Ballary

ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ : ಹೊಸಪೇಟೆಯಲ್ಲಿ ಪೊಲೀಸರಿಂದ ಹೆಲ್ಮೆಟ್ ಜನಜಾಗೃತಿ ಜಾಥಾ

ಹೊಸಪೇಟೆ,ಜ.18  ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಪ್ರಯುಕ್ತ ಹೊಸಪೇಟೆ ನಗರದಲ್ಲಿ ಪೊಲೀಸರಿಂದ ಹೆಲ್ಮೆಟ್‌ ಜನಜಾಗೃತಿ ಜಾಥಾ ನಡೆಯಿತು.
‘ಸಡಕ್‌ ಸುರಕ್ಷಾ, ಜೀವನ್‌ ಸುರಕ್ಷಾ’ ಎಂಬ ಘೋಷವಾಕ್ಯ ಹೊಂದಿರುವ ಜಾಗೃತಿ ಜಾಥಾಕ್ಕೆ ಡಿವೈಎಸ್ಪಿ ವಿ. ರಘುಕುಮಾರ ಅವರು ನಗರದ ಪಟ್ಟಣ ಠಾಣೆ ಬಳಿ ಚಾಲನೆ ನೀಡಿದರು.
ನಂತರ ಇಲಾಖೆಯ ಸಿಬ್ಬಂದಿ, ಗೃಹ ರಕ್ಷಕ ದಳದವರು, ರೋಟರಿ ಕ್ಲಬ್, ಜೂನಿಯರ್‌ ಚೇಂಬರ್‌ ಆಫ್‌ ಇಂಡಿಯಾ ಸಂಘಟನೆಯವರು ಬೈಕ್‌ ರ್ಯಾಲಿ ನಡೆಸಿದರು.
ನಗರದ ರೋಟರಿ ವೃತ್ತ, ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ಕಾಲೇಜು ರಸ್ತೆ, ಸಿದ್ಧಿಪ್ರಿಯಾ ಕಲ್ಯಾಣ ಮಂಟಪ ರಸ್ತೆ, ಸಾಯಿಬಾಬಾ ವೃತ್ತ, ವಾಲ್ಮೀಕಿ ವೃತ್ತ, ರಾಮ ಟಾಕೀಸ್‌, ಮಹಾತ್ಮ ಗಾಂಧಿ ವೃತ್ತದ ಮೂಲಕ ಹಾದು ಪಟ್ಟಣ ಠಾಣೆ ಬಳಿ ರ್‍ಯಾಲಿ ಕೊನೆಗೊಂಡಿತು. ಜಾಥಾದಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಫಲಕಗಳು ಗಮನ ಸೆಳೆದವು.
ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಸ್ಪಿ ರಘುಕುಮಾರ, ಪ್ರತಿ ವರ್ಷ ರಸ್ತೆ ಅಪಘಾತಗಳಲ್ಲಿ ಲಕ್ಷಕ್ಕೂ ಹೆಚ್ಚು ಜನ ಸಾವನ್ನಪ್ಪುತ್ತಿದ್ದಾರೆ. ಅದರಲ್ಲೂ ಹೆಲ್ಮೆಟ್‌ ಧರಿಸದವರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ. ಬೈಕ್‌ ಸವಾರರು ಬಿದ್ದು ಗಾಯಗೊಂಡರೆ ತಲೆಗೆ ಪೆಟ್ಟು ಬಿದ್ದು ಸಾಯುವವರೇ ಅಧಿಕ. ಸುರಕ್ಷತೆಯ ದೃಷ್ಟಿಯಿಂದ ಎಲ್ಲ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್‌ ಧರಿಸಿಕೊಳ್ಳಬೇಕು’ ಎಂದರು.
‘ಇನ್ನೂ ಒಂದು ತಿಂಗಳ ವರೆಗೆ ನಗರದಲ್ಲಿ ಹೆಲ್ಮೆಟ್‌ ಕುರಿತು ಜಾಗೃತಿ ಮೂಡಿಸಲಾಗುವುದು. ನಂತರ ಧರಿಸದವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಜನ ಕೂಡ ಹೆಲ್ಮೆಟ್‌ ಮಹತ್ವ ಅರಿತು ಅವರಾಗಿಯೇ ಧರಿಸಬೇಕು. ಜನರ ಪಾಲ್ಗೊಳ್ಳುವಿಕೆ ಇಲ್ಲದೆ ಯಾವ ಕಾನೂನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳಲು ಸಾಧ್ಯವಿಲ್ಲ. ಅದನ್ನು ಎಲ್ಲರೂ ಅರ್ಥ ಮಾಡಿಕೊಂಡು‌ ಸಹಕರಿಸುವಂತೆ ಅವರು ಮನವಿ ಮಾಡಿದರು.
ಎಂದು ಹೇಳಿದರು.
ಇಂದಿನಿಂದ ಒಂದು ತಿಂಗಳ ಕಾಲ ಸಡಕ್ ಸುರಕ್ಷಾ-ಜೀವನ್ ರಕ್ಷ ಘೋಷಣೆಯೊಂದಿಗೆ ಸಂಚಾರಿ ಜಾಗೃತಿಯನ್ನು ಮೂಡಿಸಲಾಗುತ್ತಿದ್ದು, 1989ರಿಂದ ಪ್ರತಿವರ್ಷದ ಜನವರಿ ತಿಂಗಳಲ್ಲಿ ಸಂಚಾರ ಜಾಗೃತಿ ಮಾಸಾಚರಣೆ ಹಮ್ಮಿಕೊಳ್ಳಲಾಗುತ್ತಿದ್ದು, ಇದು 38ನೇ ಮಾಸಾಚರಣೆ ಆಗಿದೆ. ನಗರದ ಶಾಲಾ-ಕಾಲೇಜುಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸವಾರರಿಗೆ ಸಂಚಾರಿ ಜಾಗೃತಿಯನ್ನು ಮೂಡಿಸಲಾಗುತ್ತದೆ ಎಂದು ಸಂಚಾರ ಪೊಲೀಸ್ ಇನ್ಸಪೆಕ್ಟರ್ ಮಹಂತೇಶ್ ಸಜ್ಜನ್ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಠಾಣೆಯ ಪಿ.ಐ. ಶ್ರೀನಿವಾಸ್, ಟಿಬಿ ಡ್ಯಾಂ ಸಿಪಿಐ ನಾರಾಯಣ ಸೇರಿದಂತೆ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker