Gadag

ಜನೆವರಿ 31 ರಂದು  ಜಿಲ್ಲೆಯ ಎಲ್ಲ ಮಕ್ಕಳಿಗೂ ಪೊಲಿಯೋ ಲಸಿಕೆ ನೀಡಿ


ಗದಗ 28:. ಜಿಲ್ಲೆಯಾದ್ಯಂತ ಜ.31ರಿಂದ ಫೆ.03ರ ವರೆಗೆ ಮೊದಲನೇ ಸುತ್ತಿನ ಪಲ್ಸ್ ಪೊಲಿಯೋ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.  ಈ ಲಸಿಕಾ ಅಭಿಯಾನದಲ್ಲಿ ಜಿಲ್ಲೆಯ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಕಡ್ಡಾಯವಾಗಿ ಲಸಿಕೆಯನ್ನು ನೀಡುವಂತೆ  ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚಿಸಿದರು.
ಗದಗ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿಗಳು ಮಾತನಾಡಿದರು. ಜನೆವರಿ 31 ರಂದು ಬೂತ್ ಮಟ್ಟದಲ್ಲಿ  ಪೊಲೀಯೋ ಲಸಿಕಾ ವಿತರಣೆ ನಡೆಯಲಿದೆ.  ನಂತರ ಫೆಬ್ರುವರಿ 1 ರಿಂದ 3 ರವರೆಗೆ ಮನೆ ಮನೆಗೆ ಆರೋಗ್ಯ ಇಲಾಖೆ ಸಿಬ್ಬಂದಿಗಳು ತೆರಳಿ ಲಸಿಕೆ ನೀಡುವ ಪ್ರಕ್ರಿಯೆ ನಡೆಯಲಿದೆ. ನವಜಾತ ಶಿಶುವಿನಿಂದ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಮರೆಯದೇ ಪೊಲೀಯೋ ಹನಿ ಹಾಕಿಸಬೇಕೆಂದು ತಿಳಿಸಿದರು.
ಪೊಲೀಯೋ ಲಸಿಕಾ ಕಾರ್ಯಕ್ರಮದಲ್ಲಿ ಲಸಿಕೆ ನೀಡುವ ಸಿಬ್ಬಂದಿಗಳು ಸೇರಿದಂತೆ ಸಾರ್ವಜನಿಕರೆಲ್ಲರೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸುವುದರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಬೇಕು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ ಮಾತನಾಡಿ ಲಸಿಕಾ ಅಭಿಯಾನದಲ್ಲಿ ವಲಸೆ ಕಾರ್ಮಿಕರ ಮಕ್ಕಳು , ಸ್ಲಂ ಪ್ರದೇಶಗಳಲ್ಲಿನ ಮಕ್ಕಳಿಗೂ ಸಹ ಪೊಲಿಯೋ ಲಸಿಕೆ ನೀಡಬೇಕು. ಜಿಲ್ಲೆಯ ಪ್ರತಿ ಮಗುವು ಲಸಿಕೆಯನ್ನು ಪಡೆಯುವಂತೆ ನಿಗಾ ವಹಿಸಬೇಕೆಂದು ಸೂಚಿಸಿದರು. ಅಲ್ಲದೇ ಲಸಿಕಾ ಕಾರ್ಯಕ್ರಮ ಮುಗಿಯುವವರೆಗೆ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸದಂತೆ ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರಿಗಿಡದ ಮಾತನಾಡಿ  ಜಿಲ್ಲೆಯಲ್ಲಿ ಒಟ್ಟು 130666 ರಷ್ಟು 5 ವರ್ಷದೊಳಗಿನ ಮಕ್ಕಳಿದ್ದು ಅವರೆಲ್ಲರಿಗೂ ಅಂಗನವಾಡಿ , ಆಸ್ಪತ್ರೆ, ದೇವಸ್ಥಾನ, ಬಸ್ ನಿಲ್ದಾಣ ಸೇರಿದಂತೆ ಇನ್ನಿತರ ಕಡೆ ಒಟ್ಟು  705 ಪೋಲಿಯೊ ಲಸಿಕೆ ಬೂತ್‍ಗಳನ್ನು ಮಾಡಲಾಗಿದೆ.  146 ಸುಪರ್ ವೈಜರ್ ಗಳನ್ನು , 27 ಟ್ರಾನ್ಸಿಟ್ ಪಾಯಿಂಟ್ ಗಳನ್ನು ಗುರುತಿಸಲಾಗಿದೆ.  ಅಲ್ಲದೇ ಸುಗಮ ಲಸಿಕಾ ಕಾರ್ಯಕ್ಕಾಗಿ 10 ಲಸಿಕಾ ಮೊಬೈಲ್ ಟೀಮ್ ಗಳನ್ನು ನಿಯೋಜಿಸಲಾಗಿದ್ದು ಅವರೆಲ್ಲರೂ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು ತಿಳಿಸಲಾಗಿದೆ. ಅಲ್ಲದೇ ಲಸಿಕಾ ಅಭಿಯಾನ ಯಶಸ್ವಿಗಾಗಿ 50 ವಾಹನಗಳ ಅಗತ್ಯವಿದ್ದು ಈ ಕುರಿತು ಅಗತ್ಯ ಕ್ರಮ ವಹಿಸಲಾಗುತ್ತಿದೆ. ಒಟ್ಟಾರೆ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು ಅಗತ್ಯದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಡಾ.ಮುಕುಂದ ಗಲಗಲಿ ಎಸ್.ಎಮ್.ಓ ಅವರು ಪೊಲಿಯೋ ಕಾರ್ಯಕ್ರಮದ ಹೊಸ ಮಾರ್ಗಸೂಚಿಗಳ ಬಗ್ಗೆ ತಿಳಿಸಿದರು.  ಸಭೆಯಲ್ಲಿ ಪೋಲಿಯೋ ಲಸಿಕೆ ಜಾಗೃತಿ ಮೂಡಿಸುವ ಬಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ|| ಜಿ.ಎಸ್. ಪಲ್ಲೇದ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ವೈ.ಕೆ. ಭಜಂತ್ರಿ, ಡಾ. ಅರುಂಧತಿ ಕುಲಕರ್ಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಉಸ್ಮಾನ್ ಎ, ನಗರಸಭೆ ಪೌರಾಯುಕ್ತ ರಮೇಶ ಜಾಧವ,ಎಲ್ಲಾ ತಾಲೂಕಾ ಆರೋಗ್ಯಾಧಿಕಾರಿಗಳು, ವೈದ್ಯಾಧಿಕಾರಿಗಳು, ಉಮೇಶ ಕರಮುಡಿ, ಪುಷ್ಪಾ ಪಾಟೀಲ, ರೂಪಸೇನ ಚವ್ಹಾಣ ಸೇರಿದಂತೆ ವಿವಿಧಎಲ್ಲಾ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು  ಭಾಗವಹಿಸಿದ್ದರು.


Leave a Reply