Belagavi

ಕಷ್ಟದ ಸಮಯದಲ್ಲಿ ಎಲ್ಲ ಸಮುದಾಯ ಒಂದಾಗಬೇಕು- ರಾಘವೇಂದ್ರ ಕಾಗವಾಡೆ


ಬೆಳಗಾವಿ.ಮೇ.೨೦: ಭಾರತ ದೇಶ ಸೇರಿದಂತೆ ಇಡಿ ವಿಶ್ವದಲ್ಲಿ ಕೋವಿಡ ವೈರಸ್ ತಾಂಡವವಾಡುತ್ತಿದ್ದು, ಇದೊಂದು ವಿಶ್ವಕ್ಕೆ ಎದುರಾದ ಸಂಕಷ್ಟದ ಸಮಯವಾಗಿದೆ. ಇಂತಹ ಸಾಮೂಹಿಕ ಸಂಕಷ್ಟದ ಸಂದರ್ಭದಲ್ಲಿ ಎಲ್ಲ ಸಮುದಾಯಗಳು ಒಂದಾಗಿ ಸಂಕಷ್ಟಗಳನ್ನು ಎದುರಿಸುವುದು ಇಂದಿನ ಅಗತ್ಯತೆಯಾಗಿದೆ ಎಂದು ಆರ್.ಎಸ್.ಎಸ್. ಉತ್ತರ ಕರ್ನಾಟಕದ ಪ್ರಾಂತ ಕಾರ್ಯವಾಯ ರಾಘವೇಂದ್ರ ಕಾಗವಾಡೆ ಅವರು ಇಂದಿಲ್ಲಿ ಹೇಳಿದರು.
ಗುರುವಾರದಂದು ಬೆಳಗಾವಿಯ ಮಹಾವೀರ ಭವನದಲ್ಲಿ ಜೈನ ಇಂಟರ್‌ನ್ಯಾಷನಲ್ ಟ್ರೆಡ ಆರ್ಗನೈಝೇಶನ ಜೀತೋ ಸಂಸ್ಥೆಯ ವತಿಯಿಂದ ಹಾಗೂ ಜೀತೋ ಶ್ರೀಮತಿ ಸೋನಿಯಾಬಾಯಿ ಮಂಗಿಲಾಲಜಿ ಸಾಮಸುಖಾ ಹೆಲ್ತ ಕೇರ ವತಿಯಿಂದ ಆಯೋಜಿಸಲಾದ ಜೀತೋ ಆಕ್ಸಿಜನ್ ಸರ್ಪೋಟ ಸೆಂಟರ್ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೋವಿಡ -೧೯ ಸಂದರ್ಭದಲ್ಲಿ ಕಳೆದ ವರ್ಷವೂ ಇಡಿ ವಿಶ್ವದಲ್ಲಿ ಹಾಹಾಕಾರ ಉಂಟಾಗಿತ್ತು. ಇದಕ್ಕೆ ಭಾರತ ದೇಶವೂ ಹೊರತಾಗಿರಲಿಲ್ಲ. ಎಲ್ಲ ದೇಶಗಳ ಸರಕಾರಗಳು ಅಲ್ಲಿನ ನಾಗರಿಕರಿಗೆ ಚಿಕಿತ್ಸೆ ಸೌಕರ್ಯವನ್ನು ಕಲ್ಪಿಸಿಕೊಟ್ಟಿವೆ. ಅದರಂತೆ ಭಾರತದ ದೇಶದಲ್ಲಿಯೂ ಸಹ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ಮತ್ತು ಸರಕಾರ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಕೋರೊನಾ ವೈರಸ್ ತಡೆಗಟ್ಟುವಿಕೆಯಲ್ಲಿ ಮತ್ತು ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡುತ್ತಿವೆ.ಇದರ ಜೊತೆಗೆ ಭಾರತ ದೇಶದಲ್ಲಿ ಪರೋಪಕಾರ ನಿಸ್ವಾರ್ಥ ಭಾವನೆಯಿಂದ ಕಾರ್ಯ ನಿರ್ವಹಿಸುತ್ತಿರುವ ಅನೇಕ ಸಂಘ ಸಂಸ್ಥೆಗಳ ಸಹಾಯದಿಂದ ಬಹುತೇಕ ಜನರಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗುತ್ತಿದೆ. ಇಂತಹ ಕಷ್ಟದ ಕಾಲದಲ್ಲಿ ಎಲ್ಲ ಸಮುದಾಯದವರು ಒಗ್ಗಟ್ಟಿನಿಂದ ತಮ್ಮ ಕೈಲಾದ ಸಹಾಯವನ್ನು ಸಮಾಜಕ್ಕೆ ನೀಡಿದರೆ ಎಂತಹ ಕಷ್ಟವನ್ನು ಸಹ ತಡೆಯಬಹುದಾಗಿದೆ ಎಂದು ಅವರು ತಿಳಿಸಿದರು.
ಬೆಳಗಾವಿಯಂತಹ ನಗರದಲ್ಲಿ ಅನೇಕ ಸಂಘ ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ಸಮಾಜ ಸೇವೆ ಮಾಡುತ್ತಿವೆ. ಆರ್.ಎಸ್.ಎಸ್. ಸಹ ಬೆಳಗಾವಿಯ ಉದಯ ಹೋಟೆಲ ಮತ್ತು ಅನಿಗೋಳದ ಸಂತ ಮೀರಾ ಶಾಲೆಯಲ್ಲಿ ಕೋರೊನಾ ಸೋಂಕಿತರ ಆರೈಕೆಯ ವ್ಯವಸ್ಥೆ ಮಾಡಿದೆ. ಅದರಂತೆ ಇದೀಗ ಜೈನ ಸಮಾಜದಲ್ಲಿ ಸಮಾಜ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಜೀತೋ ಸಂಸ್ಥೆಯು ಆಕ್ಸಿಜನ್ ಸಪೋರ್ಟ ಸೆಂಟರ್ ಪ್ರಾರಂಭಿಸಿರುವುದು ಶ್ಲಾಘನೀಯವಾಗಿದೆ ಎಂದರು.
ಸಮಾರAಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಆಕ್ಸಿಜನ್ ಸೆಂಟರ್ ಪ್ರೋಜೆಕ್ಟ ಕನ್ವೇನರ ವಿಕ್ರಮ ಜೈನ ಅವರು ಮಾತನಾಡಿ, ಈ ಕೇಂದ್ರದಲ್ಲಿ ೧೫ ಹಾಸಿಗೆಗಳಿದ್ದು, ಆಕ್ಸಿಜನ ಕೊರತೆ ಎದುರಿಸುವ ಸೋಂಕಿತರಿಗೆ ವೈದ್ಯರ ಸಲಹೆ ಮೇರೆಗೆ ಸೋಂಕಿತರಿಗೆ ಸುಮಾರು ೫ ಗಂಟೆಗಳ ಕಾಲ ಆಕ್ಸಿಜನ ನೀಡುವ ವ್ಯವಸ್ಥೆ ಮಾಡಲಾಗಿದೆ. ಸ್ಥಳದಲ್ಲಿ ಅಂಬ್ಯುಲೇನ್ಸ್ ಸೇವೆ, ೨೪ ಗಂಟೆಗಳ ಕಾಲ ವೈದ್ಯಕೀಯ ಸೇವೆ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಎಲ್ಲ ಸೇವೆಗಳು ಜೀತೋ ಸಂಸ್ಥೆಯ ವತಿಯಿಂದ ಉಚಿತವಾಗಿ ಮಾಡಲಾಗುತ್ತಿದೆ. ಬಿ.ಟಿ.ಪಾಟೀಲ ಕಂಪನಿ ರಮೇಶ ಶಹಾ, ಜೈನ ಯುವಕ ಮಂಡಳ, ಮಹಾವೀರ ಭವನ ಸೇರಿದಂತೆ ಅನೇಕ ದಾನಿಗಳು ಮುಂದೆ ಬಂದು ಸಹಾಯ ಹಸ್ತ ನೀಡಿದ್ದರಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸಹಾಯವಾಗಿದೆ ಎಂದು ಅವರು ವಿವರಿಸಿದರು.
ಸಮಾರಂಭದ ವೇದಿಕೆ ಮೇಲೆ ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮಾಜಿ ಶಾಸಕ ಸಂಜಯ ಪಾಟೀಲ, ಪ್ರವೀಣಕುಮಾರ ಸಾಮಸುಖಾ, ಸಚಿನ ಪಾಟೀಲ, ಔಷಧೀಯ ಸಹಾಯಕ ನಿಯಂತ್ರಕ ಬಿರಾದಾರ ಉಪಸ್ಥಿತರಿದ್ದರು. ಜೀತೋ ಬೆಳಗಾವಿ ವಿಭಾಗದ ಅಧ್ಯಕ್ಷ ಸುನಿಲ ಕಟಾರಿಯಾ ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯದರ್ಶಿ ಅಂಕಿತ ಖೋಡಾ ವಂದಿಸಿದರು. ಅಭಿಜೀತ ಭೋಜನ್ನವರ ಕಾರ್ಯಕ್ರಮ ನಿರೂಪಿಸಿದರು.


Leave a Reply