Koppal

ಜಿಲ್ಲೆಯಲ್ಲಿ ಅಕ್ರಮ ಮದ್ಯ, ಮರಳು, ಮಟ್ಕಾ ದಂಧೆ : ಕಟ್ಟುನಿಟ್ಟಿನ ಕ್ರಮಕ್ಕೆ ಅಧಿಕಾರಿಗಳಿಗೆ ಬಿ.ಸಿ.ಪಾಟೀಲ್ ಸೂಚನೆ


ಕೊಪ್ಪಳ ೧೭: ಜಿಲ್ಲೆಯ ಪ್ರತಿಯೊಂದು ಗ್ರಾಮಗಳಲ್ಲಿ ಟೀ ಅಂಗಡಿಗಳಲ್ಲಿಯೂ ಮದ್ಯ ದೊರೆಯುತ್ತಿದ್ದು, ಇದರಿಂದ ಗ್ರಾಮದ ಯುವಕರು ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ ಅಕ್ರಮ ಮದ್ಯ ದಾಸ್ತಾನು, ಅಕ್ರಮ ಮದ್ಯ ಮಾರಾಟ, ಮಟ್ಕಾ ದಂಧೆ ಹಾಗೂ ಅಕ್ರಮ ಮರಳು ದಂಧೆ ನಡೆಯುತ್ತಿರುವ ಕುರಿತು ಮಾಹಿತಿ ದೊರೆತಿದ್ದು, ಸಂಬಂಧಿಸಿದ ಅಬಕಾರಿ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಹೇಳಿದರು.
ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಕಿಮ್ಸ್)ಯಲ್ಲಿ ನಡೆದ ೨೦೨೦-೨೧ನೇ ಸಾಲಿನ ನಾಲ್ಕನೇ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಮಟ್ಟದ ಅಧಿಕಾರಿಗಳು ಕಚೇರಿಗಳಿಗೆ ಸರಿಯಾಗಿ ಬರುತ್ತಿಲ್ಲ. ಕೇಂದ್ರ ಸ್ಥಾನದಲ್ಲಿ ಇರುವುದಿಲ್ಲ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿದೆ. ಆದ್ದರಿಂದ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒ ಅವರು ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಅಧಿಕಾರಿಗಳ ಹಾಜರಿ ಬಗ್ಗೆ ಪರಿಶೀಲಿಸಿ. ಸೋಮವಾರದಂದು ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒ ಅವರು ವಿವಿಧ ಅಭಿವೃದ್ಧಿ ನಿಗಮಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಾಕಿ ಉಳಿದ ಎಲ್ಲ ಕಾರ್ಯಕ್ರಮಗಳಲ್ಲಿ ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲು ಒಂದು ವಾರದ ಕಾಲವಕಾಶ ನೀಡಿ, ನಂತರದಲ್ಲಿ ಈ ಬಗ್ಗೆ ವರದಿ ಸಲ್ಲಿಸಿ ಎಂದು ತಿಳಿಸಿದರು.
ಗಂಗಾ ಕಲ್ಯಾಣ ಯೋಜನೆಯಡಿ ೨೦೧೫-೧೬ ನೇ ಸಾಲಿನಲ್ಲಿ ಮಂಜೂರಾದ ಬೋರ್‌ವೆಲ್‌ಗಳಿಗೆ ಇದುವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ಆಗ ಕೊರೆಸಿದ ಬೋರ್‌ವೆಲ್‌ಗಳಲ್ಲಿ ಸದ್ಯ ನೀರು ಇರುವುದೂ ಅನುಮಾನ. ಜನಸಾಮಾನ್ಯರ ಅನುಕೂಲಕ್ಕೆ ಸರ್ಕಾರ ವಿವಿಧ ಯೋಜನೆಗಳನ್ನು ಹಮ್ಮಿಕೊಂಡು ಅನುಷ್ಠಾನಕ್ಕೆ ಇಲಾಖೆಗಳಿಗೆ ನೀಡಿದರೆ, ಇಲಾಖಾ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ಷಗಳವರೆಗೆ ಯೋಜನೆ ಅನುಷ್ಠಾನಗೊಳ್ಳುವುದಿಲ್ಲ. ಇದರಿಂದ ತೊಂದರೆಯಾಗುವುದು ಫಲಾನುಭವಿಗಳಿಗೆ. ಆದ್ದರಿಂದ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವಾಗ ತಮ್ಮ ಕಾನೂನು ಚೌಕಟ್ಟಿನೊಳಗೆ ಇದ್ದುಕೊಂಡೇ ಮಾನವೀಯತೆ ದೃಷ್ಟಿಯಿಂದ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ಒದಗಿಸಿ ಎಂದು ಅವರು ಹೇಳಿದರು.
ಬೇಸಿಗೆ ಆರಂಭವಾಗಿದ್ದು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ. ದುರಸ್ಥಿ ಅಗತ್ಯವಿದ್ದಲ್ಲಿ ಅದನ್ನು ದುರಸ್ಥಿಗೊಳಿಸಿ ಗ್ರಾಮಸ್ಥರಿಗೆ ಕುಡಿಯುವ ನೀರು ಒದಗಿಸಿ. ಕುಡಿಯುವ ನೀರಿಗೆ ಸಂಬಂಧಿಸಿದಂತೆ ಪ್ರತಿ ೧೫ ದಿನಕ್ಕೊಮ್ಮೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳೊಂದಿಗೆ ಜಿಲ್ಲಾ ಪಂಚಾಯತಿ ಸಿಇಒ ಅವರು ಸಭೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಬೇಕು. ನೀರಿನ ಸಮಸ್ಯೆ ಬಗೆಹರಿಸಲು ಕೆ.ಡಿ.ಪಿ ಸಭೆಯವರೆಗೂ ಕಾಯಬೇಕಿಲ್ಲ ಎಂದು ಅವರು ತಿಳಿಸಿದರು.
ಗಂಗಾವತಿ ತಾಲ್ಲೂಕಿನ ಎರಡು ಗ್ರಾಮಗಳ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೂ ಮೊದಲೇ ಬಿಲ್ ಪಾವತಿ ಮಾಡಿರುವ ಕುರಿತು ಆರೋಪ ಕೇಳಿಬಂದಿದ್ದು ಈ ಕುರಿತು ಪರಿಶೀಲಿಸಿ ವರದಿ ನೀಡಿ. ಯಲಬುರ್ಗಾ ತಾಲ್ಲೂಕಿನ ೨೪ ಹಾಗೂ ಕುಕನೂರು ತಾಲ್ಲೂಕಿನ ೧೫ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ ಎಂಬ ಕುರಿತು ಶಾಸಕರಾದ ಹಾಲಪ್ಪ ಆಚಾರ್ ಅವರು ದೂರು ನೀಡಿದ್ದಾರೆ. ಆದ್ದರಿಂದ ಈ ಬಗ್ಗೆಯೂ ಪರಿಶೀಲಿಸಿ ೧೫ ದಿನಗಳೊಳಗೆ ಅಗತ್ಯ ಕ್ರಮ ಕೈಗೊಂಡು ಶುದ್ಧ ಕುಡಿಯುವ ನೀರಿನ ಘಟಕಗಳ ಕಾರ್ಯಾರಂಭಗೊಳಿಸಬೇಕು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆಯಿಲ್ಲ. ಸದ್ಯ ಇರುವ ಕಳೆದ ಸಾಲಿನ ರಸಗೊಬ್ಬರದ ದಾಸ್ತಾನನ್ನು ಡೀಲರ್‌ಗಳು ಹೆಚ್ಚಿನ ಬೆಲೆಗೆ ಮಾರದೆ ಹಳೆ ದರದಂತೆ ರೈತರಿಗೆ ಮಾರಾಟ ಮಾಡಬೇಕು. ಡೀಲರ್‌ಗಳು ರೈತರಿಗೆ ಕೃತಕ ಅಭಾವವನ್ನು ಸೃಷ್ಟಿಸದಂತೆ ಅಗತ್ಯ ಸೂಚನೆ ನೀಡುವಂತೆ ಜಂಟಿ ಕೃಷಿ ನಿರ್ದೇಶಕರಿಗೆ ಸೂಚನೆ ನೀಡಿದರು.
ಗಂಗಾವತಿಯ ಅಕ್ಕಿ ಗಿರಣಿಗಳಿಂದ ಅಕ್ರಮವಾಗಿ ಸಾಗಿಸುತ್ತಿದ್ದ ೧೭೪೧ ಕ್ವಿಂಟಾಲ್ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಆದರೆ ಆ ಅಕ್ಕಿ ಎಲ್ಲಿಂದ ಬಂತು, ಯಾರಿಗೆ ಸಂಬಂಧಿಸಿದ್ದು, ವಶಪಡಿಸಿಕೊಂಡ ಅಕ್ಕಿಯನ್ನು ನಂತರದಲ್ಲಿ ಏನು ಮಾಡಲಾಯಿತು ಹಾಗೂ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕೈಗೊಂಡ ಕ್ರಮಗಳೇನು ಎಂಬುದರ ಬಗ್ಗೆ ಇಲಾಖಾ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ಇಲ್ಲ. ಆದ್ದರಿಂದ ಒಂದು ವಾರದೊಳಗೆ ಈ ಬಗ್ಗೆ ವಿವರವಾದ ಮಾಹಿತಿಯುಳ್ಳ ವರದಿಯನ್ನು ಸಲ್ಲಿಸಬೇಕು ಎಂದು ಸಚಿವರು ಸಂಬಂಧಿಸಿದ ಇಲಾಖೆ ಅಧಿಕಾರಿಗೆ ಸೂಚನೆ ನೀಡಿದರು.
ಕುಷ್ಟಗಿ ಶಾಸಕರಾದ ಅಮರೇಗೌಡ ಬಯ್ಯಾಪೂರ ಅವರು ಮಾತನಾಡಿ, ಜಿಲ್ಲೆಯಲ್ಲಿ ಪಶುವೈದ್ಯರ ಕೊರತೆ ತೀವ್ರವಾಗಿದ್ದು, ಇದರಿಂದ ರೈತರು ತಮ್ಮ ದನಕರುಗಳ ಚಿಕಿತ್ಸೆಗೆ ಕಿಲೋ ಮೀಟರ್‌ಗಟ್ಟಲೆ ದೂರ ಸಂಚರಿಸಬೇಕಾಗಿದೆ. ಆದ್ದರಿಂದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಅವಶ್ಯವಿರುವ ಪಶುವೈದ್ಯರ ನೇಮಕ ಮಾಡಿಕೊಳ್ಳಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಮನವಿ ಮಾಡಿದರು. ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ಶೀಘ್ರ ಪಶುವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಗಂಗಾವತಿ ಶಾಸಕರಾದ ಪರಣ್ಣ ಮುನವಳ್ಳಿ ಮಾತನಾಡಿ, ಇತ್ತೀಚೆಗೆ ಅರಣ್ಯ ಸಚಿವರು ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಿದಾಗ, ಅಂಜನಾದ್ರಿ ಬೆಟ್ಟವು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವುದರಿಂದ ಬೆಟ್ಟದಲ್ಲಿ ಅರಣ್ಯ ಇಲಾಖೆಯಿಂದಲೇ ರೋಪ್ ವೇ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದ್ದಾರೆ ಎಂದರು. ಸಚಿವ ಬಿ.ಸಿ.ಪಾಟೀಲ್ ಅವರು ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು. ಅಲ್ಲದೇ ಗಿಣಿಗೇರಾ ಕೆರೆ ಅಭಿವೃದ್ಧಿ ಮಾಡಲಾಗುತ್ತಿದ್ದು, ಅಲ್ಲಿ ಬಹಳಷ್ಟು ಸ್ಥಳಾವಕಾಶವಿರುವುದರಿಂದ ಅರಣ್ಯ ಇಲಾಖೆಯಿಂದ ವಿವಿಧ ಬಣ್ಣದ ಹೂಗಳನ್ನು ಬಿಡುವ ಗಿಡ ಮರಗಳನ್ನು ಬೆಳೆಸುವಂತೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಉಡಾನ್ ಯೋಜನೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಎಮ್.ಎಸ್.ಪಿ.ಎಲ್ ಅನ್ನು ಅವಲಂಬಿಸುವುದು ಬೇಡ. ಜಿಲ್ಲೆಯಲ್ಲಿ ಅನುಕೂಲಕರ ಸ್ಥಳವನ್ನು ಗುರುತಿಸಿ ಅಲ್ಲಿಯೇ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಿ ಎಂದು ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಯಲಬುರ್ಗಾ ತಾಲ್ಲೂಕಿನಲ್ಲಿ ಕೆ.ಆರ್.ಐ.ಡಿ.ಎಲ್‌ನಿಂದ ಕೈಗೊಂಡ ವಿವಿಧ ಕಾಮಗಾರಿಗಳಲ್ಲಿ ಅವ್ಯವಹಾರದ ಕುರಿತು ಆರೋಪ ಕೇಳಿಬಂದಿದ್ದು, ಈ ಬಗ್ಗೆ ಶಾಸಕರಿಂದ ಪಟ್ಟಿ ಪಡೆದು ಜಿಲ್ಲಾ ನಗರಾಭಿವೃದ್ದಿ ಕೋಶದ ಅಧಿಕಾರಿಗಳಿಂದ ವಿಚಾರಣೆ ನಡೆಸಿ ಎಂದು ಸಚಿವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ್, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ ಕೆ.ರಾಘವೇಂದ್ರ ಹಿಟ್ನಾಳ್, ಹಾಲಪ್ಪ ಆಚಾರ್ ಹಾಗೂ ಬಸವರಾಜ ದಡೇಸೂಗೂರು, ಜಿ.ಪಂ ಉಪಾಧ್ಯಕ್ಷೆ ಬಿನಾಗೌಸ್, ಜಿಲ್ಲಾಧಿಕಾರಿ ವಿಕಾಸ್ ಕಿಶೋರ ಸುರಳ್ಕರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಘುನಂದನ್ ಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್, ಅಪರ ಜಿಲ್ಲಾಧಿಕಾರಿ ಎಂ.ಪಿ ಮಾರುತಿ, ಜಿ.ಪಂ. ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಅಮರೇಶ ಗೋನಾಳ ಹಾಗೂ ಭಾಗ್ಯವತಿ ಮಾಣಿಕ್ ಬೋಲಾ, ಕೆ.ಡಿ.ಪಿ ನಾಮನಿರ್ದೇಶಿತ ಸದಸ್ಯರಾದ ಅಮರೇಶ ಕರಡಿ, ಮಹಾವೀರ ಮೆಹ್ತಾ, ಉಪವಿಭಾಗಾಧಿಕಾರಿ ನಾರಾಯಣರೆಡ್ಡಿ ಕನಕರೆಡ್ಡಿ, ಜಿ.ಪಂ. ಉಪಕಾರ್ಯದರ್ಶಿ ಶರಣಬಸವರಾಜ, ಯೋಜನಾ ನಿರ್ದೇಶಕ ಟಿ. ಕೃಷ್ಣಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


Leave a Reply