karanataka

ಮೋದಿ ಸರಕಾರಕ್ಕೆ ಏಳು ವರ್ಷ : ಜನರಿಗೆ ವಿವಿಧ ಕಿಟ್ ವಿತರಿಸಿದ ಸಂಸದೆ ಮಂಗಲಾ ಅಂಗಡಿ


ಬೆಳಗಾವಿ :ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಏಳು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಜಿಲ್ಲೆಯ ವಿವಿಧೆಡೆ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಬೆಳಗಾವಿ ಸಂಸದೆ ಮಂಗಲಾ ಸುರೇಶ ಅಂಗಡಿ ಅವರು ಕೋವಿಡ್ ನಿಂದ ತೊಂದರೆ ಅನುಭವಿಸುತ್ತಿರುವ ಬಡ ಕುಟುಂಬದವರಿಗೆ ವಿವಿಧ ಕಿಟ್ ಗಳನ್ನು ವಿತರಿಸಿದರು.

ಬೆಳಗಾವಿ ಗ್ರಾಮೀಣ ಬಿಜೆಪಿ ವತಿಯಿಂದ ಗ್ರಾಮೀಣ ಮತಕ್ಷೇತ್ರದ ಬಾಗೇವಾಡಿ, ಬೆಂಡಿಗೇರಿ, ಬಸ್ಸಾಪುರ, ಅರಳಿಕಟ್ಟಿ ಮುಂತಾದ ಗ್ರಾಮಗಳಿಗೆ ತೆರಳಿ ಅವರು ಕಿಟ್ ವಿತರಿಸಿದರು.

ಕೇಂದ್ರದಲ್ಲಿ 2014 ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಹತ್ತು ಹಲವು ಜನೋಪಯೋಗಿ ಕಾರ್ಯಗಳನ್ನು ಹಮ್ಮಿಕೊಂಡಿದೆ. ಈ ಮೂಲಕ ಭಾರತ ಈಗ ವಿಶ್ವದಲ್ಲಿಯೇ ಅತ್ಯಂತ ಮುಂಚೂಣಿ ಸಾಲಿನಲ್ಲಿ ಬಂದು ನಿಂತಿದೆ. ದೇಶ ಕಳೆದ 7 ವರ್ಷಗಳ ಅವಧಿಯಲ್ಲಿ ಐತಿಹಾಸಿಕ ಸಾಧನೆ ಮಾಡಿದೆ ಎಂದು ಅವರು ಕೇಂದ್ರ ಸರ್ಕಾರವನ್ನು ಶ್ಲಾಘಿಸಿದರು.

ಮೋದಿ ಸರಕಾರ 7 ವರ್ಷ ಪೂರೈಸುವ ಕಾಲಘಟ್ಟ ಇಂದಿನ ದಿನವಾಗಿದೆ. ಆದರೆ, ಈ ದಿನವನ್ನು ಕೊರೋನಾ ಸಂಕಷ್ಟ ಕಾಲದಲ್ಲಿ ಸಂಭ್ರಮದಿಂದ ಆಚರಿಸುವ ಬದಲು ಜನಸೇವೆ ಮಾಡುವ ನಿಟ್ಟಿನಲ್ಲಿ ಆಚರಿಸಲು ಮುಂದಾಗಿದ್ದೇವೆ.
ಈ ನಿಟ್ಟಿನಲ್ಲಿ ಪಕ್ಷದ ವರಿಷ್ಠರ ಸೂಚನೆಯಂತೆ ಬಿಜೆಪಿ ಕಾರ್ಯಕರ್ತರು ತಮ್ಮ ಕೈಲಾದಷ್ಟು ಮಟ್ಟಿಗೆ ಜನರಿಗೆ ಸೇವೆ ಮಾಡಲು ಮುಂದಾಗುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಶಯದಂತೆ ಕೊರೋನಾ ಸೋಂಕಿತರ ಸೇವೆಗಾಗಿ ಹಗಲಿರುಳು ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಜಗತ್ತಿನಲ್ಲಿ ಇದೀಗ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆದಿದೆ. ಜಗತ್ತಿನ ಮುಂದುವರಿದ ದೇಶಗಳು ಕೊರೋನಾ ವಿರುದ್ದ ಸರ್ವ ಪ್ರಯತ್ನ ಮಾಡುತ್ತಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಕೋವಿಡ್ ಸೋಂಕಿತರಿಗೆ ಸರ್ವವಿಧದಲ್ಲೂ ಸೌಲಭ್ಯ ಒದಗಿಸಲು ಪ್ರಯತ್ನಿಸುತ್ತಿದೆ. ಬಡವರು, ದೀನ-ದಲಿತರಿಗೆ ನೆರವಾಗುವ ನಿಟ್ಟಿನಲ್ಲಿ ಬಿಜೆಪಿ ಸರಕಾರ ಹಾಗೂ ಕಾರ್ಯಕರ್ತರು ಜನಸಾಮಾನ್ಯರಿಗೆ ಆಹಾರ ಕಿಟ್ ಗಳನ್ನು ಒದಗಿಸುವ ಮೂಲಕ ಜನರ ಸಂಕಷ್ಟ ಸಂದರ್ಭದಲ್ಲಿ ನೆರವಿಗೆ ಧಾವಿಸಿದ್ದಾರೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಂಸದೆ ಮಂಗಲಾ ಅಂಗಡಿಯವರು ಜನರಿಗೆ ಆಹಾರ ಕಿಟ್, ಕನೇರಿ ಮಠದ ಇಮ್ಯುನಿಟಿ ಬೂಸ್ಟರ್ ಔಷಧಿ ಬಾಟಲ್ ಗಳನ್ನು ವಿತರಿಸಿದರು.

ಮಾಜಿ ಶಾಸಕ ಹಾಗೂ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸಂಜಯ ಪಾಟೀಲ , ಎಪಿಎಂಸಿ ಸದಸ್ಯ ಪಡಿ ಗೌಡ ಪಾಟೀಲ, ಬಿಜೆಪಿ ನಾಯಕಿ ಗಿರಿಜಾ ಮಠಪತಿ, ಅರಳಿಕಟ್ಟಿ ಗ್ರಾಮ ಪಂಚಾಯತ್ ಸದಸ್ಯೆ ಶೋಭಾ ಹುಲಮನಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ನಾಗರಿಕರು ಉಪಸ್ಥಿತರಿದ್ದರು.


Leave a Reply