BengaluruState

ಮೇ.10ರ ವರೆಗೆ ಕರುನಾಡಕ್ಕೆ ಬಿತ್ತು ಬೀಗ


ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ನಾಳೆ ರಾತ್ರಿ 9 ಗಂಟೆಯಿಂದ ಮತ್ತೆ 14 ದಿನಗಳ ಕಾಲ ಲಾಕ್‍ಡೌನ್ ಜಾರಿಯಾಗಲಿದೆ. ಇದರಿಂದ ಕರ್ನಾಟಕ ಮೇ 10ರವರೆಗೆ ಸಂಪೂರ್ಣವಾಗಿ ಸ್ತಬ್ದವಾಗಲಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಚಟುವಟಿಕೆಗಳಿಗೂ ಕಡಿವಾಣ ಬೀಳಲಿದೆ.

ಬೆಳಗ್ಗೆ 6ರಿಂದ 10ರವರೆಗೆ ಹಾಲು, ಹಣ್ಣು, ತರಕಾರಿ, ಮಾಂಸ ಸೇರಿದಂತೆ ಅಗತ್ಯ ವಸ್ತುಗಳನ್ನು ಸಾರ್ವಜನಿಕರು ಖರೀದಿಸಲು ವಿನಾಯಿತಿ ನೀಡಲಾಗಿದೆ. ನಿರ್ಮಾಣ, ಕೃಷಿ, ಉತ್ಪಾದನಾ ವಲಯಕ್ಕೆ ಲಾಕ್‍ಡೌನ್‍ನಿಂದ ವಿನಾಯ್ತಿ ನೀಡಲಾಗಿದೆ. ಉಳಿದಂತೆ ದಿನಪೂರ್ತಿ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ.

ಹೋಟೆಲ್‍ಗಳಿಂದ ತಿಂಡಿತಿನಿಸು, ಊಟವನ್ನು ಪಾರ್ಸಲ್ ಮೂಲಕ ತರಿಸಿಕೊಳ್ಳಬಹುದು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಇಂದು ವಿಧಾನಸೌಧದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಮಹತ್ವದ ಸಚಿವ ಸಂಪುಟ ಸಭೆ ನಡೆಯಿತು. ಬೆಳಗ್ಗೆ 11 ಗಂಟೆಯಿಂದ ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಸುದೀರ್ಘ ಸಂಪುಟ ಸಭೆಯಲ್ಲಿ ಕೋವಿಡ್ ನಿಯಂತ್ರಣ ವಿಷಯವನ್ನೇ ಪ್ರದಾನವಾಗಿಟ್ಟುಕೊಂಡು ಕಠಿಣ ನಿಯಮಗಳ ಜಾರಿ ಸೇರಿದಂತೆ ಕೋವಿಡ್ ನಿಯಂತ್ರಣಕ್ಕಾಗಿ ತೆಗೆದುಕೊಳ್ಳಬೇಕಾದ ಮಹತ್ವದ ವಿಷಯಗಳ ಬಗ್ಗೆ ಸಂಪುಟದ ಸಹೋದ್ಯೋಗಿಗಳಿಂದ ಸಿಎಂ ಅಭಿಪ್ರಾಯ ಪಡೆದರು.

ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕೊರೊನಾ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವುದರಿಂದ ಅನಿವಾರ್ಯವಾಗಿ ರಾಜ್ಯದಲ್ಲಿ ಪುನಃ ನಾಳೆಯಿಂದ ಮೇ 10ರವರೆಗೆ ಲಾಕ್‍ಡೌನ್ ವಿಸ್ತರಣೆ ಮಾಡಲಾಗಿದೆ ಎಂದು ಘೋಷಣೆ ಮಾಡಿದರು.ಕೆಎಸ್‍ಆರ್‍ಟಿಸಿ, ಬಿಎಂಟಿಸಿ, ಮೆಟ್ರೋ ಸೇರಿದಂತೆ ಸಾರಿಗೆ ಸಂಚಾರ ಕೂಡ ಸ್ತಬ್ದಗೊಳ್ಳಲಿದ್ದು , ಬಾರ್, ರೆಸ್ಟೋರೆಂಟ್, ಕ್ಲಬ್, ಡಿಸ್ಕೋಥೆಕ್, ಸಲ್ಯೂನ್‍ಶಾಪ್, ಆಟೋ, ಟ್ಯಾಕ್ಸಿ ಮತ್ತಿತರ ಚಟುವಟಕೆಗಳಿಗೂ ನಿರ್ಬಂಧ ಹೇರಲಾಗಿದೆ.

ಒಂದು ವೇಳೆ ಎರಡು ವಾರದೊಳಗೆ ಕೊರೊನಾ ನಿಯಂತ್ರಣಕ್ಕೆ ಬರದಿದ್ದರೆ ಮುಂದೆ ಮತ್ತೆ ವಿಸ್ತರಣೆಯಾಗಬಹುದು. ಇದಕ್ಕೆ ಸಾರ್ವಜನಿಕರು ಅವಕಾಶ ಕೊಡಬಾರದೆಂದು ಸಿಎಂ ಮನವಿ ಮಾಡಿದರು. ಸಂಪುಟ ಸಹೋದ್ಯೋಗಿಗಳು, ಕೋವಿಡ್ ತಾಂತ್ರಿಕ ಸಲಹಾ ಸಮಿತಿ, ತಜ್ಞರು, ಅಧಿಕಾರಿಗಳು ಸೇರಿದಂತೆ ಮತ್ತಿತರ ಜೊತೆ ಸುದೀರ್ಘವಾಗಿ ಚರ್ಚೆ ಮಾಡಲಾಗಿದೆ. ಅವರ ಸಲಹೆ ಮೇರೆಗೆ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.


Leave a Reply