Gadag

ಆಕ್ಸಿಜನ್ ಹಾಗೂ ರೆಮಿಡಿಸಿವರ ಲಸಿಕೆ ಬಳಕೆಯಲ್ಲಿ ಸರ್ಕಾರದ ಮಾರ್ಗಸೂಚಿ ಕಡ್ಡಾಯ ಪಾಲನೆಗೆ ಜಿಲ್ಲಾಧಿಕಾರಿ ಸೂಚನೆ


ಗದಗ 4 : ಸೋಂಕಿನ ಎರಡನೇ ಅಲೆಯಿಂದ ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವ ಸೋಂಕಿತರ ಚಿಕಿತ್ಸೆಯಲ್ಲಿ ಸರ್ಕಾರದ ಮಾರ್ಗಸೂಚಿ ಅನುಸಾರ ಆಕ್ಸಿಜನ್ ಹಾಗೂ ರೆಮಿಡಿಸಿವರ ಲಸಿಕೆಯನ್ನು ಬಳಕೆ ಮಾಡುವಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ನಿರ್ದೇಶನ ನೀಡಿದರು.
ಜಿಲ್ಲಾಡಳಿತ ಭವನದಲ್ಲಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಹಾಗೂ ಆಡಳಿತಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವಾಗ ಸರ್ಕಾರದ ಮಾರ್ಗಸೂಚಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರಲ್ಲಿ ಪರಸ್ಪರ ಸಮನ್ವಯದೊಂದಿಗೆ ಸೋಂಕಿತರಿಗೆ ಚಿಕಿತ್ಸೆ ನೀಡಬೇಕು.
ಸಧ್ಯ ಜಿಲ್ಲೆಯಲ್ಲಿ ಸೋಂಕಿತರಿಗೆ ಅಗತ್ಯವಿರುವ ಆಕ್ಸಿಜನ್ ಹಾಗೂ ರೆಮಿಡಿಸಿವರ್ ಲಸಿಕೆಗಳು ಲಭ್ಯವಿದ್ದು ಇವುಗಳನ್ನು ಅಗತ್ಯವಿರುವ ಸೋಂಕಿತರಿಗೆ ಮಾತ್ರ ನೀಡುವಂತೆ ತಿಳಿಸಿದರು. ಅಲ್ಲದೇ ಖಾಸಗಿ ಆಸ್ಪತ್ರೆಗಳಲ್ಲಿ ಕೊವಿಡೇತರ ರೋಗಿಗಳಿಗೂ ಚಿಕಿತ್ಸೆಯನ್ನು ಸರಿಯಾಗಿ ನೀಡಬೇಕು. ಆಸ್ಪತ್ರೆಯ ಶುಚಿತ್ವದೆಡೆಗೆ ಗಮನ ಹರಿಸುವದರೊಂದಿಗೆ ಸರ್ಕಾರದ ಎಲ್ಲ ಮಾರ್ಗಸೂಚಿಗಳ ಅನುಷ್ಠಾನ ಆಗಬೇಕೆಂದರು
ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ನೀಡುವ ಆಕ್ಸಿಜನ್ ಹಾಗೂ ರೆಮಿಡಿಸಿವರ ಲಸಿಕೆ ಬಳಕೆ ಕುರಿತು ಮೇಲ್ವಿಚಾರಣೆಗಾಗಿ ತಂಡವನ್ನು ರಚಿಸಲಾಗಿದ್ದು ಈ ತಂಡವು ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆ ಬಗ್ಗೆ ಪರಿಶೀಲಿಸಿ ವರದಿ ನೀಡಲಿದೆ ಎಂದರು.
ಆರೋಗ್ಯ ಇಲಾಖೆ ವತಿಯಿಂದ ತಂಡವನ್ನು ರಚಿಸಿ  ಖಾಸಗಿ ಆಸ್ಪತ್ರೆಗಳಲ್ಲಿರುವ ಜನರಲ್, ಐಸಿಯು, ಆಕ್ಸಿಜನ ಹಾಗೂ ವೆಂಟಿಲೇಟರ ಹಾಸಿಗೆಗಳ ಬಗ್ಗೆ ಮಾಹಿತಿಯನ್ನು ಕ್ರೋಡಿಕರಿಸಬೇಕು. ಅಲ್ಲದೇ ಖಾಸಗಿ ಆಸ್ಪತ್ರೆಗಳಿಗೆ ನಿಯಮಿತವಾಗಿ ಭೇಟಿ ನೀಡಿ ಸೋಂಕಿತರ ಚಿಕಿತ್ಸೆಯ ವಿವರ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಸೋಂಕಿತರ ಚಿಕಿತ್ಸೆಯಲ್ಲಿ ಯಾವುದೇ ತೊಂದರೆಯಾಗದಂತೆ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಸಮನ್ವಯತದೊಂದಿಗೆ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭರತ ಎಸ್., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ ಬಸರೀಗಿಡ್ಡ, ಸಹಾಯಕ ಔಷಧಿ ನಿಯಂತ್ರಕ ಸಂಗಣ್ಣ ಶಿಳ್ಳೆ ಸೇರಿದಂತೆ ಖಾಸಗಿ ಆಸ್ಪತ್ರೆ ವೈದ್ಯರು, ಆಡಳಿತಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.


Leave a Reply