Ballary

ಕೋವಿಡ್-19: ಜಿಲ್ಲೆಯ ರಾಜ್ಯ ಸರ್ಕಾರಿ ಅಧಿಕಾರಿ ಸಿಬ್ಬಂದಿಗಳು ಲಸಿಕೆ ಪಡೆಯಲು   ಎಸ್.ವಿ.ಸಂಕನೂರ ಮನವಿ    


ಗದಗ ಮೇ 5 : ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಅಧಿಕಾರಿ ಸಿಬ್ಬಂದಿಗಳೂ ನೂರಕ್ಕೆ ನೂರರಷ್ಟು ಲಸಿಕೆ ಪಡೆಯಲು ಗುರಿಯನ್ನು ಹೊಂದಿದ್ದು ಇದಕ್ಕೆ ಜಿಲ್ಲಾಡಳಿತದ ಸಹಕಾರ ಅಗತ್ಯವೆಂದು ವಿಧಾನ ಪರಿಷತ ಸದಸ್ಯ ಎಸ್.ವಿ.ಸಂಕನೂರ ನುಡಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಜರುಗಿದ ಜಿಲ್ಲೆಯ ಎಲ್ಲ ಸರ್ಕಾರಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಲಸಿಕಾಕರಣ ಕುರಿತು ಜರುಗಿದ ಸಭೆಯಲ್ಲಿ ಅವರು ಮಾತನಾಡಿದರು. ಪ್ರಸ್ತುತ ಜಿಲ್ಲೆಯಲ್ಲಿ ಪ್ರಾಥಮಿ, ಪ್ರೌಢ ಹಾಗೂ ಕಾಲೇಜು ಶಿಕ್ಷಕರು ಸೇರಿ 7559 ಶಿಕ್ಷಕರಿದ್ದು ಮಾರ್ಗಸೂಚಿಗಳನ್ವಯ ಲಸಿಕೆ ಪಡೆದ ಶಿಕ್ಷಕರನ್ನು ಬಿಟ್ಟು 4486 ಶಿಕ್ಷಕರು ಲಸಿಕೆ ಪಡೆಯಲು ಬಾಕಿ ಇರುತ್ತದೆ. ಈ ಕುರಿತು ಶಿಕ್ಷಕರಲ್ಲಿ ಅಗತ್ಯದ ಜಾಗೃತಿ ಮೂಡಿಸಿ ಅವರು ಲಸಿಕೆ ಪಡೆಯಲು ಮುಂದಾಗುವಂತೆ ಅಗತ್ಯದ ಕ್ರಮ ವಹಿಸಲಾಗುವದು ಎಂದರು. ಅಲ್ಲದೇ ಜಿಲ್ಲೆಯ ಎಲ್ಲ ಸರಕಾರಿ ಅಧಿಕಾರಿ ಸಿಬ್ಬಂದಿಗಳು ಕಡ್ಡಾಯವಾಗಿ ಲಸಿಕೆ ಪಡೆಯಲು ಮುಂದಾಗುವಂತೆ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಎಸ್.ವಿ.ಸಂಕನೂರ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಜಿಲ್ಲಾಧಿಕಾರಿಗಳು ಸರ್ಕಾರದ ಮಾರ್ಗಸೂಚಿಗಳನ್ವಯ ಅರವತ್ತು ವರ್ಷ ಮೇಲ್ಪಟ್ಟವರಿಗೆ, ಕೋವಿಡ್ ನಿರ್ವಹಣೆಯಲ್ಲಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸಿದ ಇಲಾಖೆ ಅಧಿಕಾರಿ ಸಿಬ್ಬಂದಿ ಹಾಗೂ ನಲವತ್ತೈದು ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಲವತ್ತೈದು ವರ್ಷ ಮೇಲ್ಪಟ್ಟವರು ತಮ್ಮ ಸಮೀಪದ ತಾಲೂಕು ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆಯಬಹುದಾಗಿರುತ್ತದೆ. ಈಗಾಗಲೇ ಮೊದಲನೇ ಹಂತದ ಲಸಿಕೆ ಪಡೆದ ಕೆಲ ನೌಕರಸ್ಥರು ಎರಡನೇ ಡೋಸ್ ಪಡೆಯಲು ಹಿಂಜರಿಯುತ್ತಿದ್ದು ಅಂತಹವರ ಮನವೊಲಿಸಿ ಎರಡನೇ ಡೋಸ್ ಲಸಿಕೆ ಪಡೆಯಲು ಮುಂದಾಗುವಂತೆ ಜಾಗೃತಿ ಮೂಡಿಸಬೇಕು.ಮುಂದಿನ ದಿನಗಳಲ್ಲಿ ಎಲ್ಲ ಇಲಾಖೆ ಅಧಿಕಾರಿಗಳ ಸಭೆ ಕರೆದು ಅಧಿಕಾರಿ ಸಿಬ್ಬಂದಿಗಳು ಕಡ್ಡಾಯವಾಗಿ ಲಸಿಕೆ ಪಡೆಯಲು ಅಗತ್ಯದ ಸೂಚನೆ ನೀಡಲಾಗುವದು ಎಂದರು. ಜಿಲ್ಲಾ ನೌಕರರ ಸಂಘದಿಂದಲೂ ಎಲ್ಲ ಅಧಿಕಾರಿ ಸಿಬ್ಬಂದಿಗಳು ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಲು ಮುಂದಾಗುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ರವಿ ಗುಂಜೀಕರ ಮಾತನಾಡಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಲಾಖೆಗಳ ಪೈಕಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿದ ಕೆಲ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಲಸಿಕೆ ಪಡೆದಿರುತ್ತಾರೆ. ಬಾಕಿ ಇಲಾಖೆಗಳಲ್ಲಿಯ ಸಿಬ್ಬಂದಿಗಳು ಮಾರ್ಗಸೂಚಿಗಳನ್ವಯ ಅರ್ಹರಿದ್ದು ಲಸಿಕೆ ಪಡೆದಿರುವುದಿಲ್ಲ ಅಂತಹವರನ್ನು ಗುರುತಿಸುವದರ ಜೊತೆಗೆ ಜಿಲ್ಲೆಯ ಅಂದಾಜು ಹನ್ನೊಂದು ಸಾವಿರ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತ ಕಟುಂಬಸ್ಥರಿಗೆ ಕಡ್ಡಾಯವಾಗಿ ಲಸಿಕೆ ಪಡೆಯಲು ಮುಂದಾಗುವಂತೆ ಅಗತ್ಯದ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದರು.
ಸಭೆಯಲ್ಲಿ ಕಂದಾಯ ಇಲಾಖೆ ಜಿಲ್ಲಾಧ್ಯಕ್ಷರಾದ ಬಿ.ಎಸ್.ಅಣ್ಣಿಗೇರಿ ಸೇರಿದಂತೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.


Leave a Reply