Belagavi

ಪತ್ರಕರ್ತರ ಮೇಲೆ ಸಿಪಿಐ ಹಲ್ಲೆ : ಸವದತ್ತಿ ಸಂಘದಿಂದ ಖಂಡನೆ


ಸವದತ್ತಿ-: ಮೂಡಲಗಿಯ ಸಿಪಿಐ ವೆಂಕಟೇಶ ಮುರನಾಳ ಪತ್ರಿಕೆ ಹಂಚುತ್ತಿದ್ದ ಪತ್ರಕರ್ತರಿಗೆ ಅವಾಚ್ಯ ಪದ ಬಳಸಿದ್ದಲ್ಲದೇ ದೈಹಿಕವಾಗಿ ಹಲ್ಲೆ ನಡೆಸಿರುವದನ್ನು ಖಂಡಿಸಿ ಸವದತ್ತಿ ತಾಲೂಕಾ ಪತ್ರಕರ್ತರ ಸಂಘದಿಂದ ಬುಧವಾರ ಸವದತ್ತಿ ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಪತ್ರಕರ್ತರು ಕಳೆದ ಹಾಗೂ ಈ ಬಾರಿಯ ಕೋವಿಡ್ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿದ್ದಾರೆ.
ಈ ಪತ್ರಕರ್ತರ ಕಾರ್ಯ ಶ್ಲಾಘಿಸಿರುವ ರಾಜ್ಯ ಸರಕಾರ ಫ್ರಂಟ್‍ಲೈನ್ ವಾರಿಯರ್ಸ್ ಎಂದು ಘೋಷಿಸಿ, ಇವರಿಗೆ ಯಾವುದೇ ರೀತಿಯ ತೊಂದರೆ ನೀಡದಂತೆ ಆದೇಶ ಹೊರಡಿಸಿದೆ. ಆದಾಗ್ಯೂ ಸಹ ಮೂಡಲಗಿ ಸಿಪಿಐ ವೆಂಕಟೇಶ ಮುರನಾಳ ಪತ್ರಕರ್ತರನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಖಂಡನಾರ್ಹ.
ಸಮಾಜವನ್ನು ಜಾಗೃತಿ ಮೂಡಿಸುವಲ್ಲಿ ಎಲ್ಲ ಇಲಾಖೆಗಳೊಂದಿಗೆ ಜೊತೆಗೂಡಿ ಪತ್ರಿಕಾ ರಂಗ ಕಾರ್ಯ ನಿರ್ವಹಿಸುತ್ತಿದೆ. ಕಟ್ಟಕಡೆಯ ವ್ಯಕ್ತಿಗೆ ಪತ್ರಿಕೆ ಮೂಲಕ ಎಲ್ಲ ಮಾಹಿತಿ ನೀಡುವ ಜವಾಬ್ದಾರಿ ನಮ್ಮದಾಗಿದೆ. ಪತ್ರಕರ್ತರ ಕಾರ್ಯಕ್ಕೆ ಅಡ್ಡಿ ಪಡಿಸದೇ ಎಲ್ಲ ಇಲಾಖೆಗಳಿಂದ ಸಹಕಾರ ನೀಡಬೇಕೆಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗೂ ಕೂಡಲೇ ಸಿಪಿಐ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಬಿ.ಎಮ್. ಶಿರಸಂಗಿ, ಬಾಲಕೃಷ್ಣ ಮಿರಜಕರ, ಡಿ. ಎಸ್. ಕೊಪ್ಪದ, ಮಹೇಶ ಮಿರಜಕರ, ಫಕ್ಕಿರಪ್ಪ ಸಂಗಪ್ಪನವರ, ಐ.ಎಮ್ ಫಣಿಬಂದ್, ನಂದಕುಮಾರ ಚಂದರಗಿ, ಮಂಜುನಾಥ ಜಗದಾರ, ರವೀಂದ್ರ ಗಿರಿಜನ್ನವರ, ಈರಣ್ಣ ಕೋರಿಶೆಟ್ಟರ ಇದ್ದರು.
(ವರದಿ ಈರಣ್ಣಾ ಹುಲ್ಲೂರ)


Leave a Reply