Gadag

ಕೋವಿಡ್ ನಿಯಂತ್ರಣ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ ಆಕ್ಷಿಜನ್ ಹಾಗೂ ರೆಮಿಡಿಸಿವರ್ ಚುಚ್ಚುಮದ್ದನ್ನು ಅಗತ್ಯವಿರುವವರಿಗೆ ಮಿತವಾಗಿ ಬಳಸಿ


ಗದಗ   ಮೇ 7:   ಗದಗ ಜಿಲ್ಲೆಯಲ್ಲಿ  ಕೋವಿಡ್ ಸೋಂಕು ನಿಯಂತ್ರಣಕ್ಕೆ ಮಾರ್ಗಸೂಚಿಗಳ ಪಾಲನೆ ಕಡ್ಡಾಯ.  ಸೋಂಕಿತರಗೆ ಅಗತ್ಯವಿದ್ದಲ್ಲಿ ಆಕ್ಸಿಜನ್ ಹಾಗೂ ರೆಮಿಡಿಸಿವರ್ ಚುಚ್ಚುಮದ್ದನ್ನು ಮಿತವಾಗಿ ಬಳಕೆ ಮಾಡುವಂತೆ ಸಂಬAಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಂ.ಸುAದರೇಶ್ ಬಾಬು ಅವರು ಸೂಚಿಸಿದರು.
ಜಿಲ್ಲಾಡಳಿತ ಭವನದ  ಜಿಲ್ಲಾ ಪಂಚಾಯತ್ ವಿಡಿಯೋ ಸಭಾಂಗಣದಲ್ಲಿ ಏರ್ಪಡಿಸಲಾದ ಕೋವಿಡ್ ನಿಯಂತ್ರಣ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು, ಸಿಬ್ಬಂದಿಗಳು ಸೇರಿದಂತೆ ಪೌರ ಕಾರ್ಮಿಕರೆಲ್ಲರೂ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಅಲ್ಲದೇ ಅವರಿಗೆ ನಿಯಮಿತವಾಗಿ ಸುರಕ್ಷತಾ ಸಾಮಗ್ರಿಗಳನ್ನು ಇಲಾಖೆಗಳಿಂದ ಸರಬರಾಜು ಮಾಡಬೇಕು.
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ದೃಢಪಟ್ಟ ಪ್ರಕರಣಗಳಲ್ಲಿ ಯಾವುದೇ ರೀತಿಯ ಸೋಂಕು ಲಕ್ಷಣಗಳಿರದಿದ್ದಲ್ಲಿ  ಅವರನ್ನು ಮನೆಯಲ್ಲಿಯೇ ಗೃಹ ದಿಗ್ಬಂಧನದಲ್ಲಿಟ್ಟು ಚಿಕಿತ್ಸೆಗೆ ಅಗತ್ಯವಿರುವ ಔಷಧಿ ಮಾತ್ರೆಗಳನ್ನು ನೀಡಿ ನಿಯಮಿತವಾಗಿ ನಿಗಾ ವಹಿಸಬೇಕು.  ಹಾಗೂ ಗೃಹ ದಿಗ್ಬಂಧನದಲ್ಲಿ ಚಿಕಿತ್ಸೆ ಪಡೆಯಲು ಸ್ಥಳಾವಕಾಶದ ಕೊರತೆಯಿದ್ದಲ್ಲಿ ತಾಲೂಕಿನಲ್ಲಿ ಕೋವಿಡ್ ಕೇರ್ ಕೇಂದ್ರ ಆರಂಭಿಸಿ ಚಿಕಿತ್ಸೆ ಒದಗಿಸಬೇಕು. ಆಕ್ಸಿಜನ್ ಅಗತ್ಯವಿದ್ದಲ್ಲಿ ತಾಲೂಕಾ ಆಸ್ಪತ್ರೆಯಲ್ಲಿ  ದಾಖಲಿಸಿಕೊಂಡು ಸೂಕ್ತ ಚಿಕಿತೆ ನೀಡಬೇಕು. ಒಂದು ವೇಳೆ ಸೋಂಕಿತರಿಗೆ  ಹೆಚ್ಚಿನ ಚಿಕಿತ್ಸೆ  ಅಗತ್ಯವಿದಲ್ಲಿ ಮಾತ್ರ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡಬೇಕು.  ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ನಿಗಾ ವಹಿಸುವಂತೆ ನಿರ್ದೇಶಿಸಿದರು.
ತಾಲೂಕಾ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಮೂಲಭೂತ ಸೌಲಭ್ಯಗಳ ಲಭ್ಯತೆ ಇರುವಂತೆ ನೋಡಿಕೊಳ್ಳಬೇಕು. ಸೋಂಕಿತರಿಗೆ ಚಿಕಿತ್ಸೆ ಯಲ್ಲಿ    ವೈದ್ಯಾಧಿಕಾರಿಗಳ ಹಾಗೂ ಸಿಬ್ಬಂದಿಗಳ ನಿಷ್ಕಾಳಜಿ ಸಹಿಸುವುದಿಲ್ಲ ಎಂದರು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಲ್ಲಿ  ವರದಿ ನೀಡಲು ನಿಯಮಿಸಲಾದ ಸಮಿತಿಯು ತಕ್ಷಣ ಜಿಲ್ಲಾಡಳಿತಕ್ಕೆ ಪರಿಶೀಲಿಸಿ ವರದಿ ನೀಡಬೇಕು. ಈ ಪ್ರಕ್ರಿಯೆಯಲ್ಲಿ ನಿಧಾನಗತಿ ಬೇಡವೆಂದರು.  ಮೃತರ ಅಂತ್ಯಕ್ರಿಯೆಯನ್ನು ಕೋವಿಡ್ ಮಾರ್ಗಸೂಚಿಗಳನ್ವಯ ನೆರವೇರಿಸಬೇಕು.  ಸೋಂಕಿತರಿಗೆ ಚಿಕಿತ್ಸೆ ಸಂಪೂರ್ಣವಾಗಿ ಉಚಿತವಾಗಿ ಎಲ್ಲ ಸರ್ಕಾರಿ ಆಸ್ಪತ್ರೆ  ಹಾಗೂ ಕೋವಿಡ್ ಕೇರ್ ಕೇಂದ್ರಗಳಲ್ಲಿ ಮತ್ತು  ಗೃಹ ದಿಗ್ಬಂಧನದಲ್ಲಿರುವವರಿಗೆ ನೀಡಲಾಗುತ್ತಿದೆ.  ಇದರ ಅನುಷ್ಟಾನ ಸರಿಯಾಗಿ ಆಗಬೇಕೆಂದರು.
ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡುವ ಕ್ರಮಗಳ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ನಿಗಾ ವಹಿಸಬೇಕು. ಅಲ್ಲದೇ ಸೋಂಕಿತರಿಗೆ ನೀಡಿದ ಚಿಕಿತ್ಸೆಯ ವೆಚ್ಚದ ಬಗ್ಗೆಯೂ ಸಹ ಆರೋಗ್ಯ ಇಲಾಖೆ ಅಧಿಕಾರಿಗಳು ಆಗಾಗ ಪರಿಶೀಲಿಸುವಂತೆ ಸೂಚಿಸಿದರು.
ಜಿಲ್ಲೆಯಲ್ಲಿನ 45 ವಯೋಮಾನದ ಮೇಲ್ಪಟ್ಟ ಅರ್ಹರೆಲ್ಲರಿಗೂ ಲಸಿಕೆ ವಿತರಣೆ ನಡೆದಿದ್ದು ಮೊದಲನೇ ಡೋಸ್ ಲಸಿಕೆ ಪಡೆದ ಅರ್ಹರೆಲ್ಲರೂ ಎರಡನೇ ಡೋಸ್ ಲಸಿಕೆಯನ್ನು ನಿಗದಿತ ಕಾಲಾವಧಿಯಲ್ಲಿ ಪಡೆಯಬೇಕು. ಲಸಿಕೆ ನೀಡುವ ಸಿಬ್ಬಂದಿಗಳು ಆದ್ಯತೆಯನುಸಾರ ಎರಡನೇ ಡೋಸ್ ಲಸಿಕೆಯನ್ನು ನೀಡುವಂತೆ ಕ್ರಮ ವಹಿಸಬೇಕೆಂದು ತಿಳಿಸಿದರು.
ಕೋವಿಡ್ ಲಸಿಕೆ ಪಡೆಯಲು ಆಗಮಿಸುವ ಸಾರ್ವಜನಿಕರಿಗೆ ಆಸ್ಪತ್ರೆಯಲ್ಲಿ ಸೂಕ್ತ ಆಸನದ ವ್ಯವಸ್ಥೆ , ನೆರಳಿನ ವ್ಯವಸ್ಥೆ , ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು.  ಪ್ರತಿ ಸಿ.ಎಚ್.ಸಿ. ಹಾಗೂ ತಾಲೂಕಾ ಆಸ್ಪತ್ರೆಗಳಿಗೆ ಹೋಮ್ ಗಾರ್ಡಗಳನ್ನು ಒದಗಿಸಲಾಗಿದ್ದು ಜನಸಂದಣಿ ನಿಯಂತ್ರಣಕ್ಕೆ ಅವರನ್ನು ಬಳಸಿಕೊಳ್ಳುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಿ.ಇ.ಓ ಭರತ್ ಎಸ್ ಮಾತನಾಡಿ ಹೊರ ಜಿಲ್ಲೆ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರ ಮಾಹಿತಿ ಕಲೆ ಹಾಕಿ ಅವರನ್ನು ತಪಾಸಣೆಗೆ ಒಳಪಡಿಸಬೇಕು. ಸೋಂಕಿತರ ಚಿಕಿತ್ಸೆಗಾಗಿ ನೀಡಲಾಗುವ ಔಷಧಿಗಳ ಕಿಟ್ ಸರಬರಾಜು ಸಂಗ್ರಹ ಸರಿಯಾಗಿ ನಿರ್ವಹಿಸಬೇಕು.  ಗ್ರಾಮೀಣ ಭಾಗಕ್ಕೆ  ಬೇರೆಡೆಯಿಂದ ಆಗಮಿಸುವವರ ಮಾಹಿತಿ ಸ್ಥಳೀಯ ಅಧಿಕಾರಿಗಳಲ್ಲಿ ಇರಬೇಕು ಎಂದರು.
ಗ್ರಾಮೀಣ ಹಾಗೂ ಸ್ಥಳೀಯ ಸಂಸ್ಥೆಗಳ ಕೇಂದ್ರಗಳಲ್ಲಿ ಕೋವಿಡ್ ನಿಯಂತ್ರಣ ಕುರಿತು ಹೇರಲಾದ ಮಾರ್ಗಸೂಚಿಗಳ ಕಡ್ಡಾಯ ಪಾಲನೆ ಅಗತ್ಯವಾಗಿದ್ದು ಸ್ಥಳೀಯ ಅಧಿಕಾರಿಗಳು ಸರಿಯಾಗಿ ಕ್ರಮ ವಹಿಸಬೇಕೆಂದು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸತೀಶಕುಮಾರ್ ಎಂ, ಉಪವಿಭಾಗಾದಿಕಾರಿ ರಾಯಪ್ಪ ಹುಣಸಗಿ, ಡಿ.ಎಚ್.ಓ.ಡಾ. ಸತೀಶ ಬಸರಿಗಿಡದ, ಆರ್.ಸಿ.ಎಚ್.ಅಧಿಕಾರಿ, ಡಾ. ಬಿ.ಎಂ.ಗೊಜನೂರ ಸೇರಿದಂತೆ ಆಯಾ ತಾಲೂಕಿನ ತಹಶೀಲ್ದಾರರು, ತಾ.ಪಂ. ಇ.ಓಗಳು , ತಾಲೂಕಾ ವೈದ್ಯಾಧಿಕಾರಿಗಳು, ಎ.ಎಂ.ಒ ಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಜರಿದ್ದರು


Leave a Reply