Gadag

ಸರ್ಕಾರದ ಯೋಜನೆಗಳ ಯಶಸ್ಸಿಗೆ ಅಧಿಕಾರಿಗಳ ಆಸಕ್ತಿ , ಶ್ರಮ ಅಗತ್ಯ : ಜಿ.ಪಂ. ಅಧ್ಯಕ್ಷ ಈರಪ್ಪ ನಾಡಗೌಡ್ರ


ಗದಗ  22 : ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳ ಆವರಣಗಳಲ್ಲಿ ಉದ್ಯಾನವನ ಹಾಗೂ ಕೈತೋಟಗಳನ್ನು ಅತ್ಯಂತ ಶಿಸ್ತುಬದ್ಧ ಹಾಗೂ ಅಂದವಾಗಿ ನಿರ್ಮಿಸಲು ಅಧಿಕಾರಿಗಳು ಆಸಕ್ತಿ ಹಾಗೂ ಶ್ರದ್ಧೆ ವಹಿಸುವ ಮೂಲಕ ಕಾರ್ಯಪ್ರವೃತ್ತರಾಗಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ಈರಪ್ಪ ನಾಡಗೌಡ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಮಾಸಿಕ ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತೋಟಗಾರಿಕೆ ಇಲಾಖೆ ವತಿಯಿಂದ ಶಾಲಾ ಆವರಣಗಳನ್ನು ಸುಂದರವಾಗಿಸಲು ಕೈತೋಟಗಳನ್ನು ನಿರ್ಮಿಸಲು ಅವಕಾಶವಿದ್ದು ಎಲ್ಲ ಶಾಲಾ ಆವರಣಗಳು ಸುಂದರಮಯವಾಗಿಸುವಲ್ಲಿ ತೋಟಗಾರಿಕೆ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಅರಣ್ಯ ಇಲಾಖೆಗಳ ಅಧಿಕಾರಿಗಳ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಿ ಸುಂದರ ಶಾಲಾ ಪರಿಸರ ನಿರ್ಮಾಣ ಮಾಡುವ ಮೂಲಕ ಮಕ್ಕಳ ಶೈಕ್ಷಣಿಕ ಕಲಿಕೆಗೆ ಸಹಕರಿಸಬೇಕೆಂದು ಸೂಚಿಸಿದರು.
ಅಲ್ಲದೇ ವಿವಿಧ ಇಲಾಖೆಗಳ ಅಧಿಕಾರಿಗಳು ಸಹ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಉತ್ಸುಕರಾಗಿ ಕಾರ್ಯನಿರ್ವಹಿಸುವ ಮೂಲಕ ಸರ್ಕಾರದ ಅನುದಾನವನ್ನು ಸದ್ಭಳಕೆ ಮಾಡಬೇಕೆಂದು ತಿಳಿಸಿದರು.
ಗದಗ ಜಿಲ್ಲೆಯಲ್ಲಿ ತೋಟಗಾರಿಕೆ ಇಲಾಖೆಯಿಂದ 44.34 ಲಕ್ಷ ರೂ. ಗಳನ್ನು ಹೂ ಬೆಳೆಗಾರರ 373 ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ.  ಮತ್ತು 2779 ಹಣ್ಣು ತರಕಾರಿ ಬೆಳೆಯುವ ರೈತರಿಗೆ 328.34 ಲಕ್ಷ ರೂ.ಗಳನ್ನು ನೀಡಲಾಗಿದೆ.  ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ  ಶಾಲಾ ಆವರಣಗಳಲ್ಲಿ 215 ಕೈತೋಟ ಹಾಗೂ ಉದ್ಯಾನವನಗಳನ್ನು ನಿರ್ಮಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ ಅವರು ಪ್ರವಾಹ ಸಂದರ್ಭದಲ್ಲಿ ಹಾನಿಗೊಳಗಾದ 1.83 ಲಕ್ಷ ರೈತರ ಪೈಕಿ 64 ಸಾವಿರ ರೈತರಿಗೆ  56 ಕೋಟಿ ರೂ. ಪರಿಹಾರ ವಿತರಿಸುವ ಮೂಲಕ ಶೇ 40 ರಷ್ಟು ಗುರಿ ಸಾಧಿಸಿದೆ.  ಅದರಂತೆ ಉಳಿಕೆ ರೈತರಿಗೆ ಪರಿಹಾರ ವಿತರಣೆ ಮಾಡಲಾಗುವುದು.  2020 ರ ಮುಂಗಾರಿನಲ್ಲಿ ಜಿಲ್ಲೆಯ 7 ತಾಲೂಕುಗಳನ್ನು ಪ್ರವಾಹ ಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಸ್ಥಳೀಯ ಗಂಡಾಂತರ ಯೋಜನೆಯಡಿ ಜಿಲ್ಲೆಯ ರೈತರಿಗೆ 100 ಕೋಟಿ ರೂ ಪರಿಹಾರ ದೊರೆಯಲಿದೆ ಎಂದರು.  2020 ರ ಮುಂಗಾರಿನಲ್ಲಿ ಮೆಕ್ಕೆಜೋಳ ಬೆಳೆದ ರೈತರಿಗೆ ತಲಾ 5 ಸಾವಿರ ರೂ ಪರಿಹಾರವನ್ನು ನೇರವಾಗಿ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ. ಬೆಳೆ ಸಮೀಕ್ಷೆ ಮೂಲಕ ರಾಜ್ಯದಲ್ಲಿ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಶೇ. 54 ರಷ್ಟು ರೈತರು ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಬಾಕಿ ಉಳಿದ ಬೆಳೆ ಸಮೀಕ್ಷೆ ಇಲಾಖೆಯಿಂದ ಕೈಗೊಳ್ಳಲಾಗಿದೆ.
ಪಶು ಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ. ಮನಗೂಳಿ ಮಾತನಾಡಿ ಜಿಲ್ಲೆಯ ಎಸ್.ಸಿ. ಎಸ್.ಟಿ. ಸಮುದಾಯ ಸಾಕುವ ರಾಸುಗಳಿಗೆ ಸರ್ಕಾರದಿಂದ ಸಂಪೂರ್ಣ ಉಚಿತವಾಗಿ ವಿಮೆ ಮಾಡಿಸಲಾಗುವುದು.  ಅದರಂತೆ ಸಾಮಾನ್ಯ ಪಂಗಡದ ರೈತರಿಗೆ ಶೇ. 70 ರಷ್ಟು ವಿಮೆ ಸಬ್ಸಿಡಿ ದೊರೆಯಲಿದೆ.  ಕಳೆದ ಮೂರು ವರ್ಷಗಳಿಂದ 4.38 ಕೋಟಿ ರೂ. ಕುರಿ ಸೇರಿದಂತೆ ಇತರೆ ಜಾನುವಾರುಗಳ ಜೀವಹಾನಿ ಪರಿಹಾರ ನೀಡಬೇಕಿದೆ. ಕೃತಕ ಗರ್ಭದಾರಣೆ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ 27,430 ರಾಸುಗಳಿಗೆ ಕೃತಕ ಗರ್ಭಧಾರಣೆ ಮಾಡಲಾಗಿದೆ. ಅದರಂತೆ ಕಾಲುಬಾಯಿ ಜ್ವರಕ್ಕೆ 1,53,751 ರಾಸುಗಳಿಗೆ ಲಸಿಕೆ ನೀಡಲಾಗಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಇಲಾಖೆಯ ಕಾರ್ಯವೈಖರಿಗಳು ಶೀಘ್ರಗತಿಯಲ್ಲಿ ಜರುಗಬೇಕು. ಅಲ್ಲದೇ ಜಿಲ್ಲೆಯ ಹೈನುಗಾರಿಕೆ    ಆಸಕ್ತಿ ಇರುವ ರೈತರಿಗೆ ನಬಾರ್ಡ ಮೂಲಕ ನೆರವು ಕೊಡಿಸಿ ಪ್ರೋತ್ಸಾಹಿಸುವ ಕಾರ್ಯವಾಗಬೇಕು.  ಅಲ್ಲದೇ ಸಾಲ ಸೌಲಭ್ಯಗಳನ್ನು ಹೆಚ್ಚು ಹೆಚ್ಚು ರೈತರಿಗೆ ಒದಗಿಸುವಲ್ಲಿ ಅಧಿಕಾರಿಗಳು ಶ್ರಮವಹಿಸಬೇಕು ಎಂದರು.
ಗ್ರಾಮೀಣ ಕುಡಿಯವ ನೀರು ನೈರ್ಮಲ್ಯ ವಿಭಾÀಗದಿಂದ ಜೆ ಜೆ.ಎಂ.ಯೋಜನೆಯಡಿ 343 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಯಿಸಿದ ಜಿ.ಪಂ. ಅಧ್ಯಕ್ಷ ರು ಹಾಗೂ ಉಪಾಧ್ಯಕ್ಷರು ಮತ್ತು ಸ್ಥಾಯಿ ಸಮಿತಿಗಳ ಅಧ್ಯಕ್ಷರು  ಸೇರಿದಂತೆ ಸಿ.ಸಿ.ರಸ್ತೆ ಪೈಪ್ ಲೈನ್ ಕಾಮಗಾರಿ ಕೈಗೊಳ್ಳುವ ಮೊದಲು ಸರಿಯಾಗಿ ಅಂದಾಜು ಪಟ್ಟಿಯನ್ನು ತಯಾರಿಸಬೇಕು ಅಲ್ಲದೇ ಕಾರ್ಯಕ್ರಮಗಳ ಚಾಲನೆ ಸಂದರ್ಭದಲ್ಲಿ  ಜನಪ್ರತಿನಿಧಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ರೂಢಿ ಇಟ್ಟುಕೊಳ್ಳಬೇಕು ಇಲ್ಲದಿದ್ದಲ್ಲಿ ಶಿಸ್ತು ಕ್ರಮಕ್ಕೆ ಒಳಗಾಗಬೇಕಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾದಿಕಾರಿ ಡಾ.ಆನಂದ್ ಕೆ ಮಾತನಾಡಿ ಸರ್ಕಾರದ ಕಾರ್ಯಕ್ರಮಗಳಿಗೆ ನಿಯಮನುಸಾರ ಜನಪ್ರತಿನಿಧಿಗಳನ್ನು ಆಹ್ವಾನಿಸಬೇಕು.  ಶಿಷ್ಟಾಚಾರ ಉಲ್ಲಂಘನೆ ಪ್ರಕರಣಗಳಿಗೆ ಅಧಿಕಾರಿಗಳು ಅವಕಾಶ ನೀಡಬಾರದು ಎಂದು ತಿಳಿಸಿದರು. ಅಲ್ಲದೇ ಇಲಾಖೆಗಳಿಗೆ ನಿಗದಿಪಡಿಸಲಾದ ಗುರಿಗಳನ್ನು ಆರ್ಥಿಕ ವರ್ಷದ ಅಂತ್ಯದೊಳಗೆ ಪೂರ್ಣಗೊಳಿಸಿ ಅನುದಾನ ಹಿಂದಿರುಗಿ ಹೋಗದಂತೆ ನಿಗಾವಹಿಸುವಂತೆ ಸೂಚಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರಿಗಿಡದ ಮಾತನಾಡಿ ಮಕ್ಕಳಿಗೆ ನೀಡುವ ಲಸಿಕೆಗಳಾದ  ಪೆಟಾವಾ¯ಟ್ ಮತ್ತು ಡಿ.ಪಿ.ಟಿ. ಯೋಜನೆಯಡಿ ಶೇ 100 ರಷ್ಟು ಹಾಗೂ ಪೊಲೀಯೋ ಲಸಿಕೆ ನೀಡುವಿಕೆಯಲ್ಲಿ ಶೇ 100 ರಷ್ಟು , ಬಿಸಿಜಿ ಲಸಿಕೆ ನೀಡಿಕೆಯಲ್ಲಿ ಶೇ 89 ರಷ್ಟು, ಗರ್ಭಿಣಿಯರಿಗೆ ನೀಡುವ ಲಸಿಕೆ ಯೋಜನೆಯಡಿ ಶೇ 91 ರಷ್ಟು  ಗುರಿ ಸಾಧಿಸಲಾಗಿದೆ. ಅದರಂತೆ  ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ ಹೊಸ ಕ್ಷಯ ರೋಗಿಗಳನ್ನು ಗುರುತಿಸುವಲ್ಲಿ ಶೇ 53 ರಷ್ಟು , ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಕಫ ಪರೀಕ್ಷೆ ಮಾಡುವಲ್ಲಿ ಶೇ. 46 ರಷ್ಟು  ಗುರಿ ಸಾಧಿಸಲಾಗಿದೆ.
ಉದೋಗಿನಿ ಯೋಜನೆಯಡಿ ಶೇ.81, ಕಿರು ಸಾಲ ಯೋಜನೆಯಡಿ ಶೇ.100,ಸಮೃದ್ಧಿ ಯೋಜನೆಯಡಿ 100,ಚೇತನಾ ಯೋಜನೆಯಡಿ 129 ಲಿಂಗತ್ವ ಅಲ್ಪ ಸಂಖ್ಯಾತ ಪುನರ್ವಸತಿ ಯೋಜನೆಯಡಿ ಶೇ.100,ಧನಶ್ರೀ ಯೋಜನೆಯಡಿ ಶೇ.100 ರಷ್ಟು ಪ್ರಗತಿ ಸಾಧಿಸಿದೆ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸಭೆಗೆ ತಿಳಿಸಿದರು.
ಆಯುಷ್ಯ ಇಲಾಖೆ ಅಧಿಕಾರಿ ಡಾ. ಸುಜಾತ ಪಾಟೀಲ ಮಾತನಾಡಿ ಆಯುಷ್ ಇಲಾಖೆಯು 12 ಆರೋಗ್ಯ ಶಿಬಿರಗಳನ್ನು , 10 ಮನೆ ಮದ್ದು ಕಾರ್ಯಕ್ರಮ, 5 ತಾಲೂಕಾ ಆಯುಷ್ ಸೆಮಿನಾರ್, 3 ಜಿಲ್ಲಾ ಸೆಮಿನಾರ್ ಕೈಗೊಳ್ಳಲಾಗಿದೆ ಎಂದರು.
ಶತಮಾನೋತ್ಸವ ಆಚರಿಸಿದ ಶಾಲೆಗಳು ಸೋರುತ್ತಿದ್ದು ಅವುಗಳ ದುರಸ್ಥಿ ಕಾರ್ಯ ಕೂಡಲೆ ನಡೆಸಬೇಕು  ಎಂದು ಜಿ.ಪಂ ಅಧ್ಯಕ್ಷ  ಈರಪ್ಪ ನಾಡಗೌಡ್ರ ಶಿಕ್ಷಣ ಇಲಾಖೆಗೆ ತಿಳಿಸಿದರು.
ವಿದ್ಯಾರ್ಥಿಗಳಿಗೆ ಕೊವಿಡ್-19 ಹಿನ್ನೆಲೆಯಲ್ಲಿ ಪೂರ್ವ ಮುಂಜಾಗೃತ ಕ್ರಮಗಳನ್ನು ಕೈಗೊಂಡು ವಸತಿ ನಿಲಯಗಳಲ್ಲಿ 70 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಸಿ ಕೊಡಲಾಗಿದೆ. ಪ್ರಸ್ತುತ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ, ಪದವಿ ಪೂರ್ವ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ವಸತಿ ನಿಲಯಗಳಲ್ಲಿ ಉಳಿದುಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ಎಂದು ಮಾಹಿತಿ ನೀಡಿದರು.    ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವಸತಿ ನಿಲಯದಿಂದ ವಂಚಿತರಾಗಬಾರದೆಂದು ಜಿ.ಪಂ. ಅಧ್ಯಕ್ಷ ಈರಪ್ಪ ನಾಡಗೌಡ್ರ ತಿಳಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಮಂಜುಳಾ ಹುಲ್ಲಣ್ಣವರ , ಸ್ಥಾಯಿ ಸಮಿತಿ ಅಧ್ಯಕ್ಷರು, ಜಿಲ್ಲಾ ಮಟ್ಟದ  ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.


Leave a Reply