Belagavi

ಲಕ್ಷಣ ರಹಿತ ಸೋಂಕಿತರಿಗೆ ಕೋವಿಡ್ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲು ಜಿಲ್ಲಾಧಿಕಾರಿ  ಡಾ.ಕೆ.ಹರೀಶ್‌ಕುಮಾರ್ ಸೂಚನೆ


ಬೆಳಗಾವಿ: ಕೋವಿಡ್ ಸೋಂಕು ವ್ಯಾಪಕವಾಗಿ ಹರಡಲು ಕಾರಣರಾಗುತ್ತಿರುವ ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ತ್ವರಿತವಾಗಿ ಗುರುತಿಸಬೇಕು ಹಾಗೂ ಆಕ್ಸಿಜನ್ ಅಗತ್ಯವಿರುವ ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೋವಿಡ್ ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ  ಹುಕ್ಕೇರಿಯ ತಹಶಿಲ್ದಾರ ಕಚೇರಿಯಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಪತ್ತೆ ಹಾಗೂ ಲಕ್ಷಣರಹಿತ ಸೋಂಕಿತರ ಕ್ವಾರಂಟೈನ್ ಗೆ ಸಂಬಂಧಿಸಿದಂತೆ ಹುಕ್ಕೇರಿ ತಾಲ್ಲೂಕಿನಲ್ಲಿ ಉತ್ತಮ ಕೆಲಸ ಮಾಡಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇದೇ ಮಾದರಿಯಲ್ಲಿ ಇತರೆ ತಾಲ್ಲೂಕುಗಳಲ್ಲಿ ಕೆಲಸ ಮಾಡುವ ಅಗತ್ಯವಿದೆ ಎಂದರು.

ಲಕ್ಷ್ಮಣ ರಹಿತ ಸೋಂಕಿತರಿಗೆ ತಾಲ್ಲೂಕು ಮಟ್ಟದಲ್ಲಿ ಆರಂಭಿಸಲಾಗಿರುವ ಕೋವಿಡ್ ಕೇರ್ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ನೀಡಬೇಕು. ತುರ್ತು ಚಿಕಿತ್ಸೆ ಅಗತ್ಯವಿರುವವರಿಗೆ ಮಾತ್ರ ಜಿಲ್ಲಾ ಆಸ್ಪತ್ರೆಗಳಿಗೆ ಕಳಿಸಲು ವ್ಯವಸ್ಥೆ ಕಲ್ಪಿಸಬೇಕು.

ಕೆಲವು ಕಡೆಗಳಲ್ಲಿ ಆಂಬ್ಯಲೆನ್ಸ್ ನವರು ಅಕ್ರಮವಾಗಿ ಹಣ ಪಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ನಿಗಾ ವಹಿಸಬೇಕು. ಇದಲ್ಲದೇ ಹೋಮ್ ಕ್ವಾರಂಟೈನ್ ನಲ್ಲಿರುವ ಸೋಂಕಿತರು ಹೊರಗಡೆ ತಿರುಗಾಡದಂತೆ ಎಚ್ಚರಿಕೆಯನ್ನು ವಹಿಸಬೇಕು ಎಂದು ಹೇಳಿದರು.

ಹುಕ್ಕೇರಿ ಹಾಗೂ ಸಂಕೇಶ್ವರ ಪಟ್ಟಣದ ವರ್ತಕರು ಸಭೆ ನಡೆಸಿ, ಸ್ವಯಂಪ್ರೇರಣೆಯಿಂದ ವ್ಯಾಪಾರ-ವಹಿವಾಟು ಬಂದ್ ಮಾಡಿರುವುದಕ್ಕೆ ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಉಪ ವಿಭಾಗಾಧಿಕಾರಿ ಅಶೋಕ ತೇಲಿ, ಹುಕ್ಕೇರಿ ತಹಶಿಲ್ದಾರ ಶಿವಾನಂದ ಹೂಗಾರ, ತಾಲ್ಲೂಕು ಆರೋಗ್ಯಾಧಿಕಾರಿಗಳು, ಹುಕ್ಕೇರಿ ಮತ್ತು ಸಂಕೇಶ್ವರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.


Leave a Reply