Belagavi

ದೇಶ ರಕ್ಷಣೆ ಮಾಡಬೇಕಿದ್ದ ಸೈನಿಕ ಪೋಲೀಸರ ಅತಿಥಿ…!


ಬೆಳಗಾವಿ : ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ತಾನು ಪ್ರೀತಿಸಿದ್ದ ಯುವತಿಯ ಜತೆ ಮದುವೆಯಾಗಲು ನಿರಾಕರಿಸುತ್ತಾರೆ ಎಂಬ ಕಾರಣಕ್ಕೆ ಸೈನಿಕನೊಬ್ಬ ತನ್ನ ಪ್ರೇಯಸಿಯನ್ನೇ ವಿಷವಿಟ್ಟು ಕೊಂದಿರುವ ಘಟನೆ ನಡೆದಿದೆ.

ಯುವತಿ ದೀಪಾಲಿ ಪವಾರ್ (25) ತನ್ನ ಪ್ರೇಮಿಯಿಂದ ಕೊಲೆಗೀಡಾದ ದುರ್ದೈವಿ.ಸೈನಿಕ ವೃತ್ತಿಯನ್ನು ಮಾಡುತ್ತಿದ್ದ ರಾಜು ಕುರಬರ ಎಂಬಾತನೇ ಪ್ರೇಯಸಿಯನ್ನು ಕೊಂದ ಆರೋಪಿಯಾಗಿದ್ದಾನೆ.
——————
ಭಾರತೀಯ ಸೇನೆಯಲ್ಲಿದ್ದ ರಾಜು ಹಾಗೂ ದೀಪಾಲಿ ಬಾಲ್ಯದಿಂದ ಪರಿಚಿತರಾಗಿದ್ದು ಹಲವಾರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಈ ಪ್ರೀತಿಯ ವಿಚಾರ ರಾಜು ಅವರ ಮನೆಯವರಿಗೆ ಅರಿವಿರಲಿಲ್ಲ. ಅದಕ್ಕಾಗಿ ಅವನಿಗೆ ಸೂಕ್ತ ಕನ್ಯೆಯನ್ನು ಕಂಡು ವಿವಾಹ ಮಾಡಲು ಅವರು ನಿರ್ಧರಿಸಿದ್ದಾರೆ.
ಆದರೆ ರಾಜು ತಾನು ದೀಪಾಲಿಯನ್ನು ಪ್ರೀತಿಸುವುದಾಗಿ ಮನೆಯವರಿಗೆ ತಿಳಿಸಿ ಮದುವೆಯಾದರೆ ಆಕೆಯನ್ನೇ ಆಗುವುದಾಗಿ ಹೇಳಿದ್ದಾನೆ.
ಆದರೆ ರಾಜು ಹಾಗೂ ದೀಪಾಲಿ ಬೇರೆ ಬೇರೆ ಜಾತಿಯವರಾಗಿದ್ದ ಕಾರಣ ರಾಜು ಅವರ ಮನೆಯಲ್ಲಿ ಆತನ ಪ್ರೀತಿಗೆ ಒಪ್ಪಿಗೆ ಸಿಕ್ಕಿಲ್ಲ. ಮಾತ್ರವಲ್ಲದೆ ಬೇರೊಂದು ಯುವತಿಯೊಂದಿಗೆ ಆತನಿಗೆ ವಿವಾಹ ನಿಶ್ಚಿತಾರ್ಥ ಸಹ ಮಾಡಿಸಿದ್ದಾರೆ. ಅದರಿಂದ ಕೋಪಿತನಾದ ರಾಜು ಪ್ರೇಯಸಿ ದೀಪಾಲಿಗೆ ಕರೆ ಮಾಡಿ “ನಮ್ಮ ಮನೆಯಲ್ಲಿ ನಮ್ಮಿಬ್ಬರ ಮದುವೆಗೆ ಒಪ್ಪುತ್ತಿಲ್ಲ ಹಾಗಾಗಿ ನಾವಿಬ್ಬರೂ ರಿಜಿಸ್ಟರ್ ವಿವಾಹವಾಗೋಣ ಬಾ” ಎಂದು ಕರೆಸಿಕೊಂಡಿದ್ದಾನೆ. ಅಲ್ಲಿ ಆಕೆಗೆ ತನ್ನ ಮನೆಯ ಪರಿಸ್ಥಿತಿ ಹೇಳಿಕೊಂಡು ಅವಳನ್ನು ಸಂಭಾಳಿಸಲು ಪ್ರಯತ್ನಿಸಿದ್ದಾನೆ. ಆದರೆ ದೀಪಾಲಿ ತಾನು ರಾಜುವಿನೊಂದಿಗೆ ವಿವಾಹವಾಗಲೇ ಬೇಕೆಂದು ಹಠ ಹಿಡಿದ್ದಾಳೆ.
ಆ ನಂತರ ಇಬ್ಬರೂ ಹೋಟೆಲ್ ಗೆ ಹೋಗಿ ಊಟ ಮಾಡಿದ್ದಾರೆ. ಊಟದ ನಂತರ ತಂಪು ಪಾನೀಯಕ್ಕೆ ವಿಷ ಬೆರೆಸಿ ರಾಜು ಆಕೆಗೆ ಕೊಟ್ಟಿದ್ದಾನೆ.ಅದನ್ನು ಸೇವಿಸಿದ್ದ ದೀಪಾಲಿ ಕೆಲ ಸಮಯದಲ್ಲೇ ಅಸ್ವಸ್ಥಳಾಗಿದ್ದು ರಾಜು ತಾನೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ಚಿಕಿತ್ಸೆ ಫಲಿಸದೆ ಯುವತಿ ಜನವರಿ 24ರಂದು ಸಾವನ್ನಪ್ಪಿದ್ದಾಳೆ. ಇತ್ತ ಪ್ರೇಯಸಿ ಸಾವನ್ನಪ್ಪುತ್ತಿದ್ದಂತೆ ಆರೋಪಿ ರಾಜು ನಾಪತ್ತೆಯಾಗಿದ್ದ.
ಪೋಲೀಸರ ತನಿಖೆ ಬಳಿಕ ಇದೀಗ ರಾಜುವೇ ದೀಪಾಲಿಗೆ ವಿಷವಿಕ್ಕಿ ಕೊಂದಿರುವುದು ಗೊತ್ತಾಗಿದೆ. ಇದೀಗ ಗಡಿಯಲ್ಲಿ ದೇಶ ರಕ್ಷಣೆ ಮಾಡಬೇಕಿದ್ದ ಸೈನಿಕ ಪೋಲೀಸರ ಅತಿಥಿಯಾಗಿ ಜೈಲು ಸೇರಿದ್ದಾನೆ. ದೀಪಾಲಿ ಕುಟುಂಬ ಮಗಳನ್ನು ಕಳೆದುಕೊಂಡು ಕಣ್ಣೀರ ಕೋಡಿ ಹರಿಸಿದೆ.ಹೆತ್ತವರ ದುಃಖ ಮುಗಿಲು ಮುಟ್ಟಿದೆ.

 


Leave a Reply