ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಶಿಕ್ಷೆ

ಕೊಪ್ಪಳ ಜ.08 : ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಶ್ಯಾಮ ಕನ್ನಾಳ ಎಂಬ ವ್ಯಕ್ತಿಯ ಮೇಲಿನ ಆರೋಪವು ಸಾಬೀತಾದ ಹಿನ್ನೆಲೆಯಲ್ಲಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರಾದ (ಪೋಕ್ಸೋ) ಶಂಕರ ಎಂ. ಜಾಲವಾದಿ ಅವರು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಸಂಗನಾಳ ಗ್ರಾಮದ ಶ್ಯಾಮ ಕನ್ನಾಳ ಎಂಬ ಆರೋಪಿತನು ಅಪ್ರಾಪ್ತ ವಯಸ್ಸಿನ ಬಾಲಕಿ ತಮ್ಮೂರಿನ ಹೊರವಲಯದಲ್ಲಿ ಬಹಿರ್ದೆಸೆಗೆ ಹೋದಾಗ ಅವಳಿಗೆ ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿ ಸಂಗನಾಳ ಶಾಲೆಯ ಹತ್ತಿರ ಆಕೆಗೆ ಅತ್ಯಾಚಾರ ಮಾಡಿರುವ ಆರೋಪವು ತನಿಖೆಯಲ್ಲಿ ಸಾಬೀತಾಗಿದ್ದರಿಂದ ಕುಷ್ಟಗಿಯ ಸಿಪಿಐ ಗಿರೀಶ ರೋಡ್ಕರರವರು ಆರೋಪಿಯ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ತನಿಖೆಯಲ್ಲಿ ಆರೋಪಿತನ ಮೇಲಿನ ಆರೋಪಣೆಗಳು ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 07 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 35 ಸಾವಿರಗಳ ದಂಡ ವಿಧಿಸಿ, ದಂಡದ ಮೊತ್ತದಲ್ಲಿ ರೂ. 20 ಸಾವಿರಗಳನ್ನು ಬಾಧಿತಳಿಗೆ ನೀಡುವಂತೆ ನ್ಯಾಯಾಧೀಶರು ತೀರ್ಪು ಹೊರಡಿಸಿರುತ್ತಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ಪ್ರಕರಣವನ್ನು ನಡೆಸಿ ವಾದ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

Leave A Reply

Your email address will not be published.