karanatakaKoppal

ಶೇಖರಗೌಡ ಮಾಲೀಪಾಟೀಲ ಸ್ನೇಹಬಳಗದಿಂದ ಕೆರೆಗೆ ಹಾರ ವೆಬಿನಾರ್


ಶೇಖರಗೌಡ ಮಾಲೀಪಾಟೀಲ ಸ್ನೇಹಬಳಗದಿಂದ ಕೆರೆಗೆ ಹಾರ ವೆಬಿನಾರ್

ಕೊಪ್ಪಳ: ಶೇಖರಗೌಡ ಮಾಲೀಪಾಟೀಲ ಸ್ನೇಹಬಳಗ ಗುರುವಾರ ಹಮ್ಮಿಕೊಂಡಿದ್ದ ʼಕೆರೆಗೆ ಹಾರʼ ವೆಬಿನಾರ್ಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೊರೊನಾ ಸಂಕಷ್ಟ ಕಾಲದಲ್ಲಿಯೂ ಕಲೆ, ಸಾಮಾಜಿ, ಆರ್ಥಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಜೀವಂತವಾಗಿಡುವ ಉದ್ದೇಶದಿಂದ ವೆಬಿನಾರ್ ಆಯೋಜಿಸಲಾಗಿತ್ತು. ಹಿರಿಯ ಸಾಹಿತಿಯೂ ಆಗಿರುವ ಪತ್ರಕರ್ತ ಲಿಂಗಾರೆಡ್ಡಿ ಆಲೂರು ಅವರು ಕೆರೆಗೆ ಹಾರ ಜಾನಪದ ಕಥನ ಕಾವ್ಯವನ್ನು ಸುಶ್ರಾವ್ಯವಾಗಿ ಹಾಡುವುದರ ಮೂಲಕ ವೆಬಿನಾರ್ಗೆ ಚಾಲನೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶೇಖರಗೌಡ ಮಾಲಿಪಾಟೀಲ್, ʼಸಾಂಕ್ರಾಮಿಕ ರೋಗದ ಭಯ ಎಲ್ಲೆಡೆ ಆವರಿಸಿದೆ. ಇಂತಹ ಸನ್ನಿವೇಶದಲ್ಲಿ ಕನ್ನಡ ಸಾಹಿತ್ಯದ ಕುರಿತು ಚಿಂತನ ಮಂಥನ ನಡೆಸುವುದು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಪೂರಕ. ಕನ್ನಡ ಜಾನಪದ ಸಾಹಿತ್ಯದ ಶ್ರೇಷ್ಠ ಕಾವ್ಯ ʼಕೆರೆಗೆ ಹಾರʼ ಕಾವ್ಯವನ್ನು ಮತ್ತೆ ನೆನಪಿಸುವ ಈ ಪ್ರಯತ್ನ ಮೆಚ್ಚುವಂಥದುʼ ಎಂದರು.
‘ಕೆರೆಗೆ ಹಾರ’ ಕುರಿತು ಮಾತನಾಡಿದ ಡಾ. ಮೈತ್ರೇಯಿಣಿ ಗದಿಗೆಪ್ಪನವರ ʼಕನ್ನಡದ ಜನಪ್ರಿಯ ಜಾನಪದ ಕಥನಕವನಗಳಲ್ಲಿ ಒಂದಾಗಿರುವ ಕೆರೆಗೆಹಾರ ಆದರ್ಶ, ಮೌಲ್ಯದ ಕುರಿತು ಹೇಳುತ್ತಲೆ ಹೆಣ್ಣಿನ ಶೋಷಣೆಯ ಕುರಿತು ಅಭಿವ್ಯಕ್ತಿಸುತ್ತದೆ. ಆಕೆಯನ್ನು ಕೆರೆಗೆ ಹಾರವಾಗಿಸುವ ಮೂಲಕ ಹೆಣ್ಣಿನ ಬಲಿದಾನವನ್ನು ಕಟ್ಟಿಕೊಡುತ್ತದೆʼ ಎಂದರು.
ಕೆರೆಗೆ ಹಾರ ಗೆಳೆತನದ ಮಹತ್ವವನ್ನು ಸಾರುತ್ತದೆ ಎಂದು ಗುಂಡೂರು ಪವನ್ ಕುಮಾರ್ ಹೇಳಿದರೆ, ಇದು ಜನಪದ ಕಾವ್ಯದ ಅದ್ಭುತ ಸೃಷ್ಟಿ. ಆಲೂರ ಅವರ ಕಾವ್ಯ ಪ್ರೀತಿಯ ನಿರೂಪಣೆ ಮೆಚ್ಚುಗೆಯಾಯಿತು ಎಂದು ಡಾ. ಶಿವಕುಮಾರ ಮಾಲಿಪಾಟೀಲ್ ಹರ್ಷ ವ್ಯಕ್ತಪಡಿಸಿದರು.
ಡಾ. ಯತೀಶ್ವರ ಹಾಸನ, ಡಾ.ನಾಗಾರ್ಜುನ ಶಿವಮೊಗ್ಗ, ಡಾ. ಪ್ರತಿಭಾ ಚಾಮ ಕಲಬುರ್ಗಿ, ಡಾ. ಪುಷ್ಪಾವತಿ ಶಲವಡಿಮಠ ಹಾವೇರಿ ಮುಂತಾದವರು ಅನಿಸಿಕೆ ವ್ಯಕ್ತಪಡಿಸಿದರು.
ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರಾಜಶೇಖರ ಅಂಗಡಿ ಸ್ವಾಗತಿಸಿದರು. ಕಥಾ ಪ್ರವೇಶಿಕೆಯನ್ನು ಎಸ್.ಬಿ. ಗೊಂಡಬಾಳ ಪ್ರಸ್ತುತಪಡಿಸಿದರು. ರಾಜಶೇಖರ ಹೊಸಮನಿ ಕಾರ್ಯಕ್ರಮ ನಿರ್ವಹಿಸಿದರೆ, ಶರಣೇಗೌಡ ಹೇರೂರು ವಂದನಾರ್ಪಣೆ ಮಾಡಿದರು.

ಕೊರೊನಾ ಸಂಕಷ್ಟ ಕಾಲದಲ್ಲಿಯೂ ನಾಡು-ನುಡಿ ಕುರಿತ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶದಿಂದ ಕೊಪ್ಪಳದ ಶೇಖರಗೌಡ ಮಾಲೀಪಾಟೀಲ ಸ್ನೇಹಬಳಗ ಗುರುವಾರ ಹಮ್ಮಿಕೊಂಡಿದ್ದ ವೆಬಿನಾರ್ನಲ್ಲಿ ಸಾಹಿತಿ ಲಿಂಗಾರೆಡ್ಡಿ ಆಲೂರ ಅವರು ʼಕೆರೆಗೆ ಹಾರʼ ಜನಪದ ಕಾವ್ಯವನ್ನು ಪ್ರಸ್ತುತಪಡಿಸಿದರು.

ಕೊಪ್ಪಳದ ಶೇಖರಗೌಡ ಮಾಲೀಪಾಟೀಲ ಸ್ನೇಹಬಳಗ ಗುರುವಾರ ಹಮ್ಮಿಕೊಂಡಿದ್ದ ʼಕೆರೆಗೆ ಹಾರʼ ವೆಬಿನಾರ್ನಲ್ಲಿ ನಾಡಿನ ನಾನಾ ಭಾಗಗಳಿಂದ ಸಾಹಿತಿಗಳು ಪಾಲ್ಗೊಂಡಿದ್ದರು.

ವರದಿ- ಆರ್ ಶರಣಪ್ಪ ಗುಮಗೇರಾ.


Leave a Reply