Belagavi

“ಜೇನುಕೃಷಿ ಅಭಿವೃದ್ಧಿ ಯೋಜನೆ”ಯಡಿ ಅರ್ಜಿ ಆಹ್ವಾನ


ಬೆಳಗಾವಿ, ಜು.೨೯ : ಬೆಳಗಾವಿ ಜಿಲ್ಲಾ ತೋಟಗಾರಿಕೆ ಇಲಾಖೆ ವತಿಯಿಂದ ೨ ದಿವಸಗÀಳ ಉಚಿತ ಜೇನುಕೃಷಿ ತರಬೇತಿಯನ್ನು ಸೆಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ಹಮ್ಮಿಕೊಳ್ಳಲಿದ್ದು ಆಸಕ್ತ ಅಭ್ಯರ್ಥಿಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಜೇನು ನೊಣಗಳಿಂದ ಜರುಗುವ ಪರಾಗಸ್ಪರ್ಶದಿಂದ ಕೃಷಿ, ತೋಟಗಾರಿಕೆ ಬೆಳೆಗಳ ಉತ್ಪನ್ನ ಹೆಚ್ಚಳವಾಗಿ ಬೆಳೆಗಾರರಿಗೆ ಹೆಚ್ಚಿನ ಆದಾಯ ದೊರಕುತ್ತದೆ. ಆಧುನಿಕ ತೋಟಗಾರಿಕೆ ಬೆಳೆ ಪದ್ಧತಿಯಲ್ಲಿ ಜೇನುಗಾರಿಕೆಯು ಇಳುವರಿ ಹೆಚ್ಚಿಸಿಕೊಳ್ಳುವ ಒಂದು ತಾಂತ್ರಿಕತೆಯೂ ಆಗಿದೆ. ಈ ತಾಂತ್ರಿಕತೆಯನ್ನು ತೋಟಗಾರಿಕೆ ಬೆಳೆಗಾರರಿಗೆ ತಿಳಿಸಿಕೊಡುವ ದೃಷ್ಟಿಯಿಂದ ೨ ದಿವಸಗÀಳ ಉಚಿತ ಜೇನುಕೃಷಿ ತರಬೇತಿಯನ್ನು ೨೦೨೧ರ ಸೆಪ್ಟೆಂಬರ್ ಮಾಹೆಯ ಕೊನೆಯ ವಾರದಲ್ಲಿ ಹಮ್ಮಿಕೊಳ್ಳಲಾಗುವುದು.
ಜೇನುಗಾರಿಕೆಯು ಅತೀ ಕಡಿಮೆ ಬಂಡವಾಳ ತೊಡಗಿಸಿ ಅಧಿಕ ಉತ್ಪನ್ನ ಪಡೆಯುವ ಒಂದು ಗ್ರಾಮೀಣ ಕಸುಬಾಗಿದ್ದು, ಯುವಕರಿಗೆ ಮತ್ತು ಗುಡ್ಡಗಾಡು ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಿ ಕೊಡುತ್ತದೆ. ಜೇನು ಸಾಕಾಣಿಕೆಯಿಂದ ದೊರಕುವ ಉತ್ಪನ್ನಗಳು ಆಹಾರ ಮತ್ತು ಜೌಷಧಿಯುಕ್ತ ಪದಾರ್ಥವಾಗಿದ್ದು, ದೇಶದ ಆಹಾರ ಸಮಸ್ಯೆ ನೀಗಿಸುವಲ್ಲಿ ಸಹಕಾರಿಯಾಗಿದೆ.
ಅರ್ಜಿ ಸಲ್ಲಿಸಲು ಕನಿಷ್ಟ ೭ನೇ ತರಗತಿ ಪಾಸಾಗಿದ್ದು, ೧೮ ರಿಂದ ೩೫ ವರ್ಷ ವಯೋಮಿತಿಯವರಾಗಿರಬೇಕು. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆಯಿದೆ. ಕನಿಷ್ಟ ಜಮೀನು ಹಿಡುವಳಿದಾರರಾಗಿದ್ದು, ತೋಟಗಾರಿಕೆ ಕೃಷಿ ಬೆಳೆಗಾರರಿಗೆ ಮತ್ತು ಬೇಸಾಯಗಾರರ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುವುದು.
ತರಬೇತಿ ಪಡೆದ ಆಸಕ್ತರು ಜೇನುಪೆಟ್ಟಿಗೆ, ಜೇನುಕುಟುಂಬ, ಜೇನುಯಂತ್ರಗಳನ್ನು ಪಡೆಯುವುದಿದ್ದಲ್ಲಿ ಶೇ.೭೫ರಷ್ಟು ಪ್ರೋತ್ಸಾಹಧನಕ್ಕೆ ಅರ್ಹರಿರುತ್ತಾರೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಶೇ.೯೦ರಷ್ಟು ಪ್ರೋತ್ಸಾಹಧನ ನೀಡಲಾಗುವುದು ಹಾಗೂ ಪ್ರತಿ ತಾಲ್ಲೂಕಿನಿಂದ ೯ ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದ್ದು, ತರಬೇತಿ ಪಡೆಯಲು ಇಚ್ಛಿಸುವವರು ಆಯಾ ತಾಲ್ಲೂಕಿನ ಹಿರಿಯ/ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರಗಳಲ್ಲಿ ತಮ್ಮ ಅರ್ಜಿಯನ್ನು ಸಲ್ಲಿಸಬಹುದು.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ) ಚೆನ್ನಮ್ಮ ವೃತ್ತ, ಬೆಳಗಾವಿ ಅಥವಾ ತಾಲ್ಲೂಕಿನ ತೋಟಗಾರಿಕೆ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply