. ವಾದ ಅಲ್ಲಗಳೆದಿರುವ ಪೀಠ, ಸಾರ್ವಜನಿಕ ಭೂಮಿಯನ್ನು ರಿಯಾಯಿತಿ ದರದಲ್ಲಿ ಪಡೆದಿರುವ ಸಂಸ್ಥೆಗಳು ಜನರಿಗೆ ಉತ್ತರದಾಯಿಗಳಾಗಿದ್ದು, ಮಾಹಿತಿ ನೀಡಬೇಕು ಎಂದು ಆದೇಶಿಸಿದೆ.


Leave a Reply