Koppal

ಗವಿಮಠದಲ್ಲಿ 100 ಹಾಸಿಗೆ ಸಾಮರ್ಥ್ಯದ ಕೋವಿಡ್ ಸೆಂಟರ್ ಗೆ ಕರಡಿ ಸಂಗಣ್ಣ ಭೇಟಿ


ಕೊಪ್ಪಳ: ಕೊರೊನೊ ಪೀಡಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗವಿಮಠದ ವೃದ್ಧಾಶ್ರಮದಲ್ಲಿ ಆರಂಭವಾಗುತ್ತಿರುವ ಕೋವಿಡ್ ಕೇರ್ ಸೆಂಟರ್ ಗೆ ಮಂಗಳವಾರ ಸಂಸದ ಸಂಗಣ್ಣ ಕರಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಜಿಲ್ಲಾಡಳಿತ ಮತ್ತು ಗವಿಮಠದ ಸಹಯೋಗದಲ್ಲಿ 100 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ತಾತ್ಕಾಲಿಕವಾಗಿ ಆರಂಭವಾಗಲಿದ್ದು, ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಲಿದೆ. ಆಮ್ಲಜನಕ ಹೊಂದಿದ ವ್ಯವಸ್ಥಿತ ಹಾಸಿಗೆ, ಆಹ್ಲಾದಕರ ಪರಿಸರ ಸೋಂಕಿತರ ರೋಗ ನಿರ್ಮೂಲನೆಗೆ ಸಹಕಾರಿ ಆಗಲಿದೆ’ ಎಂದು ಸಂಸದರು ಭರವಸೆ ವ್ಯಕ್ತಪಡಿಸಿದರು.
ಈಚೆಗೆ ಶ್ರೀಮಠಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ಮತ್ತು ಸಂಸದ ಸಂಗಣ್ಣ ಕರಡಿ ಭೇಟಿ ನೀಡಿದಾಗ ಮಠದ ಕಟ್ಟಡಗಳನ್ನು ಬಳಸಿಕೊಳ್ಳುವಂತೆ ಸ್ವಾಮೀಜಿ ಸಲಹೆ ನೀಡಿದ್ದರು.

ಸ್ವಾಮೀಜಿ ಅವರ ಸಾಮಾಜಿಕ ಕಾಳಜಿಗೆ ಸ್ಪಂದಿಸಿದ ಸರ್ಕಾರ ಆಸ್ಪತ್ರೆ ನಿರ್ಮಾಣವನ್ನು ಒಂದು ವಾರದಲ್ಲಿಯೇ ಸಜ್ಜುಗೊಳಿಸಿದೆ.
ಶುದ್ಧ ಕುಡಿಯುವ ನೀರು, ವಿದ್ಯುತ್, ಮಠದ ವತಿಯಿಂದ ಪ್ರಸಾದ ಪ್ರಸಾದ ವ್ಯವ್ಯಸ್ಥೆಯನ್ನು ಮಾಡಲಾಗುತ್ತಿದೆ. ಭೌತಿಕ ಕಟ್ಟಡಗಳ ಜೊತೆಗೆ ಜೀವಪರ ಕಾಳಜಿ ಹೊಂದಿದ ಮಠದ ಸಾಮಾಜಿಕ ಕಳಕಳಿಯನ್ನು ಶ್ಲಾಘಿಸಿರುವ ಸಂಸದರು. ವೈದ್ಯರು ರೋಗಿಗಳಿಗೆ ಸೇವಾ ಮನೋಭಾವದಿಂದ ಉಚಿತ ಚಿಕಿತ್ಸೆ ನೀಡುವ ಮೂಲಕ ಜಿಲ್ಲೆಯಲ್ಲಿ ಕೊರೊನಾವನ್ನು ಸಂಪೂರ್ಣ ನಿಯಂತ್ರಣ ಮಾಡಬೇಕು. ಜನರು ಇದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ಸುನೀಲ್ ಹೆಸರೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ್ ಮೈನಳ್ಳಿ ಮುಂತಾದರು ಇದ್ದರು.


Leave a Reply