Ballary

ನರೇಗಾದಡಿ ನೂರು ದಿನ ಕೆಲಸಕ್ಕೆ ಅವಕಾಶ : ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಡಿ.ಮೋಹನ್


ಗಂಗಾವತಿ: ನರೇಗಾ ಯೋಜನೆಯಡಿ ನೂರು ದಿನ ಕೆಲಸ ಮಾಡಲು ಅವಕಾಶವಿದ್ದು, ಪ್ರತಿಯೊಬ್ಬರು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಡಿ.ಮೋಹನ್ ಹೇಳಿದರು.

ತಾಲ್ಲೂಕಿನ ಬಸಾಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರೆಕಲ್ಲಪ್ಪ ಕ್ಯಾಂಪಿನಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಗುರುವಾರ ರೋಜಗಾರ್ ದಿನವನ್ನು ಆಚರಿಸಿ ಅವರು ಮಾತನಾಡಿದರು. ನರೇಗಾ ಯೋಜನೆಯಡಿ ಮಹಿಳೆ-ಪುರುಷ ಎಂಬ ತಾರತಮ್ಯ ಇಲ್ಲದೇ, ಇಬ್ಬರಿಗೂ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನೀಡಲಾಗುತ್ತಿದೆ. ಜೊತೆಗೆ ಕೇವಲ ಸಮುದಾಯಿಕ ಕಾಮಗಾರಿಗಳು ಅಷ್ಟೇ ಅಲ್ಲದೇ, ವೈಯಕ್ತಿಕ ಕಾಮಗಾರಿಗಳಾದ ಇಂಗು ಗುಂಡಿ ನಿರ್ಮಾಣ, ಬದು ನಿರ್ಮಾಣ, ಕೃಷಿ ಹೊಂಡ ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಅವಕಾಶವಿದೆ. ಈ ಬಗ್ಗೆ ಕೂಲಿಕಾರರು ಗಮನಹರಿಸಬೇಕು.
ಜೊತೆಗೆ ಎಂಜಿನಿಯರ್ ಗಳು ತಮಗೆ ನೀಡಿದ ಕಾಮಗಾರಿ ಕೆಲಸದ ಅಳತೆಗನುಗುಣವಾಗಿ ಕೆಲಸ ಮಾಡಿದಾಗ ಮಾತ್ರ ಪೂರ್ಣ ಪ್ರಮಾಣದ ಕೂಲಿ ಹಣ ಸಿಗುತ್ತದೆ. ಹಾಗಾಗಿ ಕೂಲಿಕಾರರು ಸರಿಯಾಗಿ ಕೆಲಸ ಮಾಡುವಂತೆ ತಿಳಿಸಿದರು.
ನಂತರ ಕೂಲಿಕಾರರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಕಾರ್ಯನಿರ್ವಾಹಕ ಅಧಿಕಾರಿಗಳ ಹುಟ್ಟು ಹಬ್ಬವನ್ನು ಆಚರಿಸಿದರು. ಕಾಮಗಾರಿ ಸ್ಥಳದಲ್ಲಿ ಕೂಲಿಕಾರರೊಂದಿಗೆ ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ವಿಶೇಷವಾಗಿದ್ದು, ಕೂಲಿಕಾರರಿಗೆ ಹಾಗೂ ಸಿಬ್ಬಂದಿಗೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಧನ್ಯವಾದಗಳನ್ನು ತಿಳಿಸಿದರು.
ಈ ವೇಳೆ ಗ್ರಾ.ಪಂ ಉಪಾಧ್ಯಕ್ಷ ಟಿ.ಶ್ರೀಕಾಂತ್, ಸದಸ್ಯರಾದ ಕನಕಪ್ಪ, ಆಂಜನೇಯ್ಯ, ಟಿಐಇಸಿ ಸಂಯೋಜಕರಾದ ಶಿವಕುಮಾರ್ ಕೆ, ಗ್ರಾ.ಪಂ ಸಿಬ್ಬಂದಿ ಶರಣಪ್ಪ, ಬೆಟ್ಟಪ್ಪ ಸೇರಿದಂತೆ ಹಲವರು ಇದ್ದರು.

(ಹನುಮೇಶ್ ಬಟಾರಿ)


Leave a Reply