karanataka

ಕಡು ಬೇಸಿಗೆಯಲ್ಲೂ ಬತ್ತದ ಗಡೇದ ಬಾವಿ-ರುಚಿಯಾದ ತಣ್ಣನೆಯ ನೀರು


ಕೊಪ್ಪಳ,ಏ.21-ಜಿಲ್ಲೆಯ ಕೆರೆಹಳ್ಳಿ ಗ್ರಾಮದ ಬಳಿ ಇರುವ ಗುಡ್ಡದಲ್ಲಿ ಐತಿಹಾಸಿಕ ಗಡೇದ ಬಾವಿಯ ನೀರು ಎಂಥ ಕಡು ಬೇಸಿಗೆಯಲ್ಲೂ ಬತ್ತದೇ ಅಚ್ಚರಿ ಮೂಡಿಸಿದೆ. ಅದರಲ್ಲಿನ ರುಚಿಯಾದ ನೀರು ಕುಡಿದರೆ ಎಂಥವರೂ ಮುದಗೊಳ್ಳದೇ ಇರರು.
ಕುಷ್ಟಗಿ ಮಾರ್ಗವಾಗಿ ತೆರಳುವಾಗ ಬೂದುಗುಂಪಾ ಕ್ರಾಸ್ ಬಳಿ ಕೆರೆಹಳ್ಳಿ ಎಂಬ ಪುಟ್ಟ ಗ್ರಾಮ ಸಿಗುತ್ತದೆ. ಈ ಗ್ರಾಮದ ಪೂರ್ವ ದಿಕ್ಕಿನಲ್ಲಿರುವ ಗುಡ್ಡದಲ್ಲಿ ತೇರು ಹನುಮಪ್ಪನ ಮಂದಿರವಿದೆ. ಈ ಮಂದಿರದ ಬಳಿ ಐತಿಹಾಸಿಕವಾಗಿ ನಿರ್ಮಾಣಗೊಂಡಿರುವ ಗಡೇದ ಬಾವಿ ಗೋಚರಿಸುತ್ತದೆ. ಎಂಥ ಕಡು ಬೇಸಿಗೆಯಲ್ಲೂ ಈ ಬಾವಿ ಬತ್ತುವುದಿಲ್ಲ. ಸಮುದ್ರ ಮಟ್ಟದಿಂದ ಸುಮಾರು 200 ಅಡಿ ಎತ್ತರದಲ್ಲಿರುವ ಈ ಬಾವಿಯ ಮೇಲೆ ಅಂತರಗಂಗೆಯ ಹಸಿರು ಕೆನೆಪದರಿನಂತೆ ಗೋಚರಿಸಿದರೂ, ಇದರ ಅಡಿಯಲ್ಲಿರುವ ನೀರು ಕುಡಿದರೆ ಎಂಥವರಿಗೂ ಸಂತೃಪ್ತ ಭಾವ ಮೂಡದೇ ಇರದು.
ಇಲ್ಲಿ ಐತಿಹಾಸಿಕ ತಿರುಗಲ್ ತಿಮ್ಮಪ್ಪನ ಮಂದಿರವೂ ಇದೆ. ಸೂಕ್ತ ರಕ್ಷಣೆ ಇಲ್ಲದೇ ಮಂದಿರ ನಿಧಿಚೋರರ ಹಾವಳಿಗೆ ಸಿಲುಕಿ ಪಾಳು ಬಿದ್ದಿದೆ. ಇಲ್ಲಿ ವಿಜಯನಗರ ಆಳರಸರ ಕಾಲಕ್ಕೂ ಮುನ್ನ ಜನವಸತಿ ಇತ್ತು ಎಂದು ಹೇಳಲಾಗುತ್ತಿದೆ. ಅನತಿ ದೂರದಲ್ಲಿಯೇ ಕಂಪಿಲರಾಯನ ಕೋಟೆ ಇದೆ. ಅಂದಿನ ಜನತೆಗೆ ಇದೇ ಕುಡಿವ ನೀರಿನ ಆಸರೆಯಾಗಿತ್ತು ಎಂದು ಸ್ಥಳೀಯರು ಮೌಖಿಕವಾಗಿ ಹೇಳುತ್ತಾರೆ. ತೇರು ಹನುಮಪ್ಪ ಮತ್ತು ತಿರುಗಲ್ ತಿಮ್ಮಪ್ಪ ದೇವಾಲಯಗಳು ಅಂದಿನ ಜನರಿಗೆ ಆರಾಧ್ಯ ದೈವವಾಗಿದ್ದರು. ಜನವಸತಿ ಕೂಡ ಇಲ್ಲಿ ಇತ್ತು. ಇಲ್ಲಿನ ನೆಲಸಮಗೊಂಡ ನೂರಾರು ನಿವೇಶನಗಳು ಕಾಣಸಿಗುತ್ತಿವೆ. ದೇವರ ಪೂಜೆಗೆ ಬಳಕೆಯಾಗುತ್ತಿದ್ದ ಈ ನೀರನ್ನು ಜನರೂ ಉಪಯೋಗಿಸುತ್ತಿದ್ದರು. ಈ ನೀರು ಸೇವಿಸಿದರೆ ಖಾಯಿಲೆಗಳೂ ವಾಸಿಯಾಗುತ್ತವೆ ಎನ್ನುವ ನಂಬಿಕೆ ಇದೆ.
ಕಾಲನ ಸುಳಿಗೆ ಸಿಲುಕಿ ಜನಮಾನಸದಿಂದ ದೂರವೇ ಉಳಿದ ಈ ಬಾವಿ ನಿರ್ಜನ ಪ್ರದೇಶದಲ್ಲಿದೆ. ಇಲ್ಲಿ ಕಾಡುಪ್ರಾಣಿಗಳು ಇರುವುದರಿಂದ ಮತ್ತು ಇಲ್ಲಿ ಸುಗಮ ರಸ್ತೆ ಇಲ್ಲದಿರುವುದರಿಂದ ಜನರು ಬರಲು ಭಯ ಪಡುತ್ತಾರೆ. ಕುರಿಗಾಹಿಗಳು ಮಾತ್ರ ಈ ಪ್ರದೇಶದತ್ತ ಬರುತ್ತಿರುವುದರಿಂದ ಈ ಬಾವಿ ನೋಡಲು ಸಿಗುತ್ತದೆ. ಕಾಡುಪ್ರಾಣಿಗಳಿಗೆ ಆಸರೆಯಾಗಿರುವ ಈ ಗಡೇದ ಬಾವಿಯ ನೀರು ಕಡು ಬೇಸಿಗೆಯಲ್ಲೂ ಬತ್ತದಿರುವುದು ಅಚ್ಚರಿ ಮೂಡಿಸಿದೆ ಎನ್ನುತ್ತಾರೆ ಪರಿಸರ ಪ್ರೇಮಿ ವೀರಣ್ಣ ಕೋಮಲಾಪುರ.
ಇಲ್ಲಿ ತೇರು ಹನುಮಪ್ಪ, ತಿರುಗಲ್ ತಿಮ್ಮಪ್ಪ ದೇಗುಲಗಳಿವೆ. ಐತಿಹಾಸಿಕ ಕೋಟೆ ಕೊತ್ತಲಗಳಿವೆ. ಜನವಸತಿಗಾಗಿ ನಿರ್ಮಿಸಿದ್ದ ನಿವೇಶನಗಳೂ ಇವೆ. ನಿಧಿಚೋರರ ಹಾವಳಿಗೆ ಇಲ್ಲಿನ ದೇವತಾ ಮೂರ್ತಿಗಳು ಶಿಥಿಲಗೊಂಡಿವೆ. ಕೊಪ್ಪಳ ಜಿಲ್ಲಾಡಳಿತ, ಭಾರತೀಯ ಪುರಾತತ್ವ ಮತ್ತು ಪ್ರಾಚ್ಯವಸ್ತು ಇಲಾಖೆ ಈ ಪ್ರದೇಶವನ್ನು ರಕ್ಷಿಸಿದರೆ ಮುಂದಿನ ಪೀಳಿಗೆಗೆ ಕೊಡುಗೆ ನೀಡಿದಂತಾಗುತ್ತದೆ. ಕೊಪ್ಪಳ ಜಿಲ್ಲಾಡಳಿತ ಈ ಪ್ರದೇಶವನ್ನು ಉಳಿಸಿಕೊಳ್ಳಲು ಮುಂದೆ ಬರುವುದೇ? ಕಾದು ನೋಡಬೇಕು.


Leave a Reply