Uncategorized

ಡಾ.ಹನುಮಂತ ಚಂದ್ಲಾಪೂರ ಅನುಭವ ಮಂಟಪ ಕನ್ನಡದ ಅಸ್ಮಿತೆ


ಲಿಂಗಸೂಗೂರು: ಸಾಮಾಜಿಕ ಆಂದೋಲನ ಕನ್ನಡದ ಚಳುವಳಿಯಾಗಿದ್ದು ಬಸವಣ್ಣನವರು ಎಲ್ಲಾ ವರ್ಗವನ್ನು ಒಂದಾಗಿಸಿ ಸಮ ಸಮಾಜ ನಿರ್ಮಿಸಿದರು. ಅನುಭವ ಮಂಟಪ ಕನ್ನಡದ ಅಸ್ಮಿತೆಯಾಗಿದೆ ಎಂದು ಪ್ರಗತಿಪರ ಚಿಂತಕ ಡಾ. ಹನುಮಂತ ಚಂದ್ಲಾಪೂರ ಹೇಳಿದರು.

ಕರ್ನಾಟಕ ರಾಜ್ಯ ಬರಹಗಾರರ ಸಂಘ(ರಿ), ಲಿಂಗಸೂಗೂರು ತಾಲೂಕ ಘಟಕ ಹಮ್ಮಿಕೊಂಡ “ಸಾಮಾಜಿಕ ಆಂದೋಲನ ಮತ್ತು ಬಸವಣ್ಣ ರಾಜ್ಯಮಟ್ಟದ ವಿಚಾರ ಸಂಕಿರಣ” ಕಾರ್ಯಕ್ರಮದಲ್ಲಿ ಭಾಗವಹಿಸಿ ಉಪನ್ಯಾಸ ನೀಡಿದ ಅವರು, ಪರಂಪರೆಯ ಜಾಡಿನಲ್ಲಿ ಜಿಡ್ಡುಗಟ್ಟಿದ್ದ ಮೌಲ್ಯಗಳನ್ನು ಬಸವಣ್ಣ ಮುರಿದು ಕಟ್ಟಿದರು. ಕಾಯಕ ಮತ್ತು ದಾಸೋಹದ ತತ್ವ ಜಿಜ್ಞಾಸು ನಡೆಸಿದ ಬಸವಣ್ಣ ಇವುಗಳನ್ನು ಆಧಾರ ಸ್ತಂಭವಾಗಿಸಿ ಜಾತಿ ವಿನಾಶಗೊಳಿಸಿದರು.

ಸಮಾಜಿಕ ಸಮಾನತೆಯ ಸಂಕಲ್ಪ ನಿಶ್ಚಿತರಾದ ಬಸವಣ್ಣ ಎಲ್ಲಾ ವರ್ಗಗಳನ್ನು ಅಪ್ಪಿಕೊಂಡು ಸಮ ಸಮಾಜದ ನಿರ್ಮಾಣದಲ್ಲಿ ಜಾತಿಯನ್ನು ಮೀರುವ ಚಾತಿಯಲ್ಲಿ ಕಾಯಕದ ಪರಿಕಲ್ಪನೆ ತಂದಿಟ್ಟರು.

ಭಾರತದ ಸಂದರ್ಭದಲ್ಲಿ ಬಸವಣ್ಣ ತಳೆದ ನಿಲುವು ಮತ್ತು ಒಟ್ಟಾಗಿಸಿದ ತಾತ್ವಿಕ ಮೌಲ್ಯಗಳು ಇಂದಿಗೂ ಜಗತ್ತಿಗೆ ಮಾದರಿಯಾಗಿವೆ.

ಆನುದೇವಣ ಹೊರಗಿನವನು ಎಂದು ಬಸವಣ್ಣ ಹೇಳಿಕೊಳ್ಳುವಲ್ಲಿ ಈ ನೆಲದ ದಮನಿತ, ತಳಸಮುದಾಯದೊಂದಿಗೆ ತಾನು ಒಬ್ಬನು ಎನ್ನುವ ಸ್ಪಷ್ಟ ನಿಲುವಿದೆ.

ವಿಧವೆ ಮಹಿಳೆ, ಗಂಡನಿಂದ ದೂರ ತಳ್ಳಲ್ಪಟ್ಟ ಮಹಿಳೆ ಅನುಭವ ಮಂಟಪದಲ್ಲಿ ಸ್ಥಾನ ಪಡೆದಳು. ಬಸವಣ್ಣ ಧ್ವನಿ ಕಳೆದುಕೊಂಡ ಸ್ತ್ರೀಯರ ಧ್ವನಿಯಾಗಿ ಸಮಾನತೆಯ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ತತ್ವಜ್ಞಾನಿ.

ಬಸವಣ್ಣನನ್ನು ಅರ್ಥೈಸಿಕೊಳ್ಳುವ ನಮ್ಮ ನಿಲುವು ಇಂದು ಸ್ಪಷ್ಟವಾಗಬೇಕಿದೆ ಎಂದರು.
ಉಪನ್ಯಾಸಕ ಶಿವಶರಣಯ್ಯ ಸೊಪ್ಪಿಮಠ ಮಾತನಾಡಿ, ಮೌಢ್ಯತೆ ಮತ್ತು ಕಂದಾಚಾರಗಳನ್ನು ಧಿಕ್ಕರಿಸಿ, ವೈಚಾರಿಕ ಪ್ರಜ್ಞೆ ಮೂಡಿಸಿದ ಬಸವಣ್ಣ ವೈಚಾರಿಕ ಮಾಧ್ಯಮದ ಹರಿಕಾರ ಎಂದರು.

ಪ್ರಾಧ್ಯಾಪಕಿ ಡಾ. ಶೈಲಜಾ ಬಾಗೇವಾಡಿ ಮಾತನಾಡಿ, ಮಹಿಳೆಗೆ ಘನತೆ, ಗೌರವದಿಂದ ಕಂಡು ಮನುಕುಲದ ಉದ್ಧಾರದೊಂದಿಗೆ ಸ್ತ್ರೀಕುಲದ ಉದ್ಧಾರ ಮಾಡಿದವರು ಬಸವಣ್ಣ ಎಂದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾಧ್ಯಕ್ಷ ವಿರೇಶ ಎಸ್.ಎಂ, ಪ್ರಾಚಾರ್ಯರಾದ ಬಸವರಾಜ ವೈ, ಮುರುಘೇಂದ್ರಪ್ಪ ಗೊರೆಬಾಳ, ಸಂಗಮೇಶ ಟೋಪಿ, ಯುವ ಮುಖಂಡರಾದ ವೀರೇಂದ್ರ ಪಾಟೀಲ ಭಾಗವಹಿಸಿದ್ದರು.

ರಾಜ್ಯಾಧ್ಯಕ್ಷ ಮಧು ನಾಯ್ಕ್ ಲಂಬಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಆಶಯದೊಂದಿಗೆ ಪ್ರಾರಂಭಗೊಂಡ ಸಂಘ ಅತ್ಯಲ್ಪ ಸಮಯದಲ್ಲೇ ಪ್ರತಿ ಜಿಲ್ಲೆ, ತಾಲೂಕು, ಹೋಬಳಿ ಮಟ್ಟಕ್ಕೂ ವಿಸ್ತರಿಸಿಕೊಂಡು ಕನ್ನಡದ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಬಾರಾವಲಿ ಭಾವಿಹಳ್ಳಿ, ಖಂಡು ನಾಯ್ಕ್, ಸಂಶೋಧಕ ಡಾ. ಮಹಾದೇವಪ್ಪ ನಾಗರಾಳ, ಕೆ.ಬಿ ಹಿರೇಮಠ, ತಾಲೂಕ ಅಧ್ಯಕ್ಷ ದುರ್ಗಾಸಿಂಗ್ ಉಪಸ್ಥಿತರಿದ್ದರು.

ರಹೇಮಾನ್ ಎಂ. ನದಾಫ್ ಪ್ರಾರ್ಥಿಸಿದರು, ಮಾನಯ್ಯ ಬಡಿಗೇರ ಸ್ವಾಗತಿಸಿದರು, ಸೋಮನಗೌಡ ಮಾಲಿಪಾಟೀಲ ನಿರೂಪಿಸಿದರು, ಹನಮಪ್ಪ ಭಜಂತ್ರಿ ವಂದಿಸಿದರು.


Leave a Reply