Koppal

ಎರೆಹುಳು ತೊಟ್ಟಿ ನಿರ್ಮಿಸಿ, ಅಧಿಕ ಲಾಭ ಗಳಿಸಿ : ರಾಘವೇಂದ್ರ ಎಲಿಗಾರ


ಗಂಗಾವತಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ರೈತಬಂಧು ಅಭಿಯಾನದ ಸದುಪಯೋಗವನ್ನು ಪ್ರತಿಯೊಬ್ಬ ರೈತರು ಪಡೆದುಕೊಳ್ಳಬೇಕು ಎಂದು ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರ ವಿಜ್ಞಾನಿಗಳಾದ ಡಾ.ರಾಘವೇಂದ್ರ ಎಲಿಗಾರ ಹೇಳಿದರು.

ತಾಲ್ಲೂಕಿನ ವೆಂಕಟಗಿರಿ ಗ್ರಾಮದಲ್ಲಿ ಗುರುವಾರ ರೈತ ಬಂಧು ಅಭಿಯಾನದ ಕುರಿತು ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು. ಎರೆಹುಳುವನ್ನು ರೈತನ ಮಿತ್ರ ಎಂದು ಕರೆಯುತ್ತೇವೆ. ರೈತರು ಅಧಿಕ ಇಳುವರಿಯ ಆಸೆಯಿಂದ ಸಾಕಷ್ಟು ರಾಸಾಯನಿಕ ಗೊಬ್ಬರಗಳ ಬಳಕೆಯನ್ನು ಮಾಡುತ್ತಿದ್ದಾರೆ. ಇದರಿಂದ ಮಣ್ಣಿನ ಫಲವತ್ತತೆ ಹಾಗೂ ಇಳುವರಿಯೂ ಕುಂಠಿತವಾಗುತ್ತದೆ. ಹಾಗಾಗಿ ಸರ್ಕಾರ ರೈತರಿಗೆ ನರೇಗಾ ಯೋಜನೆಯಡಿ ಎರೆಹುಳು ತೊಟ್ಟಿಗಳನ್ನು ನಿರ್ಮಾಣ ಮಾಡಿಕೊಡುವ ಉದ್ದೇಶದಿಂದ ರೈತ ಬಂಧು ಅಭಿಯಾನವನ್ನು ಹಮ್ಮಿಕೊಂಡಿದೆ. ಈ ಎರೆಹುಳು ಗೊಬ್ಬರ ತೊಟ್ಟಿಗಳನ್ನು ಮಾಡಿಕೊಳ್ಳುವುದರಿಂದ ರೈತರಿಗೆ ಸಾಕಷ್ಟು ಪ್ರಯೋಜಗಳು ಇದ್ದು, ಪ್ರತಿಯೊಬ್ಬರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ನಂತರ ತಾಲ್ಲೂಕು ಪಂಚಾಯಿತಿಯ ಪ್ರಭಾರಿ ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್ ಮಾತನಾಡಿ, ರೈತರು ಎರೆಹುಳು ಗೊಬ್ಬರ ತಯಾರಿಕೆಯನ್ನು ಉತ್ತೇಜಿಸುವ ದೃಷ್ಠಿಯಿಂದ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಅಗಸ್ಟ್ 15 ರಿಂದ ಅಕ್ಟೋಬರ್ 15 ರವರೆಗೆ ರೈತ ಬಂಧು ಅಭಿಯಾನವನ್ನು ಹಮ್ಮಿಕೊಂಡಿದೆ. ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕನಿಷ್ಟ 30 ಎರೆಹುಳು ತೊಟ್ಟಿಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಂದಲಾಗಿದ್ದು, ರೈತರು ಎರೆಹುಳು ಗೊಬ್ಬರ ತೊಟ್ಟಿಗಳನ್ನು ನಿರ್ಮಿಸಿಕೊಂಡು ಅಧಿಕ ಇಳುವರಿಯನ್ನು ಪಡೆಯುವಂತೆ ತಿಳಿಸಿದರು.

ಕೃಷಿ ಅಧಿಕಾರಿ ಹರೀಶ್ ಮಾತನಾಡಿ, ಎರೆಹುಳು ಘಟಕ ನಿರ್ಮಾಣ ಮಾಡುವ ವಿಧಾನ ಹಾಗೂ ಎರೆಹುಳು ಗೊಬ್ಬರ ತಯಾರಿಕೆ ಕುರಿತು ಸಮಗ್ರ ಮಾಹಿತಿ ನೀಡಿದರು.

ಬಳಿಕ ರೈತರಿಂದಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಜಾಗೃತಿ ಮೂಡಿಸುವ ಕೃಷಿ ವಾಹನಕ್ಕೆ ಚಾಲನೆ ನೀಡಲಾಯಿತು.

ಈ ವೇಳೆ ತಾಲ್ಲೂಕು ಪಂಚಾಯಿತಿ ಐಇಸಿ ಸಂಯೋಜಕರಾದ ಶಿವಕುಮಾರ್ ಕೆ. ಗ್ರಾ.ಪಂ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.

(ಹನಮೇಶ ಬಟಾರಿ)


Leave a Reply