Sports

ಬಯೋ ಬಬಲ್ ನಿಂದ ಬಳಲಿದ ಕ್ರಿಕೆಟಿಗರು: ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದ ಹ್ಯಾಜಲ್ ವುಡ್

ಬಯೋ ಬಬಲ್ ನಿಂದ ಬಳಲಿದ ಕ್ರಿಕೆಟಿಗರು: ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದ ಹ್ಯಾಜಲ್ ವುಡ್

ಮೆಲ್ಬೋರ್ನ್: 2020ರ ಆರಂಭದಲ್ಲಿ ಕಾಣಿಸಿಕೊಂಡು ಮಾರಕ ಕೊರೊನಾ ಸೋಂಕಿನಿಂದಾಗಿ ಹಲವು ತಿಂಗಳ ಕಾಲ ಕ್ರಿಕೆಟ್ ಚಟುವಟಿಕೆ ಸ್ಥಗಿತಗೊಂಡಿತ್ತು. ಆ ಬಳಿಕ ಕಠಿಣ ಕ್ವಾರೆಂಟೇನ್ ಮತ್ತು ಸುರಕ್ಷತಾ ನಿಯಮಗಳನ್ನೊಳಗೊಂಡ ಬಯೋ ಬಬಲ್ ವ್ಯವಸ್ಥೆ ಜಾರಿಗೆ ಬಂದ ಬಳಿಕ ಕ್ರಿಕೆಟ್ ಟೂರ್ನಿಗಳು ಪುನರಾರಂಭಗೊಂಡಿದ್ದವು. ಆದರೆ ಈ ಬಯೋ ಬಬಲ್ ನಿಂದಾಗಿ ಕ್ರಿಕೆಟಿಗರು ಬಳಲಿದ್ದು, ಮಾನಸಿಕವಾಗಿ ಮತ್ತು ದೈಹಿಕವಾಗಿ ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ. ಬಯೋ ಬಬಲ್ ನ ಬಳಲಿಕೆ ಹಿನ್ನೆಲೆಯಲ್ಲಿ ಸ್ವಲ್ಪ ಕಾಲ ವಿಶ್ರಾಂತಿ ಪಡೆಯಲು ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್ ವುಡ್ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ.

2020 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹ್ಯಾಜಲ್ ವುಡ್ ಅವರನ್ನು 2 ಕೋಟಿ ರೂ.ಗಳಿಗೆ ಖರೀದಿಸಿತ್ತು. ಯುಎಇ ನಲ್ಲಿ ನಡೆದ ಕಳೆದ ಟೂರ್ನಿಯಲ್ಲಿ 3 ಪಂದ್ಯಗಳಲ್ಲಿ ಆಡಿದ್ದರು. ಈ ಬಾರಿ ಅವರನ್ನು ರಿಟೇನ್ ಮಾಡಲಾಗಿತ್ತು. 14 ನೇ ಆವೃತ್ತಿಯ ಐಪಿಎಲ್ ಟೂರ್ನಿ ಏಪ್ರಿಲ್ 9 ರಿಂದ ಮೇ. 30 ರವರೆಗೆ ನಡೆಯಲಿದೆ ಈ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳು ಪ್ರತ್ಯೇಕ ಬಯೋ ಬಬಲ್ ಅನ್ನು ಸ್ಥಾಪಿಸಿಕೊಂಡಿದ್ದು, ಅದರಲ್ಲಿ ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ.

‘ಕಳೆದ 10 ತಿಂಗಳಿಂದ ಬಯೋ ಬಬಲ್ ನಲ್ಲಿ ಆಡುತ್ತಿದ್ದೇನೆ. ಹಲವು ಬಾರಿ ಕ್ವಾರೆಂಟೇನ್ ಗೆ ಒಳಗಾಗಿದ್ದೇನೆ. ಹಾಗಾಗಿ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದು 2 ತಿಂಗಳ ಕಾಲ ಕುಟುಂಬದೊಂದಿಗೆ ಕಾಲ ಕಳೆಯುವ ಮೂಲಕ ವಿಶ್ರಾಂತಿ ಪಡೆಯಲು ಬಯಸಿದ್ದೇನೆ. ನಾನು ಆಸ್ಟ್ರೇಲಿಯಾ ತಂಡಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಹಾಗಾಗಿ ಆಸ್ಟ್ರೇಲಿಯಾ ತಂಡದ ಪರ ಆಡಲು ನಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಮರ್ಥವಾಗಿರಲು ಬಯಸುತ್ತೇನೆ. ಐಪಿಎಲ್ ಟೂರ್ನಿಯ ಬಳಿಕ ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ ವಿರುದ್ಧ, ಬಾಂಗ್ಲಾದೇಶದ ವಿರುದ್ಧ ಸರಣಿಯನ್ನು ಆಡಲಿದೆ. ಬಳಿಕ ಟಿ20 ವಿಶ್ವ ಕಪ್ ನಡೆಯಲಿದ್ದು, ವರ್ಷಾಂತ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಮಹತ್ವದ ಆ್ಯಶಸ್ ಟೂರ್ನಿ ನಡೆಯಲಿದೆ ಎಂದು ಹ್ಯಾಜಲ್ ವುಡ್ ಅವರು  ಅಮೆರಿಕದ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

2020ರ ಜುಲೈನಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ಪ್ರವಾಸಕ್ಕೆ ತೆರಳಿತ್ತು. ಅಂದು ಅವರು ಬಯೋ ಬಬಲ್ ವಾಸ ಆರಂಭಿಸಿದ್ದರು. ಅಲ್ಲಿಂದ ಅವರು ನೇರವಾಗಿ ಯುಎಇಗೆ ಬಂದು ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದರು. ಆ ಬಳಿಕ ಆಸ್ಟ್ರೇಲಿಯಾಗೆ ಮರಳಿದ ಅವರು ಅಡಿಲೇಡ್ ನಲ್ಲಿ 2 ವಾರ ಐಸೊಲೇಷನ್ ನಲ್ಲಿದ್ದು, ಭಾರತ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ ತಂಡದ ಬಯೋ ಬಬಲ್ ಗೆ ಸೇರಿದ್ದರು.

ಆ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಿದಾಗ ಮತ್ತೆ ಬಯೋ ಬಬಲ್ ಗೆ ಸೇರಿದ್ದರು. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯನ್ನು ಮುಂದೂಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಬಯೋ ಬಬಲ್ ನಿಂದ ಹೊರಬಂದಿದ್ದರು. ಈಗ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಬೇಕಿದ್ದರೆ ಮತ್ತೆ ಕ್ವಾರೆಂಟೇನ್ ಗೆ ಒಳಪಟ್ಟು 50 ದಿನ ಬಯೋ ಬಬಲ್ ನಲ್ಲಿರಬೇಕು.

ಟೀಂ ಇಂಡಿಯಾದ ಬಹುತೇಕ ಆಟಗಾರರು 2020ರ ಸೆಪ್ಟೆಂಬರ್ ನಲ್ಲಿ ಆರಂಭವಾದ ಐಪಿಎಲ್ ಟೂರ್ನಿಯಲ್ಲಿ ಬಯೋ ಬಬಲ್ ಗೆ ಸೇರ್ಪಡೆಯಾಗಿದ್ದರು. ಬಳಿಕ ಆಸ್ಟ್ರೇಲಿಯಾ ಪ್ರವಾಸದಲ್ಲಿ ಮತ್ತು ಆ ಬಳಿಕ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಬಯೋ ಬಬಲ್ ನಲ್ಲಿ ಮುಂದುವರೆದಿದ್ದರು. ಇಂಗ್ಲೆಂಡ್ ವಿರುದ್ಧದ ಸರಣಿ ಮುಗಿಯುತ್ತಿದ್ದಂತೆ ಸುಮಾರು 2 ತಿಂಗಳು ನಡೆಯುವ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ತಮ್ಮ ತಂಡಗಳ ಬಯೋ ಬಬಲ್ ಗೆ ಸೇರಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ ಬಳಿಕ ಆಟಗಾರರಿಗೆ ಕೆಲವು ದಿನಗಳ ವಿಶ್ರಾಂತಿ ಮಾತ್ರ ಲಭ್ಯವಾಗಿತ್ತು. ಆ ಬಳಿಕ ಇಂಗ್ಲೆಂಡ್ ವಿರುದ್ಧದ ಸರಣಿ ಆರಂಭವಾಗಿತ್ತು. ಇದನ್ನು ಗಮನಿಸಿದರೆ ಟೀಮ್ ಇಂಡಿಯಾದ ಬಹುತೇಕ ಆಟಗಾರರು ಕಳೆದ ಏಳೆಂಟು ತಿಂಗಳಿಂದ ಬಯೋ ಬಬಲ್ ನಲ್ಲಿ ಕಳೆದಿದ್ದಾರೆ. ಐಪಿಎಲ್ ಟೂರ್ನಿಯ ಬಳಿಕವೂ ಸಹ ಸಾಲು ಸಾಲು ಟೂರ್ನಿಗಳಿದ್ದು, ಟೀಂ ಇಂಡಿಯಾ ಆಟಗಾರರು ಮತ್ತಷ್ಟು ತಿಂಗಳ ಕಾಲ ಮತ್ತೆ ಬಯೋ ಬಬಲ್ ನಲ್ಲೇ ಇರಬೇಕಾದ ಪರಿಸ್ಥಿತಿ ಎದುರಾಗಲಿದೆ.

ಇದೇ ಹಿನ್ನೆಲೆಯಲ್ಲಿ ಇಂಗ್ಲೆಂಡ್ ವಿರುದ್ಧದ ಟೂರ್ನಿಯ ಬಳಿಕ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬಯೋ ಬಬಲ್ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದರು ಮತ್ತು ಭವಿಷ್ಯದಲ್ಲಿ ಪಂದ್ಯಗಳ ವೇಳಾಪಟ್ಟಿ ಸಿದ್ಧಪಡಿಸುವ ವೇಳೆ ಇದನ್ನು ಗಮನದಲ್ಲಿಟ್ಟುಕೊಳ್ಳುವಂತೆ ಐಸಿಸಿ ಮತ್ತು ಬಿಸಿಸಿಐ ಗೆ ಮನವಿ ಮಾಡಿದ್ದರು.

ಹ್ಯಾಜಲ್ ವುಡ್ ಹೊರತುಪಡಿಸಿ ಆಸ್ಟ್ರೇಲಿಯಾದ ಆಲ್ರೌಂಡರ್ ಮಿಚೆಲ್ ಮಾರ್ಷ್ ಸಹ ಬಯೋ ಬಬಲ್ ಕಾರಣದಿಂದಾಗಿಯೇ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಕಳೆದ ಬಾರಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸಿದ್ದ ಮಾರ್ಷ್ ಆರ್ ಸಿ ಬಿ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡು ಟೂರ್ನಿಯಿಂದ ಹೊರ ಹೋಗಿದ್ದರು. ಅವರನ್ನು ಹೈದರಾಬಾದ್ ತಂಡ ಈ ಬಾರಿ 2 ಕೋಟಿ ರೂ. ನೀಡಿ ರಿಟೇನ್ ಮಾಡಿತ್ತು.

ಇವರಿಬ್ಬರನ್ನು ಹೊರತುಪಡಿಸಿದರೆ ಆರ್ ಸಿ ಬಿ ತಂಡವನ್ನು ಪ್ರತಿನಿಧಿಸುವ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಜೋಷ್ ಫಿಲಿಪ್ ಕಳೆದ ತಿಂಗಳು ಐಪಿಎಲ್ ಟೂರ್ನಿಯಿಂದ ಹಿಂದೆ ಸರಿದಿರುವುದಾಗಿ ತಿಳಿಸಿದ್ದರು. ಅವರು ಈ ನಿರ್ಧಾರ ತೆಗೆದುಕೊಳ್ಳಲು ಕಾರಣ ತಿಳಿದು ಬಂದಿಲ್ಲ. ಹಾಗೆಯೇ ಕ್ರಿಕೆಟ್ ನಿಂದ ಸ್ವಲ್ಪ ಕಾಲ ವಿಶ್ರಾಂತಿ ಪಡೆಯುವ ಬಯಕೆಯೊಂದಿಗೆ ಆರ್ ಸಿ ಬಿ ತಂಡದ ಪ್ರಮುಖ ಬೌಲರ್ ಆದ ದಕ್ಷಿಣ ಆಫ್ರಿಕಾದ ಡೆಲ್ ಸ್ಟೇನ್ ಈ ಬಾರಿಯ ಟೂರ್ನಿಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದರು.

ಇಂಗ್ಲೆಂಡ್ ತಂಡದ ಬೌಲರ್ ಮಾರ್ಕ್ ವುಡ್ ಈ ಬಾರಿ ಐಪಿಎಲ್ ಹರಾಜು ಪ್ರಕ್ರಿಯೆಗೆ ಮೊದಲೇ ಈ ಬಾರಿ ಟೂರ್ನಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಘೋಷಿಸುವ ಮೂಲಕ ಹರಾಜಿನಿಂದ ಹಿಂದೆ ಸರಿದಿದ್ದರು. ಈ ಬಾರಿ ವುಡ್ ಗೆ 2 ಕೋಟಿ ರೂ. ಮೂಲ ಬೆಲೆ ನಿರ್ಧರಿಸಲಾಗಿತ್ತು.

 


Leave a Reply