karanatakaKoppal

ಶೇಖರಗೌಡ ಮಾಲೀಪಾಟೀಲ್ ಅವರ ಹೆಸರಲ್ಲಿ* *ನಕಲಿ ಫೇಸ್ ಬುಕ್ ಖಾತೆ ಸೃಷ್ಟಿ; ಹಣಕ್ಕೆ ಬೇಡಿಕೆ


ಕೊಪ್ಪಳ:ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿರುವ ಶೇಖರಗೌಡ ಮಾಲೀಪಾಟೀಲ್ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಯಾಗಿದೆ. ಇದರ ಜೊತೆಗೆ, ಅವರ ಚಿತ್ರ ಬಳಸಿ ಮೆಸೆಂಜರ್ ಮತ್ತು ವಾಟ್ಸಾಪ್ ನಲ್ಲಿ, ಹಣ ನೀಡುವಂತೆ ವಿನಂತಿಯನ್ನು ಕಳಿಸಲಾಗುತ್ತಿದೆ.

ನಿನ್ನೆಯಿಂದ ನಡೆದಿರುವ ಈ ಬೆಳವಣಿಗೆ ಇವತ್ತು ಬಹುತೇಕರ ಗಮನಕ್ಕೆ ಬಂದಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಶೇಖರಗೌಡ ಮಾಲೀಪಾಟೀಲ್ ಅವರು, ಇದು ನಕಲಿ ಖಾತೆಯಾಗಿದ್ದು, ಯಾರೂ ಹಣ ನೀಡಬಾರದು ಎಂದು ವಿನಂತಿಸಿಕೊಂಡಿದ್ದಾರೆ.

ನಕಲಿ ಖಾತೆ ಸೃಷ್ಟಿಸಿರುವ ಕದೀಮರು ಉತ್ತರ ಭಾರತದ ಮೂಲದವರೆಂದು ಶಂಕಿಸಲಾಗಿದೆ. ಶೇಖರಗೌಡರೇ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದಾರೆ ಎಂದು ಭಾವಿಸಿ ಹಲವಾರು ಜನ ಅದನ್ನು ಒಪ್ಪಿಕೊಂಡೂ ಆಗಿದೆ. ಶೇಖರಗೌಡ ಮಾಲೀಪಾಟೀಲ್ ಅವರ ಅಭಿಮಾನಿಗಳ ಪುಟದಲ್ಲಿರುವ ಅವರ ಫೋನ್ ನಂಬರ್ ಬಳಸಿಕೊಂಡು, ವಾಟ್ಸಾಪ್ ಹಾಗೂ ಮೆಸೆಂಜರ್ ಮೂಲಕವೂ ಹಣಕ್ಕೆ ಬೇಡಿಕೆ ಇಡಲಾಗಿದೆ.

78480 66172 ಮೊಬೈಲ್ ನಂಬರಿನಿಂದ ಹಣಕ್ಕೆ ಬೇಡಿಕೆ ಇರುವ ಸಂದೇಶಗಳು ಇಂಗ್ಲಿಷ್ನಲ್ಲಿ ಬಂದಿವೆ. ಡಿ.ಪಿ.ಯಲ್ಲಿ ಶೇಖರಗೌಡರ ಫೊಟೊ ಇರುವುದರಿಂದ ಕೆಲವರು ಕನ್ನಡದಲ್ಲಿಯೇ ಚಾಟ್ ಮಾಡಿದ್ದಾರೆ. ಸದರಿ ಕನ್ನಡ ಸಂದೇಶವನ್ನು ಕದೀಮರು ಗೂಗಲ್ ಟ್ರಾನ್ಸ್ಲಿಟರೇಟ್ ಆಪ್ ಮೂಲಕ ತಮಗೆ ಬೇಕಾದ ಭಾಷೆಗೆ ಅನುವಾದಿಸಿ ಅರ್ಥ ಮಾಡಿಕೊಂಡಿರುವರಾದರೂ ಕನ್ನಡದಲ್ಲಿ ಉತ್ತರಿಸಲಾಗದೇ, ಇಂಗ್ಲಿಷ್ನಲ್ಲಿ ಉತ್ತರಿಸಿ ಹಣ ಹಾಕುವಂತೆ ವಿನಂತಿಸಿದ್ದಾರೆ.

ಸದರಿ ಫೋನ್ ನಂಬರನ್ನು ಟ್ರೂ ಕಾಲರ್ನಲ್ಲಿ ಪರೀಕ್ಷಿಸಿದಾಗ ಅದು ಪೂರ್ವ ಉತ್ತರ ಪ್ರದೇಶದ ಶ್ರೀರಾಮ ಎಂಬ ವ್ಯಕ್ತಿಯ ಹೆಸರನ್ನು ತೋರಿಸುತ್ತದೆ.

ತಮ್ಮ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಮತ್ತು ಮೆಸೆಂಜರ್ ಸೃಷ್ಟಿಯಾಗಿರುವುದು ಹಾಗೂ ವಾಟ್ಸಾಪ್ ಮೂಲಕ ಹಣ ಕೇಳುತ್ತಿರುವುದು ಗಮನಕ್ಕೆ ಬಂದ ಕೂಡಲೇ ಕೊಪ್ಪಳದ ಸೈಬರ್ ಠಾಣೆಗೆ ತೆರಳಿದ ಶೇಖರಗೌಡ ಮಾಲೀಪಾಟೀಲ್ ಅವರು ದೂರು ನೀಡಲು ಮುಂದಾದರು. ಆದರೆ, ಇದುವರೆಗೆ ಯಾರೂ ಹಣ ನೀಡಿಲ್ಲದಿರುವುದನ್ನು ಗಮನಿಸಿದ ಪೊಲೀಸರು, ಸದರಿ ವಿಷಯವನ್ನು ಸಂಬಂಧಿಸಿದ ಎಲ್ಲರ ಗಮನಕ್ಕೆ ತರುವಂತೆ ಸೂಚಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಯಾರೇ ವ್ಯಕ್ತಿ ಯಾವುದೇ ಮಾಧ್ಯಮದ ಮೂಲಕ ಹಣಕ್ಕೆ ವಿನಂತಿಸಿದರೂ, ಯಾರೂ ಹಣ ನೀಡಬಾರದು ಹಾಗೂ ಸದರಿ ಚಟುವಟಿಕೆಯನ್ನು ತಮ್ಮ ಗಮನಕ್ಕೆ ತರುವಂತೆ ಶೇಖರಗೌಡ ಮಾಲೀಪಾಟೀಲ್ ಅವರು ವಿನಂತಿಸಿದ್ದಾರೆ.

ಈ ಮಾಹಿತಿಯನ್ನು ಸಾಧ್ಯವಾದಷ್ಟೂ ಹೆಚ್ಚು ಜನರಿಗೆ ಶೇರ್ ಮಾಡುವ ಮೂಲಕ, ಸಂಭವನೀಯ ವಂಚನೆಯನ್ನು ತಡೆಯಲು ನೆರವಾಗಬೇಕೆಂದು ಕೂಡಾ ಅವರು ವಿನಂತಿಸಿಕೊಂಡಿದ್ದಾರೆ.

ವರದಿ-ಆರ್ ಶರಣಪ್ಪ‌ ಗುಮಗೇರಾ.


Leave a Reply