Belagavi

ಉಪ ಲೋಕಾಯುಕ್ತ ಬಿ.ಎಸ್. ಪಾಟೀಲ್ ಅಭಿಮತ ಬೆಳಗಾವಿ ಜಿಲ್ಲೆಯಲ್ಲಿ ಕಾರ್ಯನಿರ್ವಸುವುದು ಸವಾಲಿನ ಕೆಲಸ


ಬೆಳಗಾವಿ: ಬೆಂಗಳೂರು ಬಿಟ್ಟರೆ ಬೆಳಗಾವಿ ಜಿಲ್ಲೆ ಅತೀ ಹೆಚ್ಚು ಜನಸಂಖ್ಯೆ, ವಿಸ್ತಾರ ಹೊಂದಿರುವ ಜಿಲ್ಲೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಜನರು ಕೋವಿಡ್ ಜೊತೆಗೆ ಪ್ರವಾಹದ ಸಮಸ್ಯೆ ಎದುರಿಸುತ್ತಿದ್ದಾರೆ. ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸಬೇಕಿದೆ ಎಂದು ಉಪ ಲೋಕಾಯುಕ್ತ ಬಿ.ಎಸ್. ಪಾಟೀಲ್ ಸಲಹೆ ನೀಡಿದರು.
ಶನಿವಾರ ಬೆಳಗಾವಿ ಜಿಲ್ಲೆಯ ಕೋವಿಡ್ ಹಾಗೂ ಪ್ರವಾಹ ಪರಿಸ್ಥಿತಿ ಬಗ್ಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ದಾವಣಗೆರೆ, ಚಿತ್ರದುರ್ಗದಲ್ಲಿ ಅಧಿಕಾರಿಗಳು ಆರಾಮವಾಗಿ ಕೆಲಸ ಮಾಡಬಹುದು. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಅಧಿಕಾರಿಗಳು ದಿನದ ೨೪ ಗಂಟೆ ಜಾಗೃತರಾಗಿ ಕೆಲಸ ಮಾಡಬೇಕಾಗುತ್ತದೆ. ಮೊದಲು ಸಮಸ್ಯೆ ಬಂದಾಗ ಜಾಗೃತಿ ಆಗುತ್ತಿದ್ದೆವು. ಆದರೆ, ಇದೀಗ ಸಮಸ್ಯೆ ಬರುವ ಮುನ್ನವೇ ಜಾಗ್ರತರಾಗಬೇಕಿದೆ. ಪ್ರವಾಹ ಮತ್ತು ಕೋವಿಡ್ ಇದು ಒಂದು ದಿನ ಕತೆಯಲ್ಲ. ಇದು ನಮ್ಮ ಬೆನ್ನಿಗೆ ಅಂಟಿಕೊAಡ ಸೋಂಕು. ಇದರಿಂದ ಪಾರಾಗಲು ನಾವು ಸದಾ ಸಿದ್ಧರಾಗಬೇಕು ಮತ್ತು ಪ್ರಯತ್ನಿಸಬೇಕಿದೆ ಎಂದರು.
ಮೊದಲ ಮತ್ತು ಎರಡನೇ ಕೋವಿಡ್ ಅಲೆಯಲ್ಲಿ ಬಹಳಷ್ಟು ಜನರನ್ನು ನಾವು ಕಳೆದುಕೊಂಡಿರುವುದು ದುರ್ದೈವದ ಸಂಗತಿ. ಕೇವಲ ಜಿಲ್ಲಾಡಳಿತ, ಅಧಿಕಾರಿಗಳು ಕೆಲಸ ಮಾಡಿದರೆ ಸಾಲದು. ಜನರಲ್ಲೂ ಜಾಗೃತಿ ಬೇಕು. ಪ್ರತಿ ಹಳ್ಳಿ ಹಳ್ಳಿಯಲ್ಲಿಯೂ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ. ಎಲ್ಲೆಲ್ಲಿ ಹೆಚ್ಚು ಕಡು ಬಡವರಿದ್ದಾರೋ ಅವರಿಗೆಲ್ಲ ಸರ್ಕಾರದ ಯೋಜನೆಗಳು ಮುಟ್ಟಬೇಕು. ಹೀಗಾಗಿ ಎಲ್ಲರ ಸಹಕಾರದಿಂದ ಮಾತ್ರ ಇದನ್ನು ನಿಯಂತ್ರಿಸಬಹುದು ಎಂದು ಹೇಳಿದರು.
ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಸೇರಿ ಇತರ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲೆಯಲ್ಲಿನ ಕೋವಿಡ್ ಹಾಗೂ ಪ್ರವಾಹ ಪರಿಸ್ಥಿತಿ ಬಗ್ಗೆ ಉಪ ಲೋಕಾಯುಕ್ತ ಬಿ.ಎಸ್. ಪಾಟೀಲರಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿ.ಪಂ.ಸಿಇಓ ದರ್ಶನ್ ಎಚ್.ವ್ಹಿ, ಎಸ್.ಪಿ. ಲಕ್ಷ್ಮಣ ನಿಂಬರಗಿ, ನಗರ ಪೊಲೀಸ್ ಆಯುಕ್ತ ಡಾ.ಕೆ. ತ್ಯಾಗರಾಜನ್, ಲೋಕಾಯುಕ್ತ ಎಸ್.ಪಿ. ಯಶೋಧಾ ವಂಟಗೋಡಿ ಸೇರಿ ಇನ್ನು ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.


Leave a Reply