Belagavi

ಕುಂದಾನಗರಿಯಲ್ಲಿ ಸೇನಾ ಭರ್ತಿ ರ್ಯಾಲಿ…..


 

ಬೆಳಗಾವಿ -ಆರು ಜಿಲ್ಲೆಗಳಿಗೆ ಸಂಬಂಧಿಸಿದಂತೆ ಸೇನಾ ಭರ್ತಿ ಆಯ್ಕೆ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಡೆಸಲಾಗುತ್ತಿದೆ. ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಸ್ಥಳದಲ್ಲಿಯೇ ಪ್ರಮಾಣಪತ್ರ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.

ಇಲ್ಲಿನ ವಿಟಿಯು ಕ್ರೀಡಾಂಗಣದಲ್ಲಿ ಗುರುವಾರ (ಫೆ.4) ದಿಂದ ಆರಂಭಗೊಂಡ ಸೇನಾ ಭರ್ತಿ ರ್ಯಾಲಿಗೆ ಹಸಿರುನಿಶಾನೆ ತೋರಿಸಿ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ನೇಮಕಾತಿ ರ್ಯಾಲಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ನೆರವು ನೀಡಲಾಗುತ್ತಿದೆ. ಬೆಳಗಾವಿ ಸೇರಿದಂತೆ ಆರು ಜಿಲ್ಲೆಗಳ ಅಭ್ಯರ್ಥಿಗಳು ಆನ್ ಲೈನ್ ನೋಂದಣಿ ಮಾಡಿದ್ದರು.

ರ್ಯಾಲಿಗೆ ಒಟ್ಟು 62,217 ಅಭ್ಯರ್ಥಿಗಳ ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ ಬೆಳಗಾವಿ ಜಿಲ್ಲೆಯ 51,423 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು.

ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ಮೊಬೈಲ್ ಶೌಚಾಲಯ ಸೇರಿದಂತೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ.
ಪೊಲೀಸ್ ಭದ್ರತೆ ಒದಗಿಸಿದ್ದು, ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣದಿಂದ ವಿಟಿಯು ಗೆ ವಿಶೇಷ ಬಸ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ದಾಖಲೆಯ ನೋಂದಣಿ:

ಸೇನೆಯ ಸೇರ್ಪಡೆಗೆ ಕೋವಿಡ್-೧೯ ಪರಿಸ್ಥಿತಿಯಲ್ಲಿ ದಾಖಲೆಯ ಸಂಖ್ಯೆಯ ಅಭ್ಯರ್ಥಿಗಳು ಹೆಸರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಹಿರೇಮಠ ತಿಳಿಸಿದರು.

ಬೆಳಗಾವಿ, ಬೀದರ್, ಗುಲ್ಬರ್ಗ, ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳ ಅಭರ್ಥಿಗಳು ಭಾಗವಹಿಸಿದ್ದಾರೆ. ಕರ್ನಾಟಕದಲ್ಲಿ ಅತೀ ಹೆಚ್ಚು ಜನರು ಸೇನೆಗೆ ಸೇರಲು ಉತ್ಸುಕರಾಗಿದ್ದಾರೆ.
ಅಂದಾಜು ಐದು ಸಾವಿರ ಜನರನ್ನು ಆಯ್ಕೆ ಮಾಡಲಾಗುವುದು ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅಭ್ಯರ್ಥಿಗಳಿಗೆ ಪೀರನವಾಡಿಯ ಮೂರು ಕಲ್ಯಾಣಮಂಟಪಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.
ಸಾವಿರಾರು ಅಭ್ಯರ್ಥಿಗಳು ಅತ್ಯುತ್ಸಾಹದಿಂದ ಭಾಗವಹಿಸಿದ್ದಾರೆ. ಎಲ್ಲರಲ್ಲೂ ದೇಶಸೇವೆಯ ಮನೋಭಾವ ಎದ್ದು ಕಾಣುತ್ತಿದೆ ಎಂದು ಜಿಲ್ಲಾಧಿಕಾರಿ ಸಂತಸ ವ್ಯಕ್ತಪಡಿಸಿದರು.


Leave a Reply