Featured-Article

ಜಗವೇ ಕಲೆಯ ಸಂಗಮ ಕಲೆಯಿಂದ ಬಾಳು ಸಂಭ್ರಮ


(ಏಪ್ರಿಲ್ ೧೫ ವಿಶ್ವಕಲಾ ದಿನಾಚರಣೆಯ ನಿಮಿತ್ಯ ಲೇಖನ)

ಪ್ರಕೃತಿಯೇ ಗುರು, ಗಗನ ಲಿಂಗವು, ಜಗವೇ ಕಲೆಯ ಸಂಗಮ. ಕಲೆಯಿಂದ ಬಾಳು ಸಂಭ್ರಮ ಆ ಬ್ರಹ್ಮ ಬರೆದ ಲೋಕವನ್ನು ನಾವು ಕುಂಚದಿ ಬರೆದೇವು. ಅನುರಕ್ತಿ ತುಂಬಿ ಆನಂದವನ್ನು ಅನುಗಾಲ ನೀಡೇವು. ಕಲ್ಲು, ಮಣ್ಣು, ಕಟ್ಟಿಗೆಯಲ್ಲೂ ನಾನು, ನೀನು ಈ ಭುವಿ ಬಾನಲ್ಲೂ ಕಲೆಯ ಸೊಬಗು ತುಂಬಿದೆ.
ವಾತ್ಸ್ಯಾಯನ ಮುನಿಯ ಕಾಮಶಾಸ್ತ್ರದಲ್ಲಿ ಹೇಳಿದಂತೆ ಏಳನ್ನು ಮಾತ್ರ ಲಲಿತ ಕಲೆಗಳೆಂದು ಉಲ್ಲೇಖಿಸಿದ್ದಾರೆ. ಶೃಂಗಾರ, ಲಾಲಿತ್ಯ, ಮೃದು ಹಾಗೂ ಕೌಶಲ್ಯಯುಕ್ತವಾದುದ್ದನ್ನೇ ಕಲೆಯೆಂದು ಬಣ್ಣಿಸಿದ್ದಾರೆ. ಲಲಿತ ಕಲೆಗಳಲ್ಲಿ ದೃಶ್ಯ ಕಲೆ ಮತ್ತು ಪ್ರದರ್ಶನ ಕಲೆಗಳೆಂದು ಎರಡು ಭಾಗಗಳಾಗಿ ವಿಂಗಡಿಸಿದ್ದಾರೆ. ದೃಶ್ಯಕಲೆಯಲ್ಲಿ ಶೃಂಗಾರರಸ ಮಾತ್ರ ಪ್ರಮುಖವಾಗಿ ಪಾತ್ರ ನಿರ್ವಹಿಸುತ್ತದೆ. ಉಳಿದ ರಸಾನುಭವಗಳು ದೃಶ್ಯಕಲೆಯಲ್ಲಿ ಪಾತ್ರ ನಿರ್ವಹಿಸವುದಿಲ್ಲ ಎಂಬುದು ಕೆಲವರ ಅಭಿಪ್ರಾಯ. ದೃಶ್ಯಕಲೆಗಳಲ್ಲಿಯೂ ನವರಸಗಳು ಮುಖ್ಯವಾದ ಪಾತ್ರ ವಹಿಸುತ್ತದೆ ಎಂಬುದು ಕೆಲವು ವಿದ್ವಾಂಸರ ಅಭಿಪ್ರಾಯ ಪ್ರದರ್ಶನ ಕಲೆಗಳಲ್ಲಿ ಪ್ರಮುಖವಾಗಿರುವ ನವರಸಗಳು ದೃಶ್ಯ ಭಾಷೆಗಳಲ್ಲಿಯೂ ತಮ್ಮ ಪಾತ್ರವನ್ನು ಅಭಿವ್ಯಕ್ತಿಸುತ್ತವೆ ಎಂಬುದು ನನ್ನ ಅಭಿಪ್ರಾಯ. ಏಕೆಂದರೆ ಪ್ರದರ್ಶನ ಕಲೆಗಳಲ್ಲಿ ಕಲಾವಿದ ಮತ್ತು ಪ್ರೇಕ್ಷಕ ಇಬ್ಬರ ಪ್ರತಿಕ್ರಿಯೆ ಸಂಚಾರಶೀಲವಾದರೆ ಅಲ್ಲಿ ನವರಸ ಸರಾಗವಾಗಿ ತಮ್ಮ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಆದರೆ ದೃಶ್ಯ ಭಾಷೆ ಒಂದು ಮೌನ ಭಾಷೆಯಾಗಿರುವುದರಿಂದ ಆ ದೃಶ್ಯ ಭಾಷೆಯಲ್ಲೂ ಅಳು, ಕೋಪ, ಸೌಂದರ್ಯ ಇತ್ಯಾದಿ ರಸಾಸ್ವಾದಗಳು ರಚಿತವಾಗಿರುತ್ತವೆ. ಆದ್ದರಿಂದ ದೃಶ್ಯ ಭಾಷೆಯಲ್ಲೂ ನವರಸದ ಪಾತ್ರ ಮುಖ್ಯವಾಗಿರುವುದು ಎಂಬುದು ನನ್ನ ಅಭಿಪ್ರಾಯ. ದೃಶ್ಯ ಭಾಷೆಯಲ್ಲಿ ಕೆಟ್ಟ ದೃಶ್ಯಗಳನ್ನೂ ನೋಡಿ ಸುಂದರವಾಗಿ ರಚಿಸಿದ್ದಾರೆ ಎಂದರೂ ಸಹ ಅದರ ಭಾವ ರಸಾಸ್ವಾದ ಮನಸ್ಸಿನ ಚಿಂತನೆ ಸಂದರ್ಭವನ್ನೇ ನೆನಪಿಸುತ್ತದೆ. ಪ್ರದರ್ಶನ ಕಲೆಯಲ್ಲೂ ಭಯಾನಕ ದೃಶ್ಯವಿದ್ದರೂ ರಸಗಳಿಂದ ಅನುಭವಿಸಿ ಆ ಕಲೆಯ ಮಾನ್ಯತೆಗೆ ಉದ್ಘಾರವನ್ನೇ ವ್ಯಕ್ತಪಡಿಸುತ್ತೇವೆ. ಆದ್ದರಿಂದ ಕಲೆಗಳಿಗೆ ಸಂಬಂಧಪಟ್ಟಂತೆ ಎಲ್ಲಾ ಲಲಿತ ಕಲೆಗಳಲ್ಲಿ ನವರಸಗಳು ತಮ್ಮ ಸ್ಥಾನವನ್ನು ಪಡೆದುಕೊಂಡಿವೆ ಎಂಬುದು ನನ್ನ ಅಭಿಪ್ರಾಯ.
ಸೌಂದರ್ಯವನ್ನು ಬೆಳೆಸುವುದೇ ಕಲೆ ಹಾಗೂ ಆನಂದ ಕೊಡುವುದೇ ಸೌಂದರ್ಯ ಆದರೆ ಟಾಲಸ್ಟಾಯ್ ಈ ಮತವನ್ನು ವಿರೋಧಿಸುತ್ತ ಆನಂದ ದೊರೆಯುವುದು ಅಭಿರುಚಿಯನ್ನು ಅವಲಂಬಿಸಿದೆ ಮತ್ತು ಅಭಿರುಚಿಗಳು ಭಿನ್ನವಾಗಿರುತ್ತವೆ. ಆದ್ದರಿಂದ ಕಲೆಯು ಕೇವಲ ವಿಶಿಷ್ಟ ವರ್ಗಕ್ಕೆ ಮಾತ್ರ ಆನಂದ ಕೊಡಬಲ್ಲದು. ಆದ್ದರಿಂದ ಅಭಿರುಚಿಯು ವ್ಯಕ್ತಿಗತವಾದದ್ದು ಎಂದಿದ್ದಾರೆ. ಕಲೆ ಮತ್ತು ಭಾಷೆ ಮಾನವನ ಮೂಲ ಸಂವಹನ ಮಾಧ್ಯಮದಿಂದ ಮನುಷ್ಯನು ತನ್ನ ವಿಚಾರಗಳನ್ನು ಅಭಿವ್ಯಕ್ತಿಗೊಳಿಸುತ್ತಾನೆ. ಹಾಗೆಯೇ ಕಲೆಯ ಮೂಲಕ ಅವನು ತನ್ನ ಭಾವನೆಗಳಿಗೆ ಅಭಿವ್ಯಕ್ತಿ ಕೊಡುತ್ತಾನೆ. ಕಲೆಯು ಇಂದ್ರಿಯಾಗ್ರಾಹ್ಯವಾದ ಅಭಿವ್ಯಕ್ತಿಯಾಗಿದೆ.
ಕಲಾವಿದ ಅಭಿನಯ, ರೇಖೆ, ಬಣ್ಣ, ಧ್ವನಿ ಹಾಗೂ ಶಬ್ದಗಳ ಮೂಲಕ ಭಾವನೆಗಳನ್ನು ಬೇರೆಯವರಿಗೂ ಅನುಭವಿಸುವ ಹಾಗೆ ವ್ಯಕ್ತಪಡಿಸುವುದೇ ಕಲಾ ಪ್ರಕ್ರಿಯೆಯಾಗಿದೆ. ಮಾನವನ ಇರುವ, ಉಡುವ, ನುಡಿಯುವ, ನಡೆಯುವ, ಬದುಕಿನ ಎಲ್ಲಾ ಸ್ತರದಲ್ಲೂ ಕಲೆ ತುಂಬಿಕೊಂಡಿದೆ. ಅಂತಹ ಕಲೆ ಇಲ್ಲದವನ ಬಾಳು ಕಗ್ಗೊಲೆ. ಏಕೆಂದರೆ ಮಾನವನ ಸಾಮಾಜಿಕ ಸಂಬಂಧಗಳು ಆತ್ಮಾನಂದದ ಪ್ರತೀಕವಾಗಿ ನಿತ್ಯ ಬದುಕಿನಲ್ಲಿ ಅವಶ್ಯವಾಗಿದೆ. ಅದರಂತೆ ವಾಣಿಜ್ಯ ದೃಷ್ಟಿಯಲ್ಲಿ ಕೃತಿ ಕೇವಲ ಸೌಂದರ್ಯ ಪ್ರದರ್ಶನಕ್ಕಾಗಿ ಅಲಂಕಾರಗೊಳಿಸಿದ ವಸ್ತುಗಳು ಕಲೆ ಅಲ್ಲ ಎಂದು ಟಾಲಸ್ಟಾಯ್ ಹೇಳುತ್ತಾರೆ. ಸೌಂದರ್ಯದ ಶಾಸ್ತ್ರಜ್ಞರು ತಮ್ಮ ಅಂತಃಶಕ್ತಿಯ ಒತ್ತಡವನ್ನು ಮುಕ್ತಗೊಳಿಸುವುದೇ ಕಲೆ ಎಂದು ಹೇಳುತ್ತಾರೆ. ಅಂತಹ ಕಲೆಗಳನ್ನು ಆರಾಧಿಸಿ ಪೋಷಿಸಿ, ಪೂಜಿಸಿದ ವಿಶ್ವದ ಕಲಾ ದಿಗ್ಗಜರ ನೆನಪಿಗಾಗಿ ಎಪ್ರಿಲ್ ೧೫ ರಂದು ವಿಶ್ವ ಕಲಾ ದಿನಚರಣೆಯಾಗಿ ಆಚರಿಸಲಾಗುತ್ತದೆ. ಲಿಯೋನಾರ್ಡ ಡ ವಿಂಚಿ ಹುಟ್ಟುಹಬ್ಬವನ್ನು ವಿಶ್ವ ಕಲಾ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಎಪ್ರಿಲ್ ೧೫ ೧೪೫೨ ರಲ್ಲಿ ಇಟಾಲಿಯದಲ್ಲಿ ಜನಿಸಿದ ಈ ಮಹಾನ್ ವಿದ್ವಾಂಸ, ಚಿತ್ರಕಲೆ, ಶಿಲ್ಪ, ವಾಸ್ತುಶಿಲ್ಪ, ವಿಜ್ಞಾನ, ಸಂಗೀತ ಇವೆಲ್ಲವುಗಳಲ್ಲಿ ದಿಗ್ಗಜನಾಗಿ ಮೆರೆದ ಮಹಾನ್ ಚೇತನ. ಅವರ ಪ್ರದೇಶದಲ್ಲಿ ಎಲ್ಲಾ ವಿಷಯಗಳು ಆವಿಷ್ಕಾರಗೊಂಡಿವೆ. ಕಲೆಗಾಗಿ ತಮ್ಮ ಜೀವನವನ್ನು ಮುಡಿಪಿಟ್ಟ ಕಲಾ ದಿಗ್ಗಜ ಡ ವಿಂಚಿ ಕಲೆಯ ಎತ್ತರ-ಬಿತ್ತರಗಳನ್ನು ಕಂಡುಕೊಳ್ಳುವಲ್ಲಿ ಶ್ರಮಿಸಿದ ಮಹಾಮೇರು. ಬೆವರ ಹನಿ, ಮೊನಾಲಿಸ, ದ ಲಾಸ್ಟ್ ಸೂಪರ್, ವರ್ಜಿನ್ ದ ರಾಕ್ಸ್ ಇನ್ನೂ ಹಲವಾರು ಕಲಾಕೃತಿಗಳಲ್ಲಿ ಅಧ್ಯಯನ ಮತ್ತು ಸೌಮ್ಯಕ್ ಜ್ಞಾನ ಕಂಡುಬರುತ್ತದೆ. ಡ ವಿಂಚಿ ಜೀವನವನ್ನು ಒಂದು ಕಲೆಯಾಗಿ ಭಾವಿಸಿದ್ದಾರೆ. ಅವರ ಪ್ರಕಾರ ಕಲಾತ್ಮಕ ಮೌಲ್ಯಗಳ ನೆಲೆಯಲ್ಲಿ ಬದುಕು ನಡೆಸುವುದರಿಂದ ಜೀವನ ಮತ್ತಷ್ಟು ಸರಸ, ಸಮರಸ ಹಾಗೂ ಆನಂದದಾಯಕವಾಗಿರುತ್ತದೆ ಎನ್ನುತ್ತಾರೆ. ರಸ್ಕಿನ್ ಸೌಂದರ್ಯ ಬದುಕಿಗೆ ಅನಿವಾರ್ಯ ಎಂದಿದ್ದಾರೆ. ಸುಂದರ ವಸ್ತುಗಳನ್ನು ಮೂರ್ತಿಗಳು ಕಾವ್ಯ, ಪ್ರಕೃತಿಯ ಸೌಂದರ್ಯ ಮುಂತಾದವುಗಳು ಜೀವನದಲ್ಲಿ ಸುತ್ತಮುತ್ತ ಇದ್ದರೆ ಬದುಕನ್ನು ಸುಂದರವಾಗಿಸಬಹುದು. ಅಂತಹ ಕಲೆಗೆ ಬೆಲೆ ಬರುವ ಬದುಕು ನಾವು ಸೃಷ್ಟಿಸಬೇಕು ಎಂದಿದ್ದಾರೆ. ವಾಲ್ಟರ್ ಫಿಟ್ಟರ್ ಮನುಷ್ಯನ ಬದುಕಿನ ಸತ್ವವು ಕಲೆಯಿಂದ ಹೆಚ್ಚಾಗುತ್ತದೆ ಎಂದಿದ್ದಾನೆ. ಕಲೆಯಲ್ಲಿ ಜೀವನ ಸಂಸ್ಕಾರ ದೊರೆಯುವದು ಕೂಡಾ ಒಂದಾಗಿದೆ. ಶಾಶ್ವತ ಸುಖವನ್ನು ಕೊಡುವ ಉಪದೇಶವನ್ನು ನೀಡುವುದೆಂದು ಅಶ್ವನಾಥ ಘೋಷ್ ಹೇಳಿದ್ದಾರೆ. ಕಾಂತ, ಸಂಹಿತ ಮತ್ತು ಉಪದೇಶ ಇವು ಮೂರು ಮಾತೃ ಕಲೆಯ ನಿಜವಾದ ಪ್ರಯೋಜನೆಗಳೇ ವಿನಃ ಧನಾರ್ಜನೆಯಲ್ಲ. ವ್ಯವಹಾರ ಜ್ಞಾನಗಳು ಅಲ್ಲ. ಕಾವ್ಯ ಆನಂದಾಯಯಶಸೇ ಕಾಂತಾತುಲ್ಯವಯ ಉಪದೇಶಾಯ ಎನ್ನುವ ಅವನ ಮಾತಿನಲ್ಲಿ ಅರ್ಥವಿದೆ. ಇಂತಹ ಅರ್ಥಪೂರ್ಣ ಸಾಲುಗಳ ಅನುಭವದಲ್ಲಿ ಅದ್ದಿ ತೆಗೆದ ಭಾವ ಲಲಿತ ವಹಿ ಹೃದಯಹೃದ್ಯ ಕಲೆಗಳನ್ನು ಉಳಿಸಿ ಬೆಳೆಸುವಲ್ಲಿ ಜಗತ್ತಿನ ಕಲಾವಿದರು ತಮ್ಮ ಬದುಕನ್ನು ಸಮರ್ಪಿಸಿದ್ದಾರೆ. ಸಮರ್ಪಣೆ ಎನ್ನುವ ಮಾತೇಕೆಂದರೆ ಕಲೆಯೊಂದು ಮಾರಾಟದ ವಸ್ತುವಲ್ಲ. ಇಂತಹ ಕಲೆಗಳನ್ನು ಎಲ್ಲರಿಗೂ ಅನುಭವಿಸುವ ಮನಸಿಲ್ಲ. ಕಲಾ ಇತಿಹಾಸವನ್ನು ಗಮನಿಸಲಾಗಿ ಕಲೆ ಶ್ರೀಮಂತರ ಸ್ವತ್ತಾಗಿ ಬಂದಿದೆ. ಲಲಿತ ಕಲೆಗಳಲ್ಲಿ ನಾಟಕ, ಸಂಗೀತ, ನಾಟ್ಯ ಮಾತ್ರ ಮೇಲ್ವರ್ಗದಿಂದ ಕೆಳವರ್ಗದವರೆಗೂ ದಕ್ಕುವಂತಹದ್ದು. ಆದರೆ ದೃಶ್ಯ ಕಲೆಗಳು ಸೀಮಿತ ವರ್ಗವನ್ನು ಒಳಗೊಂಡಿರುವುದರಿಂದ ಕಲಾವಿದರು ಕಲೆ ಪರಿಷ್ಕರಣೆಯ ಜೊತೆಗೆ ಕಲೆಯನ್ನು ತಲುಪಿಸಲು ಹೊಸ ತಂತ್ರಗಳನ್ನು ರೂಪಿಸುವ ಅವಶ್ಯವಿದೆ. ಅದರಂತೆ ಗದುಗಿನ ಹಲವಾರು ಕಲಾ ಕಾಲೇಜುಗಳು, ಕಲಾ ಶಿಕ್ಷಕರು ಕಲಾ ಬೆಳವಣಿಗೆಗಾಗಿ ಶ್ರಮಿಸುತ್ತಿದ್ದಾರೆ. ಕಲೆಯನ್ನು ಮನೆಮನೆಗೂ ತಲುಪಿಸಬೇಕೆಂಬ ಚಿಂತನೆಯಲ್ಲಿ ವಿಶಿಷ್ಟ ಕಲಾ ಕಾರ್ಯಕ್ರಮಗಳನ್ನು ರೂಪಿಸಲು ಇಂದು ಕರ್ನಾಟಕ ಲಲಿತ ಕಲಾ ಅಕಾಡೆಮಿ ಕೊಪ್ಪಳದಲ್ಲಿ ಕಲಾವಿದರ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ. ಮತ್ತು ನಿರ್ಮಲ ವಿವಿಧೋದ್ದೇಶಗಳ ಸೇವಾ ಸಂಸ್ಥೆ ಮುಂಡರಗಿ, ಆದರ್ಶ ವಿದ್ಯಾಲಯ ಇಟಗಿ, ನವರಸ ಕಲಾಸಂಘ ಬೆಟಗೇರಿ, ನಯನತಾರ ಕಲಾ ಸಂಘ ಬೆಟಗೇರಿ ಇವುಗಳ ಸಹಯೋಗದಲ್ಲಿ ಕಲಾತರಂಗ ಭಿತ್ತಿಚಿತ್ರ ಶಿಬಿರವನ್ನು ರೋಣ ತಾಲೂಕ ಇಟಗಿಯಲ್ಲಿ ಆಯೋಜಿಸಲಾಗಿದೆ. ಬಣ್ಣದಮನೆ ಆರ್ಟಅಡ್ಡಾ ಗದಗ ಹಾಗೂ ಲಲಿತಕಲಾ ಅಕಾಡೆಮಿಯಿಂದ ವಿಭಿನ್ನ ಕಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಕಲೆಗಾಗಿ ಜೀವನವನ್ನು ಸಮರ್ಪಿಸಿದ ರೆಂಬ್ರಾಂಟ್, ಪಿಕಾಸೋ, ಗಾಗಿನ್, ರೋಜರ್, ಪ್ಲಾಟಿನಸ್, ವೆರ್ಮಿರ್, ಮೈಕೆಲ್ ಎಂಜಿಲೋ, ಫ್ರಾನ್ಜ್ ಹಾಲ್ಸ, ಬಿರ್ನಿನಿ, ಸಿಜಾ, ರಾಜಾ ರವಿವರ್ಮ, ಎಸ್.ಎಂ. ಪಂಡಿತ್, ಕ್ರೋಚೆ, ಅ.ರಾ.ಮಿತ್ರ, ರವೀಂದ್ರನಾಥ ಟಾಗೋರ್, ಕಲಾಮಹರ್ಷಿ ಟಿ.ಪಿ.ಅಕ್ಕಿ, ಎಂ.ಎ.ಚಟ್ಟಿ, ಎಂ.ಆರ್.ಹಡಪದ, ನಂಜುಂಡರಾವ್ ಹೀಗೆ ಹಲವಾರು ಕಲಾವಿದರು ಕಲೆಗಾಗಿ ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ. ಆದ್ದರಿಂದ ನಗರದ ಕಲಾವಿದರು ಕಲಾಸಕ್ತರು, ಕಲಾ ದಿನಾಚರಣೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸೋಣ.
– ಪ್ರೊ. ಬಸವರಾಜ ನೆಲಜೇರಿ, ಗದಗ ಮೊ: ೯೫೧೩೧೪೨೯೨೮


Leave a Reply