Belagavi

ಕೃಷಿ ವಿಚಾರ ಸಂಕಿರಣ ಹಾಗೂ ಗೋದಿ ಬೆಳೆ ಕ್ಷೇತ್ರೋತ್ಸವ

ಬೆಳಗಾವಿ ೧೮: ಮತ್ತಿಕೊಪ್ಪದ ಐಸಿಎಆರ್-ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರ, ಇಂಡಿಯನ್ ಫಾರ್ಮ್ರ್ಸ್ ಫರ್ಟಿಲೈಸರ್
ಕೋ-ಆಪರೇಟಿವ್ ಲಿಮಿಟೆಡ್ ಹಾಗೂ ಸರದಾರ ವ್ಹಿ. ಜಿ. ಫೌಂಡೇಶನ್, ಚಚಡಿ ಇವರ ಸಹಯೋಗದಲ್ಲಿ ಕೃಷಿ ವಿಚಾರ ಸಂಕಿರಣ ಹಾಗೂ ಗೋದಿ ಬೆಳೆ ಕ್ಷೇತ್ರೋತ್ಸವವನ್ನು ಸವದತ್ತಿ ತಾಲೂಕಿನ ಚಚಡಿ ಗ್ರಾಮದ ದೇಸಾಯಿ ವಾಡೆಯಲ್ಲಿ ನಡೆಸಲಾಯಿತು. ಕೃಷಿ ವಿಜ್ಞಾನ ಕೇಂದ್ರದ ಕಾರ್ಯಾಧ್ಯಕ್ಷರಾದ ಶ್ರೀ. ಬಿ. ಆರ್. ಪಾಟೀಲ ಇವರು ಸಭೆಗೆ ಆಗಮಿಸಿದ ಶ್ರೀ ಶ್ರೀ ಶ್ರೀ ಪರಮಪೂಜ್ಯ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಜಿಯವರನ್ನು ಸ್ವಾಗತಿಸಿದರು, ಕೃಷಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲು ಕಾರಣೀಭೂತರಾದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರ ಅನುಪಸ್ಥಿತಿಯಲ್ಲಿಯೂ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು ಹಾಗೂ ಇನ್ನಿತರ ಎಲ್ಲ ಗಣ್ಯಮಾಣ್ಯರನ್ನು ಸ್ವಾಗತಕೋರಿ ಪ್ರಾಸ್ತಾವಿಕವಾಗಿ ಮಾತನಾಡಿ ಬೆಳಗಾವಿ ಜಿಲ್ಲೆಯ ರೈತರಿಗೆ ನೂತನ ಕೃಷಿ ತಂತ್ರಜ್ಞಾನಗಳನ್ನು ತಿಳಿಯ ಪಡಿಸಿ ಈ ಭಾಗದಲ್ಲಿ ಕೃಷಿ ಅಭಿವೃದ್ಧಿಗೋಸ್ಕರ ಕೆಎಲ್‌ಇ ಸಂಸ್ಥೆಯು ಕೇಂದ್ರ ಸರ್ಕಾರದ ಅನುಮತಿಯೊಂದಿಗೆ ಮತ್ತಿಕೊಪ್ಪದಲ್ಲಿ ಕೃಷಿ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕೃಷಿ ವಿಜ್ಞಾನ ಕೇಂದ್ರವು ಅಲ್ಪಾವಧಿಯಲ್ಲಿ ಉತ್ತಮ ಸಾಧನೆಗೈದು ಈ ಭಾಗದ ರೈತರಿಗೆ ಸೇವೆಯನ್ನು ಸಲ್ಲಿಸುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ ಗೋಧಿಯನ್ನು ಅಧಿಕ ಕ್ಷೇತ್ರದಲ್ಲಿ ಬೆಳೆಯಲಾಗುತ್ತಿದೆ. ಈ ಬೆಳೆಯಲ್ಲಿ ಆವಿಷ್ಕಾರಗೊಳ್ಳುತ್ತಿರುವ ಹೊಸ ತಳಿಗಳ ಹಾಗೂ ತಂತ್ರಜ್ಞಾನದ ಮಾಹಿತಿಯನ್ನು ಈ ಭಾಗದ ರೈತರಿಗೆ ಪರಿಚಯಿಸಲು ಈ ಕೃಷಿ ವಿಚಾರ ಸಂಕಿರಣ ಹಾಗೂ ಗೋದಿ ಬೆಳೆಯ ಕ್ಷೇತ್ರೋತ್ಸವವÀÀನ್ನು ಇಲ್ಲಿ ಆಯೋಜಿಸಿರುವುದು ಮಹತ್ವದ್ದಾಗಿದೆ. ಗೋದಿಯಲ್ಲಿ ವಿವಿಧ ತಳಿಗಳ ಪ್ರಯೋಗ ನಡೆಯುತ್ತಿದ್ದು, ಕೃಷಿ ವಿಜ್ಞಾನ ಕೇಂದ್ರ ಇಲ್ಲಿ ಯಶಸ್ಸು ಕಂಡ ತಳಿಯನ್ನು ರೈತರಿಗೆ ಪರಿಚಯಿಸುವ ಕೆಲಸವನ್ನು ಮಾಡುತ್ತದೆ.
ಕಾಡಾ ಅಧ್ಯಕ್ಷರಾದ ಡಾ. ವಿಶ್ವನಾಥ ಪಾಟೀಲ ಅವರು ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿದರು. ನಂತರ ಮಾತನಾಡಿದ ಅವರು ಕೃಷಿಯು ಶ್ರೇಷ್ಠ ಕಾಯಕವಾಗಿದ್ದು, ಇದನ್ನು ಗೌರವಿಸಬೇಕು, ಕೃಷಿ ಕಾಯಕದ ಬಗ್ಗೆ ಎಂದು ಕೀಳರಿಮೆ ಹೊಂದಬಾರದು. ಎಲ್ಲ ಕಾಯಕದ ಮುಂದೆ ಕೃಷಿ ಕಾಯಕವನ್ನು ಪ್ರೀತಿಸಬೇಕು ಎಂದು ಹೇಳಿದರು.
ಶ್ರೀ ಶ್ರೀ ಶ್ರೀ ಪರಮಪೂಜ್ಯ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ತಮ್ಮ ಆರ್ಶೀವಚನದಲ್ಲಿ ಇಂದಿನ ಶಿಕ್ಷಣ ಪದ್ಧತಿ ರೈತರ ಮಕ್ಕಳನ್ನು ಕೃಷಿಯಿಂದ ವಿಮುಕ್ತಿಗೊಳಿಸಿ ಗುಲಾಮರನ್ನಾಗಿಸುತ್ತಿರುವುದು ವಿಷಾದಕರ ಸಂಗತಿಯಾಗಿದೆ. ರೈತರು ಭೂಮಿಯ ಹದ ನೋಡಿ ಪರಿಶ್ರಮದಿಂದ ಕೃಷಿ ಮಾಡುವ ರೈತರೆ ನಿಜವಾದ ಕೃಷಿ ವಿಜ್ಞಾನಿಗಳು. ಒಕ್ಕಲುತನ ಮಾಡುವ ಯುವಕರಿಗೆ ಹೆಣ್ಣು ಕೊಡಲು ಹಿಂಜರಿಯುವ ಈ ದಿನಮಾನಗಳಲ್ಲಿ ಪ್ರತಿಯೊಬ್ಬ ತಾಯಿಯು ಅರ್ಥಮಾಡಿಕೊಳ್ಳಬೇಕು. ರೈತ ಕಷ್ಟಪಟ್ಟು ದುಡಿದಾಗಲೆ ಪ್ರಪಂಚಕ್ಕೆ ಅನ್ನ ಒದಗಿಸಲು ಸಾಧ್ಯ. ಚಿನ್ನ, ಬೆಳ್ಳಿ, ಹಣ, ಸಂಪತ್ತು, ಐಶ್ವರ್ಯ ಇಲ್ಲದಿದ್ದರೂ ಸಮಾಜದಲ್ಲಿ ಬದುಕಬಹುದು. ಅನ್ನವಿಲ್ಲದಿದ್ದರೆ ಬದುಕಲು ಸಾಧ್ಯವಿಲ್ಲವೆಂದರು. ವಿಜ್ಞಾನ ಎಷ್ಟೇ ಮುಂದುವರೆದರೂ ಪ್ರಯೋಗಾಲಯದಲ್ಲಿ ಒಂದು ಅಕ್ಕಿಯ ಕಾಳು ತಯಾರಿಸಲು ಸಾಧ್ಯವಿಲ್ಲ. ಅದನ್ನು ಭೂಮಿಯಲ್ಲಿಯೇ ಬೆಳೆಯಬೇಕು. ಇದರಿಂದ ರೈತರನ್ನು ಗೌರವದಿಂದ ಕಾಣಬೇಕು ಎಂದರು. ಭೂಮಿತಾಯಿಯ ಮಡಿಲಿಗೆ ಅತಿಯಾದ ರಾಸಾಯನಿಕಗಳನ್ನು ಸೇರಿಸಿ ಸಸ್ಯ ಸಂಕುಲ ಹಾಳು ಮಾಡುತ್ತಿರುವುದರಿಂದ ರೈತ ಸಂಕಷ್ಟಕ್ಕೆ ಸಿಲುಕುತ್ತಿದ್ದಾನೆ. ಕಡಿಮೆ ಖರ್ಚಿನ ಸಾವಯವ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯದೊಂದಿಗೆ ಸ್ಥಿತಿವಂತರಾಗಿ ಜೀವನಸಾಗಿಸಿ ಎಂದರು. ಹೆಣ್ಣು ಮಕ್ಕಳು ಶಿಕ್ಷಣವಂತರಾಗಿ ಆದರೆ ನಗರವಾಸಿಯಾಗಬಾರದು. ಕೃಷಿ ಮಾಡುವವರು ತಮ್ಮ ಕಾಯಕದ ಬಗ್ಗೆ ಕೀಳರಿಮೆ ಹೊಂದಬಾರದು ಎಂದು ಅಭಿಪ್ರಾಯಪಟ್ಟರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಪತಿ ಡಾ. ಆರ್. ಆರ್. ಹಂಚಿನಾಳರವರು ಮಾತನಾಡಿ, ಬೆಳಗಾವಿ ಜಿಲ್ಲೆಯಲ್ಲಿ ಗೋದಿಯನ್ನು ಅಧಿಕ ಕ್ಷೇತ್ರದಲ್ಲಿ ಬೆಳೆಯಲಾಗುತ್ತಿದ್ದು, ಪೌಷ್ಟಿಕಯುಕ್ತ ಹಾಗೂ ಈ ಭಾಗಕ್ಕೆ ಸೂಕ್ತವಾದ ಅಧಿಕ ಇಳುವರಿ ನೀಡುವ ತಳಿಗಳ ಕ್ಷೇತ್ರ ಪ್ರಯೋಗ ನಡೆಯುತ್ತಿದ್ದು, ಉತ್ತಮವಾಗಿ ಹೊರ ಹೊಮ್ಮುವ ತಳಿಗಳನ್ನು ಆಯ್ಕೆ ಮಾಡಿ ಕೃಷಿ ವಿಜ್ಞಾನ ಕೇಂದ್ರದಿAದ ಬೀಜೋತ್ಪಾದನೆ ಕೈಗೊಂಡು ರೈತರಿಗೆ ಒದಗಿಸಲಾಗುವುದು ಎಂದರು.
ಕ್ಷೇತ್ರೊತ್ಸವದಲ್ಲಿ üಯುಎಎಸ್-೩೭೫, ಯುಎಎಸ್-೩೦೪, ಡಿಬಿಡಬ್ಲೂ-೯೩, ಡಿಬಿಡಬ್ಲೂ-೧೬೮ ಹಾಗೂ ಎಂಎಸಿಎಸ್-೬೪೭೮ ಗೋದಿ ತಳಿಗಳ ಪರೀಕ್ಷಾ ತಾಕುಗಳಿಗೆ ಗಣ್ಯರು ಹಾಗೂ ರೈತರು ಭೇಟಿ ನೀಡಿ ವಿಕ್ಷೀಸಿದರು. ಕೃಷಿ ವಿಚಾರ ಸಂಕಿರಣದಲ್ಲಿ ಬೆಳಗಾವಿ, ಗದಗ ಹಾಗೂ ಧಾರವಾಡ ಜಿಲ್ಲೆಯಲ್ಲಿ ಕೃಷಿಯಲ್ಲಿ ವಿಶಿಷ್ಟ ಸಾಧನೆಗೈದ ೪ ಕೃಷಿ ಮಹಿಳೆಯರನ್ನು ಹಾಗೂ ೧೫ ರೈತರನ್ನು ಸತ್ಕರಿಸಿ ಪ್ರಶಸ್ತಿ ನೀಡಲಾಯಿತು.
ಕೆಎಲ್‌ಇ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಾಧ್ಯಕ್ಷರಾದ ಶ್ರೀ. ಬಿ. ಆರ್. ಪಾಟೀಲ ಸ್ವಾಗತಿಸಿದರು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಎಸ್. ಎಮ್. ವಾರದ ಶ್ರೀ ಶ್ರೀ ಶ್ರೀ ಪರಮಪೂಜ್ಯ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳ ಕಿರುಪರಿಚಯ ನೀಡಿದರು. ವೃಷಭಕುಮಾರ ಚರಲಿಂಗಮಠ ನಿರೂಪಿಸಿದರು.

Leave a Reply

Your email address will not be published. Required fields are marked *

Back to top button

Adblock Detected

Please consider supporting us by disabling your ad blocker