Ballary

ಬಳ್ಳಾರಿ : ವಿಮ್ಸ್, ಜಿಲ್ಲಾಸ್ಪತ್ರೆ ಸೇರಿ 8 ಕಡೆ‌ 200 ಜನರಿಗೆ ಲಸಿಕಾ ತಾಲೀಮು


ಬಳ್ಳಾರಿ, ಜ.08 : ಕೋವಿಡ್ ಲಸಿಕಾ ಅಭಿಯಾನದ ಯಶಸ್ವಿಗೆ ಪೂರ್ವಭಾವಿಯಾಗಿ ಮತ್ತು ಕೊರೊನಾ ಲಸಿಕೆ ವಿತರಣೆ ವ್ಯವಸ್ಥಿತವಾಗಿ ನೆರವೇರಿಸುವ ಉದ್ದೇಶದಿಂದ ಬಳ್ಳಾರಿಯ ವಿಮ್ಸ್,ಜಿಲ್ಲಾಸ್ಪತ್ರೆ ಸೇರಿದಂತೆ 8ಕಡೆ ಕೋವಿಡ್ ಲಸಿಕಾ ತಾಲೀಮು ಶುಕ್ರವಾರ ನಡೆಯಿತು.
ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ವಿಮ್ಸ್), ಜಿಲ್ಲಾ ಆಸ್ಪತ್ರೆ, ಸಿರಗುಪ್ಪ ಸಾರ್ವಜನಿಕ ಆಸ್ಪತ್ರೆ, ಮೋಕಾ ಸಮುದಾಯ ಆರೋಗ್ಯ ಕೇಂದ್ರ, ಮಿಲ್ಲರಪೇಟೆ ನಗರ ಆರೋಗ್ಯ ಕೇಂದ್ರ, ಚೆಳಗುರ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರ,ಜಿಂದಾಲ್ ಸಂಜೀವಿನಿ ಆಸ್ಪತ್ರೆ, ಹೊಸಪೇಟೆಯಲ್ಲಿರುವ ಟಿಎಂಎಇ ಆಯುರ್ವೇದಿಕ್ ಮೇಡಿಕಲ್ ಕಾಲೇಜುಗಳಲ್ಲಿ ಕೋವಿಡ್ ಲಸಿಕಾ ತಾಲೀಮು ನಡೆಯಿತು.
ಈ ತಾಲೀಮುನಲ್ಲಿ ಪ್ರತಿ ಆಸ್ಪತ್ರೆಗಳಲ್ಲಿ 25ಜನರಂತೆ ಒಟ್ಟು 200ಜನರಿಗೆ ಲಸಿಕೆ ನೀಡುವ ತಾಲೀಮು ನಡೆಸಲಾಯಿತು.
ಈ ಆಸ್ಪತ್ರೆಗಳಲ್ಲಿ ಬೆಳಗ್ಗೆ 9ರಿಂದ ಆರಂಭವಾಗಿ ಸಂಜೆಯವರೆಗೆ ನಡೆಯಿತು.
ವಿಮ್ಸ್ ಆಸ್ಪತ್ರೆಯ ಬಿ.ಸಿ.ರಾಯ್ ಸಭಾಂಗಣದಲ್ಲಿ ನಡೆದ ಕೋವಿಡ್ ಲಸಿಕಾ ತಾಲೀಮು ಕಾರ್ಯಕ್ರಮಕ್ಕೆ ವಿಮ್ಸ್ ನಿರ್ದೇಶಕ‌ ಡಾ.ಗಂಗಾಧರ ಗೌಡ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೋವಿಡ್-19 ಡ್ರೈ ರನ್ ವ್ಯಾಕ್ಸಿನ್ ಅಭಿಯಾನದ ಅಡಿಯಲ್ಲಿ ಆರೋಗ್ಯ ಸೇವೆ ಒದಗಿಸುವ ಎಲ್ಲಾ ಹಂತದ ಸಿಬ್ಬಂದಿಯವರು, ಅಧಿಕಾರಿಗಳು ಲಸಿಕೆ ಪಡೆದುಕೊಂಡು ಸರ್ಕಾರದ ಪ್ರಯತ್ನಕ್ಕೆ ಕೈಜೋಡಿಸಬೇಕು ಎಂದರು.
ಕಳೆದ ಮಾರ್ಚ್ ನಿಂದ ಇಡೀ ಜಗತ್ತು ಅನುಭವಿಸಿದ ಯಾತನೆಯನ್ನು ದೂರಮಾಡಲು ತಾವೆಲ್ಲರೂ ಸಹಕರಿಸಬೇಕು ಮತ್ತು ಸರ್ಕಾರದ ನಿರ್ಧೇಶನದಂತೆ ತಾಂತ್ರಿಕವಾಗಿ ಎಲ್ಲ ಸಿದ್ದತೆಯೊಂದಿಗೆ ಕೈಗೊಳ್ಳುತ್ತಿರುವ ಇಂದಿನ ಕಾರ್ಯವನ್ನು ಯಶಸ್ವಿಗೊಳಿಸಲು ಕರೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕಲ್ಯಾಣಾಧಿಕಾರಿಗಳ ಡಾ. ಎಚ್ .ಎಲ್. ಜನಾರ್ಧನ್ ಅವರು ಮಾತನಾಡಿ, ಇಂದು ರಾಷ್ಟ್ರದ ಎಲ್ಲ ರಾಜ್ಯಗಳಲ್ಲಿ ಕೋವಿಡ್-19 ಲಸಿಕಾ ಕಾರಣದ ಡ್ರೈ ರನ್ ನಡೆಯುತ್ತಿದ್ದು, ಜಿಲ್ಲೆಯ ಎಂಟು ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡುವ ಎಲ್ಲ ಸಿಬ್ಬಂದಿ ವರ್ಗದವರಿಗೆ ಲಸಿಕೆ ಮಾಹಿತಿ ಹಾಗೂ ಎರಡನೇ ಡೋಸ್‌ ಪಡೆಯುವ ದಿನಾಂಕದ ಮಾಹಿತಿ ನೀಡಲಾಗುತ್ತಿದ್ದು ಎಲ್ಲರೂ ಸಹಕಾರವನ್ನು ನೀಡುವ ಮೂಲಕ ಮುಂದಿನ ದಿನಗಳಲ್ಲಿ ಎಲ್ಲ ಜನತೆಗೆ ಲಸಿಕೆಯನ್ನು ಪಡೆದು ಕೋರೊನಾ ಮುಕ್ತ ಭಾರತ ನಿರ್ಮಾಣ ಮಾಡಲು ಸಹಕರಿಸಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ವೈದ್ಯಕೀಯ ಅಧೀಕ್ಷಕರಾದ ಡಾ.ಮರಿರಾಜ್, ಪ್ರಾಂಶುಪಾಲರಾದ ಡಾ.ಕೃಷ್ಣಸ್ವಾಮಿ ಎಸ್ಎಂಓ ಡಾ ಆರ್‌. ಎಸ್ .ಶ್ರೀಧರ್‌, ಜಿಲ್ಲಾ ಆರ್ ಸಿಎಚ್ ಅಧಿಕಾರಿ ಡಾ.ಅನಿಲ್ ಕುಮಾರ್, ಸಿಇಓ ಚೆನ್ನಪ್ಪ, ತಾಲೂಕ ಆರೋಗ್ಯಾಧಿಕಾರಿ ಡಾ.ಮೋಹನ್ ಕುಮಾರಿ, ಕಮ್ಯೂನಿಟಿ ಮೆಡಿಸಿನ್ ವಿಭಾಗದ ಡಾ. ಬಸವರಾಜ ಎಸ್, ಡಾ.ಅನಂತಾಚಾರ್ಯ, ವಿಭಾಗೀಯ ಆಶಾ ಕಾರ್ಯಕ್ರಮ ಸಂಯೋಜಕರಾದ ಶಾಂತಕುಮಾರ ನಂದಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ್ ಸೇರಿದಂತೆ ವಿಮ್ಸ್‌ನ ವೈದ್ಯಾಧಿಕಾರಿಗಳು, ವೈದ್ಯ ವಿದ್ಯಾರ್ಥಿಗಳು ಹಾಗೂ ಇತರರು ಹಾಜರಿದ್ದರು.
——


Leave a Reply