Belagavi

ಆಗಸ್ಟ್ ೧೪ ರಂದು ಲೋಕ್ ಅದಾಲತ್‌ನಲ್ಲಿ ರಾಜಿ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಸುವರ್ಣಾವಕಾಶ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಸ್.ಎನ್ ನಾಯಕ್


ವಿಜಯಪುರ : ಆಗಸ್ಟ್ ೫ : ಜಿಲ್ಲೆಯಾದ್ಯಂತ ಇದೇ ಆಗಸ್ಟ್ ೧೪ ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿದ್ದು, ಕಕ್ಷಿದಾರರಿಗೆ ರಾಜಿ ಮೂಲಕ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿರುತ್ತದೆ ಎಂದು ವಿಜಯಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಎನ್ ನಾಯಕ್ ಅವರು ಹೇಳಿದರು.
ನಗರದ ಪರ್ಯಾಯ ವ್ಯಾಜ್ಯಗಳ ಕೇಂದ್ರದ ಸಭಾಂಗಣದಲ್ಲಿAದು ಜಿಲ್ಲೆಯಲ್ಲಿ ಆಗಸ್ಟ್ ೧೪ ರಂದು ರಾಷ್ಟ್ರೀಯ ಲೋಕ್ ಅದಾಲತ್ ಆಯೋಜಿಸಲಾಗಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಕಕ್ಷಿದಾರರು ಇದರ ಸಂಪೂರ್ಣ ಉಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಅದರಂತೆ ಈ ರಾಷ್ಟ್ರೀಯ ಲೋಕ್ ಅದಾಲತ್‌ನಿಂದ ಕಕ್ಷಿದಾರರಿಗೆ ಬಹಳ ಅನುಕೂಲವಾಗಲಿದ್ದು, ಇದರಿಂದ ಕಕ್ಷಿದಾರರ ಸಮಯ ಹಾಗೂ ಹಣದ ಉಳಿತಾಯವಾಗುತ್ತದೆ. ಅಲ್ಲದೇ ನ್ಯಾಯಾಲಯಕ್ಕೆ ಹಾಗೂ ವಕೀಲರಿಗೆ ಯಾವುದೇ ವೆಚ್ಚ ನೀಡಬೇಕಾಗಿಲ್ಲ ಎಂದು ಅವರು ಹೇಳಿದರು.
ಈ ಲೋಕ್ ಅದಾಲತ್‌ನಲ್ಲಿ ರಾಜಿ ಮೂಲಕ ಪರಿಹರಿಸಲಾದ ಪ್ರಕರಣಗಳಲ್ಲಿ ಮೇಲ್ಮನವಿಗೆ ಯಾವುದೇ ಅವಕಾಶವಿರುವುದಿಲ್ಲ. ವಿಚ್ಛೇದನ ಹೊರತುಪಡಿಸಿ ಜೀವನಾಂಶ ಹಾಗೂ ವಿವಾಹ ಪ್ರಕರಣಗಳನ್ನು ಕಕ್ಷಿದಾರರಿಗೆ ರಾಜಿ ಮೂಲಕ ಇತ್ಯರ್ಥ ಪಡಿಸಲಾಗುವುದು ಎಂದು ತಿಳಿಸಿದರು.
ಮೋಟರ್ ವೆಹಿಕಲ್ ಪ್ರಕರಣ, ಬ್ಯಾಂಕ್ ಚೆಕ್ ಬೌನ್ಸ್, ವಿದ್ಯುತ್ ಕಳ್ಳತನದಂತಹ ಪ್ರಕರಣಗಳನ್ನು ರಾಜಿ ಮೂಲಕ ಪರಿಹರಿಸಲಾಗುತ್ತದೆ. ಕೆಲವು ಕ್ರಿಮಿನಲ್ ಹಾಗೂ ಸಿವಿಲ್ ಪ್ರಕರಣಗಳನ್ನೂ ಇತ್ಯರ್ಥಪಡಿಸಲಾಗುತ್ತದೆ. ಕಕ್ಷಿದಾರರಲ್ಲದಿದ್ದರೂ ಕೂಡ ಯಾವುದಾದರೂ ವ್ಯಾಜ್ಯವಿದ್ದರೂ ಪರಿಹರಿಸಿಕೊಳ್ಳಬಹುದು. ಇದೆಲ್ಲದರಿಂದಾಗಿ ಸಮಾಜದಲ್ಲಿ ಎಲ್ಲರೂ ಶಾಂತಿಯುತವಾಗಿ ಬದುಕಲು ಅವಕಾಶವಾಗುತ್ತದೆ ಎಂದು ಅವರು ಹೇಳಿದರು.
ಅಗಸ್ಟ್ ೧೪ ರ ಲೋಕ್ ಅದಾಲತ್ ರಾಷ್ಟ್ರ ಮಟ್ಟದಲ್ಲಿ ಹಾಗೂ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಒಂದೇ ದಿನ ನಡೆಯುತ್ತಿದ್ದು, ಎರಡನೇ ಶನಿವಾರ ಸರಕಾರಿ ರಜೆ ಇದ್ದರೂ ಇದು ನಡೆಯುತ್ತಿರುವುದು ಬಹಳ ವಿಶೇಷವಾಗಿದೆ. ಕಾರಣ ಕಕ್ಷಿದಾರರು ರಜೆ ಎಂಬಿತ್ಯಾದಿ ಗೊಂದಲಗಳಿಗೆ ಒಳಗಾಗಬಾರದು ಎಂದರು.
ಈಗಾಗಲೇ ಕಳೆದ ಮಾರ್ಚ್ನಲ್ಲಿ ನಡೆದ ಲೋಕ್ ಅದಾಲತ್‌ನಲ್ಲಿ ೨೮,೮೦೧ ಪ್ರಕರಣಗಳನ್ನು ರಾಜಿ ಮೂಲಕ ಬಗೆಹರಿಸಿ ೨೩,೪೬,೨,೭೧೮ ರೂಪಾಯಿಗಳ ಪರಿಹಾರ ಒದಗಿಸಲಾಗಿದೆ. ನ್ಯಾಯಾಲಯದಲ್ಲಿ ೬೮೧೦೦ ಪ್ರಕರಣಗಳು ಬಾಕಿ ಉಳಿದಿವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶರಾದ ವೆಂಕಣ್ಣ ಹೊಸಮನಿ ಉಪಸ್ಥಿತರಿದ್ದರು.


Leave a Reply