karanataka

ಬೆಳಗಾವಿ ಜಿಲ್ಲಾ ಆಸ್ಪತ್ರೆ ಸರ್ವತ್ರ ಅಸಮಾಧಾನ


ಬೆಳಗಾವಿ : ಇಲ್ಲಿಯ ಜಿಲ್ಲಾ ಆಸ್ಪತ್ರೆಯ ಸ್ಥಿತಿ ಗತಿಯ ಕುರಿತು ಕಳೆದ ಸುಮಾರು 2 -3 ತಿಂಗಳಿನಿಂದಲೂ ಎಲ್ಲ ಮಾಧ್ಯಮಗಳೂ ಹೊರಹಾಕುತ್ತಲೇ ಬಂದಿವೆ. ಆದರೆ ಯಾವುದೂ ಪರಿಣಾಮಬೀರಿಲ್ಲ. ಅಲ್ಲಿನ ಪರಿಸ್ಥಿತಿ ಸ್ವಲ್ಪವೂ ಸುಧಾರಿಸಿಲ್ಲ, ಬದಲಾಗಿ ಇನ್ನಷ್ಟು ಹದಗೆಡುತ್ತಲೇ ಹೋಗಿದೆ.

ಅಲ್ಲಿ ಮಾನವೀಯತೆ ಶಬ್ದಕ್ಕೆ ಅರ್ಥವೇ ಇಲ್ಲ. ಕಣ್ಣೆದುರೇ ನೂರಾರು ಜನರು ಸಾಯುತ್ತಿದ್ದರೂ ಅದಕ್ಕೆ ಗಂಭೀರತೆಯೇ ಇಲ್ಲ. ಎಲ್ಲ ಬೆಳವಣಿಗೆಗಳನ್ನು ಗಮನಿಸಿದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಶನಿವಾರ ಪಿಪಿಇ ಕಿಟ್ ಧರಿಸಿ ಒಳಗಡೆ ಹೋಗಿ ಬಂದಿದ್ದಾರೆ. ಎಲ್ಲವನ್ನೂ ಬಹಿರಂಗವಾಗಿ ಹೇಳುವ ಸ್ಥಿತಿ ಇಲ್ಲ ಎಂದಿದ್ದಾರೆ. ಇದೊಂದೇ ಮಾತು ಸಾಕು ಹೇಗಿದೆ ಪರಿಸ್ಥಿತಿ ಎನ್ನುವುದಕ್ಕೆ.

ಮಾಧ್ಯಮಗಳಲ್ಲಿ ಬರುತ್ತಿರುವುದಕ್ಕಿಂತ ಪರಿಸ್ಥಿತಿ ಭೀಕರವಾಗಿದೆ ಎಂದು ಸವದಿ ಹೇಳಿದ್ದಾರೆ. ಅಲ್ಲಿರುವ 2 ಶವಗಳನ್ನು ನೋಡಿದ್ದೇನೆ. ಅವರು ಯಾವಾಗ ಮೃತಪಟ್ಟಿದ್ದಾರೆ, ಇನ್ಯಾವಾಗ ಶವವನ್ನು ಅಲ್ಲಿಂದ ತೆಗೆಯಲಾಗುತ್ತದೆ ಎನ್ನುವುದನ್ನು ಕೇಳಿ ತಿಳಿದುಕೊಂಡಿದ್ದೇನೆ ಎಂದಿದ್ದಾರೆ.
ಇಲ್ಲಿ ಎಲ್ಲವನ್ನೂ ಹೇಳಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳಿಗೆ ಎಲ್ಲವನ್ನೂ ವಿವರಿಸುತ್ತೇನೆ. ಅವರೇ ಖುದ್ದಾಗಿ ಇಲ್ಲಿಗೆ ಬರಲಿದ್ದಾರೆ ಎಂದು ಸವದಿ ತಿಳಿಸಿದ್ದಾರೆ. ಬಿಮ್ಸ್ ನಿರ್ದೇಶಕರನ್ನು ಈ ಹಿಂದೆ ಬಹಿರಂಗ ಸಭೆಗಳಲ್ಲೇ ಲಕ್ಷ್ಣಣ ಸವದಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಏನೂ ಪ್ರಯೋಜನವಾಗಿಲ್ಲ.

ಜೀವ ಹೋಗುತ್ತಿದೆ, ಹೇಗಾದರೂ ಬಿಮ್ಸ್ ನಲ್ಲಿ ಬೆಡ್ ಕೊಡಿಸಿ ಎಂದು ನಿತ್ಯ ಮಾಧ್ಯಮ ಪ್ರತಿನಿಧಿಗಳಿಗೂ ಹತ್ತಾರು ಫೋನ್ ಬರುತ್ತವೆ. ಅಲ್ಲಿನ ಅಧಿಕಾರಿಗಳನ್ನು ಕೇಳಿದರೆ ಒಂದೂ ಬೆಡ್ ಇಲ್ಲ, ಬರಲೇಬೇಡಿ ಎನ್ನುತ್ತಾರೆ. ಇದೇ ವೇಳೆ ವೆಬ್ ಸೈಟ್ ತೆರೆದು ನೋಡಿದರೆ 65 -70 ಆಕ್ಸಿಜನ್ ಬೆಡ್ ಖಾಲಿ ಇದೆ ಎಂದು ಹಾಕಲಾಗಿರುತ್ತದೆ. ಯಾರನ್ನು ದಾರಿತಪ್ಪಿಸುತ್ತಿದ್ದಾರೆ.

ಯಾವುದೇ ಮಂತ್ರಿ, ಅಧಿಕಾರಿಗಳನ್ನು ಕೇಳಿದರೂ ನಮ್ಮಲ್ಲಿ ಬೆಡ್ ಸಮಸ್ಯೆ ಇಲ್ಲ, ಆಕ್ಸಿಜನ್ ಸಮಸ್ಯೆ ಇಲ್ಲ, ಔಷಧ ಸಮಸ್ಯೆ ಇಲ್ಲ, ಇಂಜಕ್ಷನ್ ಸಮಸ್ಯೆ ಇಲ್ಲ ಎನ್ನುತ್ತಾರೆ. ಆದರೆ ಇಲ್ಲಿನ ಪರಿಸ್ಥಿತಿ ನೋಡಿದರೆ ಯಾವುದೂ ಇರುವುದಿಲ್ಲ.

ಬಾಗಲಕೋಟೆಯ ಗೋವಿಂದ ಕಾರಜೋಳ ಅವರಿಗೆ ಜಿಲ್ಲಾ ಮಂತ್ರಿ ಸ್ಥಾನ ಕೊಡಲಾಗಿದೆ. ಇಂತಹ ಪರಿಸ್ಥಿತಿಯಲ್ಲೂ ನಾಮಕೇವಾಸ್ತೆ ಜಿಲ್ಲಾ ಮಂತ್ರಿ ಮಾಡಿದರೆ ಏನು ಪ್ರಯೋಜನ?
ಶಾಸಕರಾದ ಅಭಯ ಪಾಟೀಲ, ಲಕ್ಷ್ಮಿ ಹೆಬ್ಬಾಳಕರ್ ಕೂಡ ಬಿಮ್ಸ್ ಪರಿಸ್ಥಿತಿ ಕುರಿತು ಎಳೆಎಳೆಯಾಗಿ ಬಿಡಿಸಿಡುತ್ತ ಬಂದಿದ್ದಾರೆ.

ಅವರಿಗೆ ಅವರ ಮತದಾರರ ಪರಿಸ್ಥಿತಿ ಕಂಡೂ ಪರಿಹರಿಸಲಾಗದ ಪರಿಸ್ಥಿತಿ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರ ನಿರೀಕ್ಷೆ ಮುಖ್ಯಮಂತ್ರಿ ಯಡಿಯೂರಪ್ಪ ಆಗಮನದ ಮೇಲೆ ನೆಟ್ಟಿದೆ. ಅವರೊಬ್ಬರು ಬಂದರೆ ಮಾತ್ರ ಪರಿಸ್ಥಿತಿ ಸುಧಾರಿಸಬಹುದು ಎನ್ನುವ ಮಟ್ಟಿಗೆ ಬಂದು ನಿಂತಿದೆ. ಅವರು ಯಾವಾಗ ಬರುತ್ತಾರೆ ಕಾದು ನೋಡಬೇಕಿದೆ.

ಹೇಳಿಕೆ

ವೈದ್ಯರು ಕಣ್ಣಿಗೆ ಕಾಣುವ ದೇವರು ಎಂದು ಹೇಳ್ತಾರೆ. ಆದರೆ ಬಿಮ್ಸ್ ನಲ್ಲಿ ಅವ್ಯವಸ್ಥೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊರೊನಾ ಸೋಂಕಿತರ ನಡುವೆಯೇ ಹೆಣಗಳನ್ನೂ ಇರಿಸಲಾಗುತ್ತಿದೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಮ್ಸ್ ಆಸ್ಪತ್ರೆ ಅವಸ್ಥೆ ಬಗ್ಗೆ ಗಮನಕ್ಕೆ ಬಂದಿದೆ. ಅಲ್ಲಿ ಮೂರು ಗುಂಪುಗಳಿವೆ ಅವರ ಹೆಸರು ಇವರು, ಇವರ ಹೆಸರು ಅವರು ಕೆಡಿಸುವ ಕೆಲಸ ಮಾಡುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಕೇವಲ 370 ಬೆಡ್ ಗಳಿವೆ. ಇನ್ನು 500 ಆಕ್ಸಿಜನ್ ಬೆಡ್ ಮಾಡಬೇಕಿದೆ. ಜನ ಕೇಳಿದರೆ ಬೆಡ್ ಇಲ್ಲ ಎಂದು ಮನೆಗೆ ಕಳುಹಿಸುತ್ತಿದ್ದಾರೆ. ಈ ಅವ್ಯವಸ್ಥೆ ಸರಿ ಹೋಗುವುದಾದರೂ ಯಾವಾಗ ಎಂದು ಪ್ರಶ್ನಿಸಿದ್ದಾರೆ.

ವೈದ್ಯರ ನಡೆ ಹಳ್ಳಿ ಕಡೆ ಎಂದು ಸರ್ಕಾರ ಅಭಿಯಾನ ಆರಂಭಿಸಿದೆ. ಆದರೆ ನನ್ನ ಕ್ಷೇತ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲ. ಜಿಲ್ಲೆಯಲ್ಲಿನ ಈ ಅವ್ಯವಸ್ಥೆ ಸರಿಪಡಿಸುವಂತೆ ಸಿಎಂ ಗಮನಕ್ಕೆ ತಂದಿದ್ದೇನೆ. ಇನ್ನು ಆಶಾಕಾರ್ಯಕರ್ತೆಯರಿಗೆ 3 ತಿಂಗಳಿಂದ ಸಂಬಳ ನೀಡಿಲ್ಲ ಎಂಬುದನ್ನೂ ಗಮನಕ್ಕೆ ತಂದಿದ್ದೇನೆ.

ಎರಡು ಮೂರು ದಿನಗಳಲ್ಲಿ ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
(ವರದಿ ಈರಣ್ಣಾ ಹುಲ್ಲೂರ ಬೆಳಗಾವಿ)


Leave a Reply