karanataka

ಮರಣಕ್ಕೊಂದು ಚರಮಗೀತೆ


ಯಾತನೆಯ ಮಾತು ಜಗದ ತುಂಬ, ಹೋಗಿಬಿಡು ಸಾವೆ
ಸೂತಕದ ಸೂತ್ರಧಾರಿ ಪಾತ್ರದ ಬಿಂಬ, ಹೋಗಿಬಿಡು ಸಾವೆ

ಉಕ್ಕುವ ದುಃಖದ ಲೆಕ್ಕವಿಲ್ಲಿ ಸಿಗುವುದಿಲ್ಲ
ಬಿಕ್ಕುಗಳ ತಕ್ಕಡಿ ತೂಗಬೇಡ ಜರುಗಿಬಿಡು ಸಾವೆ

ನೇಗಿಲ ಮಗನ ಕಣ್ಣಲಿ ದಿಗಿಲಿನ ಮೋಡ
ಭುಗಿಲೇಳಬೇಡ, ಸಿಡಿಲಾಗಿ ಕಾಡಬೇಡ ಕರಗಿಬಿಡು ಸಾವೆ

ಅಕ್ಷರದ ಮಕ್ಕಳು ಅರಿವಿರದೇ ಅಲೆಯುತಿವೆ
ರಾಕ್ಷಸರ ರಾಜ್ಯ ತರಬೇಡ ಸೊರಗಿಬಿಡು ಸಾವೆ.

ಒಡಲಿನ ಒಲೆಯೊಳಗೆ ಹಸಿವಿನ ಬೆಕ್ಕು ಒರಗಿದೆ
ಬಡವರ ಕಣ್ಣ ಕಡಲಾಗಬೇಡ ಕೊರಗಿಬಿಡು ಸಾವೆ

ಧನಿಕ, ವಣಿಕರು ನಿನಗೆ ತೃಣದ ಸಮಾನ
ಪ್ರಾಣಗಾಳಿಗೆ ಪರದಾಟವಿಲ್ಲಿ ಪಾರಾಗಿಬಿಡು ಸಾವೆ..

ಬಂಧುಬಳಗವಿಲ್ಲ, ಬಂದು ಅಳುವವರಿಲ್ಲ
ಕೊಂದ ಕೋಟಿವೀರರು ಕಳೆಗಳು, ಹರಗಿಬಿಡು ಸಾವೆ

ನತದೃಷ್ಟರ ನೋವಿಗೆ ನದಿಗಳೇ ನವೆದಿವೆ
ಹತಭಾಗ್ಯರಿಂದ ಇರಲಿ ‘ಅಂತರ’ ಸತ್ತುಬಿಡು ಸಾವೆ..

ವಿಠ್ಠಲ ದಳವಾಯಿ


Leave a Reply