Belagavi

ಸಣ್ಣಾಟಗಳ ತವರು ಮನೆ ಬೆಳಗಾವಿ ಜಿಲ್ಲೆ : ಪ್ರಕಾಶ ಗಿರಿಮಲ್ಲನವರ


ಬೆಳಗಾವಿ:೨೬- ಕ.ಸಾ.ಪ. ಬೆಳಗಾವಿ ಜಿಲ್ಲೆಯ ಚ.ಕಿತ್ತೂರು ತಾಲೂಕಾ ಘಟಕ ಹಾಗೂ ಎಲ್ಲ ತಾಲೂಕು ಕಸಾಪ ಘಟಕಗಳ ಸಹಯೋಗದೊಂದಿಗೆ ರವಿವಾರ ದಿನಾಂಕ:೨೫/೦೭/೨೦೨೧ ರಂದು ಸಂಜೆ ೪:೦೦ ಗಂಟೆಗೆ, “ಬೆಳಗಾವಿ ಜಿಲ್ಲೆಯ ಸಣ್ಣಾಟ ಪರಂಪರೆ” ಕುರಿತು ಉಪನ್ಯಾಸ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಸಾನಿಧ್ಯವನ್ನು ವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಅವರು ಮಾತನಾಡುತ್ತ, ಸಣ್ಣಾಟಗಳು ಬೆಳಗಾವಿ ಜಿಲ್ಲೆಯ ಕೊಡುಗೆಯಾಗಿರುವುದು, ನಾವೆಲ್ಲ ಹೆಮ್ಮೆ ಮತ್ತು ಅಭಿಮಾನ ಪಡುವ ವಿಷಯವಾಗಿದೆ. ಆದ್ದರಿಂದ ಇಂಥ ಸಣ್ಣಾಟ ಪರಂಪರೆಯನ್ನು ಉಳಿಸಿ ಬೆಳೆಸುವ ಸಕಲ ಪ್ರಯತ್ನವನ್ನು ನಾವು ಪರಿಷತ್ತಿನ ಮೂಲಕ ಮಾಡುತ್ತೇವೆ ಎಂದು ಹೇಳಿದರು.
“ಬೆಳಗಾವಿ ಜಿಲ್ಲೆಯ ಸಣ್ಣಾಟ ಪರಂಪರೆ” ವಿಷಯ ಕುರಿತು ಉಪನ್ಯಾಸ ನೀಡಿದ ಶ್ರೀ ಪ್ರಕಾಶ ಗಿರಿಮಲ್ಲನವರ ಅವರು ಸಣ್ಣಾಟಗಳ ತವರು ಮನೆ ಬೆಳಗಾವಿ ಜಿಲ್ಲೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಸಣ್ಣಾಟ ಉತ್ತರ ಕರ್ನಾಟಕದಲ್ಲಿ ಪ್ರಚಾರದಲ್ಲಿರುವ ಒಂದು ಜನಪದ ರಂಗಪ್ರಕಾರವಾಗಿದೆ. ಸಣ್ಣಾಟವೆಂದರೆ ಸಣ್ಣದಾದ, ಸರಳವಾದ ಆಟ (ರಂಗಪ್ರದರ್ಶನ) ಎಂದು ಅರ್ಥ. ಒಂದು ಶತಮಾನದ ಅವಧಿಯಲ್ಲಿ ಸುಮಾರು ಇನ್ನೂರು ಸಣ್ಣಾಟಗಳು ರಚನೆಗೊಂಡಿವೆ. ಇವುಗಳ ಕತೃಗಳು ಅಷ್ಟಿಷ್ಟು ಓದಿಕೊಂಡ ವಿದ್ಯಾವಂತರು. ಆರಂಭದ ಸಣ್ಣಾಟಗಳು ಸಾಮಾಜಿಕ ವಸ್ತುಗಳನ್ನು ಬಳಸಿಕೊಂಡವು. ನಂತರದ ಕಾಲಾವಧಿಯಲ್ಲಿ ಕಥಾವಸ್ತುವಿನ ಆಯ್ಕೆಯಲ್ಲಿ ಧಾರಾಳತನ ವೈವಿಧ್ಯತೆಗಳು ಕಂಡು ಬಂದವು. ವೈವಿಧ್ಯತೆಯ ಅಪೇಕ್ಷೆ ಮತ್ತು ಹೊಸತನದ ಹುಮ್ಮಸ್ಸುಗಳ ಕಾರಣದಿಂದಾಗಿ ಸಣ್ಣಾಟದ ಕವಿಗಳು ಎಲ್ಲ ತರದ ಕತೆಗಳನ್ನು ಸ್ವೀಕರಿಸಿದರು.
ಅತ್ಯಂತ ಜನಪ್ರೀಯ ಕೃತಿಯೆಂದರೆ ‘ಸಂಗ್ಯಾಬಾಳ್ಯಾ’ ಸದ್ಯಕ್ಕೆ ಇದೇ ಪ್ರಥಮ ಸಣ್ಣಾಟವೆನಿಸಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲಕ್ಕೆ ಸಮೀಪದಲ್ಲಿರುವ ಬೈಲವಾಡ ಗ್ರಾಮದ ರಾಯಪ್ಪ ಪತ್ತಾರ ಮಾಸ್ತರ ಎಂಬ ಕವಿ ಇದನ್ನು ರಚಿಸಿದರು. ಅಲ್ಲದೇ ಜನರಿಗೆ ಇದು ತುಂಬಾ ಆಕರ್ಷಕವೆನಿಸಿ ಇಡೀ ಕರ್ನಾಟಕ ತುಂಬೆಲ್ಲಾ ಪಸರಿಸಿತು. ಹುಲಕುಂದದ ಭೀಮ ಕವಿ ಮುಂತಾದ ೫೦ಕ್ಕೂ ಹೆಚ್ಚು ಕವಿಗಳು ಸಣ್ಣಾಟ ಕಾವ್ಯಗಳನ್ನು ರಚನೆ ಮಾಡಿದರು.
ಇಂಥ ಅಪರೂಪದ ಸಣ್ಣಾಟಗಳನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜಾಗತೀಕರಣದ ಪರಿಣಾಮವಾಗಿ ನಮ್ಮ ಸಂಸ್ಕೃತಿ ಮೌಲ್ಯಗಳೆಲ್ಲ ಅಧಃಪತನ ಹೊಂದುತ್ತಿರುವ ಈ ಕಾಲದಲ್ಲಿ ಸಣ್ಣಾಟ ಪರಂಪರೆಗೆ ಮತ್ತೆ ಪುನರುಜ್ಜೀವನ ನೀಡಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯ ಪಟ್ಟರು.
ಪ್ರಾರಂಭದಲ್ಲಿ ಕಾರ್ಯಕ್ರಮದ ಸಂಯೋಜಕರಾದ ಡಾ ಸೋಮಶೇಖರ ಹಲಸಗಿ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಶ್ರೀಮತಿ ಪ್ರಭಾವತಿ ಲದ್ದಿಮಠ ಅವರು ಪ್ರಾರ್ಥನೆ ಮಾಡಿದರು. ಶ್ರೀ ವಿಜಯ ಬಡಿಗೇರ ಅವರು ಆಶಯ ನುಡಿಗಳನ್ನಾಡಿದರು. ಶ್ರೀ ರಾಜೇಂದ್ರ ವಾಲಿ ಅವರು ಸ್ವಾಗತ ಪರಿಚಯ ಮಾಡಿದರು. ವಿದ್ಯಾವತಿ ಜನವಾಡೆ ಅವರು ವಂದನಾರ್ಪಣೆ ಮಾಡಿದರು. ಶ್ರೀಮತಿ.ರತ್ನಪ್ರಭಾ ಬೆಲ್ಲದ, ಜ್ಯೋತಿ ಬದಾಮಿ, ಶೈಲಜಾ ಭಿಂಗೆ, ಶ್ರೀ ಎಂ.ವಾಯ್ ಮೆಣಸಿನಕಾಯಿ, ಡಾ.ಅಣ್ಣಪ್ಪ ಬಾಳಿ, ಶ್ರೀ ಬಸವರಾಜ ಗಾರ್ಗಿ, ಶ್ರೀಮತಿ. ಹೇಮಾವತಿ ಸೊನೊಳ್ಳಿ, ಶ್ರೀ ಅಶೋಕ ಪಾಗಾದ, ಶ್ರೀ ದಾನೇಶ್ವರ ಸಾಣಿಕೊಪ್ಪ, ಎಸ್ ಎಂ. ಶಹಪೂರಮತ, ಡಾ.ಎಸ್.ಬಿ ದಳವಾಯಿ, ಶ್ರೀಮತಿ ಶಬಾನಾ ಅಣ್ಣಿಗೇರಿ,ಶ್ರೀ ಯ.ರು. ಪಾಟೀಲ, ಶ್ರೀ ಅಕ್ಷಯ ಮೊದಲಾಗಿ ೫೦ಕ್ಕಿಂತ ಹೆಚ್ಚು ಜನರು ಕಾರ್ಯಕ್ರಮವನ್ನು ವಿಕ್ಷೀಸಿದರು.


Leave a Reply