Belagavi

ಜಿಲ್ಲೆಯಲ್ಲಿ ಆಕ್ಸಿಜನ್ ಲಿಕ್ವಿಡ್ ಘಟಕಗಳ ಪರಿಶೀಲನೆಗೆ ನೋಡಲ್ ಅಧಿಕಾರಿಗಳ ನಿಯೋಜಿಸಿ: ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್


ಬೆಳಗಾವಿ: ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡಲು ಜಿಲ್ಲೆಯಲ್ಲಿ ಆಕ್ಸಿಜನ್ ಲಿಕ್ವಿಡ್ ಸಮಪರ್ಕವಾಗಿ ಬಳಕೆ ಮಾಡುವ ಕುರಿತು ಜಿಲ್ಲೆಯ ಆಕ್ಸಿಜನ್ ಲಿಕ್ವಿಡ್ ಘಟಕಗಳಿಗೆ ಪ್ರತಿ ದಿನ ಭೇಟಿ ನೀಡಿ ಪರಿಶೀಲನೆ ನಡೆಸಲು ನೋಡಲ್ ಅಧಿಕಾರಿಗಳನ್ನು ನಿಯೋಜಿಸಿ ಜಿಲ್ಲಾಧಿಕಾರಿಗಳಾದ ಡಾ. ಕೆ. ಹರೀಶ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.

ಬೆಳಗಾವಿಯ ಎಂ.ಎಸ್.ಪಿ.ಎಲ್ ಲಿಕ್ವಿಡ್ ಆಕ್ಸಿಜನ್ ಘಟಕ ಪರಿಶೀಲಿಸಲು ಬೆಳಗಾವಿಯ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪಟ್ಟಣಶೆಟ್ಟಿ ಹಾಗೂ ಬಿಮ್ಸ್ ಘಟಕದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಗೌರಿಶಂಕರ ಅವರನ್ನು ನಿಯೋಜಿಸಲಾಗಿದೆ.

ಹೊನಗಾದ ಮಹಾ ಆಕ್ಸಿ ಘಟಕ, ನಿಪ್ಪಾಣಿಯ ಘಟಕ ಹಾಗೂ ಅಥಣಿ ತಾಲೂಕಿನ ಮಂಗಸುಳಿಯ ಆಕ್ಸಿಜನ್ ಲಿಕ್ವಿಡ್ ಘಟಕ ಪರಿಶೀಲಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಪುಂಡಲಿಕ, ಚಿಕ್ಕೋಡಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮನ್ನಿಕೇರಿ ಹಾಗೂ ಚಿಕ್ಕೋಡಿಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಂಗಮ ಅವರನ್ನು ನೋಡಲ್ ಅಧಿಕಾರಿಗಳಾಗಿ ನಿಯೋಜನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ನೋಡಲ್ ಅಧಿಕಾರಿಗಳು ನಿಯೋಜಿತ ಘಟಗಳಿಗೆ ಪ್ರತಿದಿನ ಭೇಟಿ ನೀಡಿ ಘಟಕಗಳಲ್ಲಿ ಉತ್ಪತ್ತಿಯಾಗುವ ಆಕ್ಸಿಜನ್ ಸಿಲಿಂಡರ್ ಗಳನ್ನು ಜಿಲ್ಲೆಯ ವೈದ್ಯಕೀಯ ಸಂಸ್ಥೆಗಳಿಗೆ ಸಮರ್ಪಕವಾಗಿ ಪೂರೈಸುವಂತೆ ಹಾಗೂ ಜಿಲ್ಲೆಯ ವ್ಯಾಪ್ತಿಯನ್ನು ಬಿಟ್ಟು ಹೊರ ಹೋಗದಂತೆ ನೋಡಿಕೊಳ್ಳಬೇಕು.

ಒಂದು ವಾರದ ಮಟ್ಟಿಗೆ ಬೇಕಾಗುವ ಆಕ್ಸಿಜನ್ ಸಿಲಿಂಡರಗಳ ಪ್ರಮಾಣವನ್ನು ಪೂರೈಕೆ ಮಾಡಲು ಸಿದ್ಧತೆ ಮಾಡಿಕೊಂಡು ಆಸ್ಪತ್ರೆಗಳ ಬೇಡಿಕೆಗೆ ಅನುಗುಣವಾಗಿ ಆಕ್ಸಿಜನ್ ಸಿಲಿಂಡರಗಳು ಪೂರೈಕೆಯಾಗುತ್ತಿರುವ ಕುರಿತು ಪರಿಶೀಲನೆ ನಡೆಸಬೇಕು.

ಸಹಾಯಕ ಔಷಧ ನಿಯಂತ್ರಕರು ಸನಾಫರ ಜೋನ್ ಅವರನ್ನು ಸಮನ್ವಯಾಧಿಕಾರಿಗಳು ಎಂದು ನಿಯೋಜಿಸಲಾಗಿದ್ದು, ನೋಡಲ್ ಅಧಿಕಾರಿಗಳಿಗೆ ತಾಂತ್ರಿಕ ತೊಂದರೆಗಳು ಎದುರಾದಲ್ಲಿ ನಿಯೋಜಿಸಲಾದ ಸಮನ್ವಯಾಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿಗಳಾದ ಡಾ. ಕೆ. ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.


Leave a Reply