Belagavi

ಕಾಂಗ್ರೆಸ್ ಮುಖಂಡ ಪ್ರಕಾಶ ದೇಶಪಾಂಡೆ ಇನ್ನಿಲ್ಲ!


ಹುಕ್ಕೇರಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಕಾಶ ದೇಶಪಾಂಡೆ ಇಂದು ಬುಧವಾರ ಮಧ್ಯಾನ್ಹ ಒಂದು ಘಂಟೆಗೆ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು.

ಕೊರೋನಾ ಸೋಂಕಿನಿಂದಾಗಿ ಅಸ್ವಸ್ಥರಾಗಿದ್ದ ಅವರನ್ನು ಹುಕ್ಕೇರಿಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಇಂದು ಬೆಳಿಗ್ಗೆ ಆಕ್ಸಿಜೆನ್ ಮಟ್ಟ ತೀವ್ರವಾಗಿ ಕುಸಿದಿದ್ದರಿಂದ ಅವರು ಕೊನೆಯುಸಿರೆಳೆದರು. ಹುಕ್ಕೇರಿ ತಾಲೂಕಾ ಕ.ಸಾ.ಪ.ಘಟಕದ ಅಧ್ಯಕ್ಷರಾಗಿದ್ದ ಅವರು ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಡೆದಿರುವ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದರು.
ಕಳೆದ 40 ವರ್ಷಗಳಿಂದ ನಾಡಿನ ಪ್ರಮುಖ ದಿನಪತ್ರಿಕೆಗಳಾದ ಪ್ರಜಾವಾಣಿ,ಕನ್ನಡ ಪ್ರಭ,ಸಂಯುಕ್ತ ಕರ್ನಾಟಕ ದಿನಪತ್ರಿಕೆಗಳ ವರದಿಗಾರರಾಗಿ ಕಾರ್ಯ ನಿರ್ವಹಿಸಿದ ಅವರು ಕಾಂಗ್ರೆಸ್ ಸೇವಾದಳದಲ್ಲಿ ಅಪಾರ ಸೇವೆ ಸಲ್ಲಿಸಿದ್ದರು.
ಬೆಳಗಾವಿ ಜಿಲ್ಲೆಯ ಹಿರಿಯ ಪತ್ರಕರ್ತರಲ್ಲಿ ಒಬ್ಬರಾಗಿದ್ದ ಅವರು ನೇರ ನುಡಿಗೆ ಹೆಸರಾಗಿದ್ದರು.

ದಿವಂಗತರು ತಮ್ಮ ಹಿಂದೆ ಪತ್ನಿ,ಒಬ್ಬ ಪುತ್ರ ಮತ್ತು ಒಬ್ಬ ಪುತ್ರಿಯನ್ನು ಬಿಟ್ಟು ಅಗಲಿದ್ದಾರೆ.


Leave a Reply