Koppal

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಪ್ರಗತಿ ಪರಿಶೀಲನಾ ಸಭೆ


ಕೊಪ್ಪಳ:ಗೋ ಹತ್ಯೆ ನಿಷೇಧ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಇಲಾಖೆಯ ಅಧಿಕಾರಿಗಳು ಮತ್ತು ಪಶುವೈದ್ಯರ ಪಾತ್ರ ಮುಖ್ಯವಾಗಿದ್ದು, ಈ ಕಾಯ್ದೆ ಬಗ್ಗೆ ಸಂಪೂರ್ಣ ತಿಳಿದುಕೊಂಡು ಗ್ರಾಮಸಭೆ ಮಾಡಿ, ರೈತರಿಗೆ ಜಾಗೃತಿ ಮೂಡಿಸಬೇಕು ಎಂದು ಕರ್ನಾಟಕ ಸರ್ಕಾರದ ಪಶು ಸಂಗೋಪನೆ ಇಲಾಖೆಯ ಸಚಿವರಾದ ಪ್ರಭು ಬಿ.ಚವ್ಹಾಣ್ ಹೇಳಿದರು.
ಅವರು ಬುಧವಾರ (ಸೆ.01) ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಅನುಷ್ಠಾನದ ಬಗ್ಗೆ ಹಾಗೂ 24/7 ಪ್ರಾಣಿ ಕಲ್ಯಾಣ ಸಹಾಯವಾಣಿ (ವಾರ್ ರೂಮ್) ಕಾರ್ಯ ಮತ್ತು ಕೊಪ್ಪಳ ಜಿಲ್ಲೆಯ ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೋವುಗಳ ಸಂರಕ್ಷಣೆಯೇ ನಮ್ಮ ಸರ್ಕಾರದ ಉದ್ದೇಶವಾಗಿದ್ದು ಇದಕ್ಕಾಗಿಯೆ ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತಂದಿದ್ದೇವೆ. ಮೂಕಪ್ರಾಣಿಗಳ ರಕ್ಷಣೆಯಾಗಬೇಕು ಮತ್ತು ಗೋವುಗಳು ಕಸಾಯಿಖಾನೆಗೆ ಹೋಗಬಾರದು. ಈ ನಿಟ್ಟಿನಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಇಲಾಖೆಯ ಅಧಿಕಾರಿಗಳು ಮತ್ತು ಪಶುವೈದ್ಯರು ಜಾರಿಗೆ ತಂದು ಗೋಹತ್ಯೆ ನಿಷೇಧ ಕಾಯ್ದೆ ಕುರಿತು ಸಂಪೂರ್ಣ ಅರಿತುಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಬಕ್ರೀದ್ ಸಮಯದಲ್ಲಿಯೇ ಪಶು ಇಲಾಖೆ, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ 6 ರಿಂದ 7 ಸಾವಿರ ಜಾನುವಾರುಗಳನ್ನು ರಾಜ್ಯದಲ್ಲಿ ರಕ್ಷಣೆ ಮಾಡಿದ್ದೇವೆ ಎಂದು ಹೇಳಿದರು.
ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮಾಡಿದ ನಂತರ ಗೋವುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಗೊಂದು ಗೋಶಾಲೆ ಸ್ಥಾಪಿಸಲು ನಮ್ಮ ಸರ್ಕಾರ ನಿರ್ಧರಿಸಿದೆ. ಮನುಷ್ಯರು ಅನಾರೋಗ್ಯದಿಂದ ಬಳಲುತ್ತಿದ್ದರೆ ಅವರಿಗೆ ತುರ್ತಾಗಿ ಚಿಕಿತ್ಸೆ ಪಡೆಯುವುದಕ್ಕೆ ಅಂಬ್ಯುಲೆನ್ಸ್ ಸೇವೆ ಇದೆ. ಪ್ರಾಣಿಗಳಿಗೂ ಈರೀತಿ ಸೇವೆ ಒದಗಿಸಲು ಪಶು ಸಂಜೀವಿನಿಯನ್ನು ಜಾರಿಗೆ ತರಲಾಗಿದ್ದು, 1962 ಕ್ಕೆ ಕರೆ ಮಾಡಿ ಸೇವೆ ಪಡೆಯಬಹುದು. ಇದಲ್ಲದೆ ಪ್ರಾಣಿ ಕಲ್ಯಾಣ ಸಹಾಯವಾಣಿಯನ್ನು ಸಹ ಪ್ರಾರಂಭಿಸಿದ್ದು, ಇಡೀ ದೇಶದಲ್ಲಿಯೆ ಮೊದಲ ಬಾರಿಗೆ ನಮ್ಮ ಇಲಾಖೆಯಲ್ಲಿ ಆರಂಭಿಸಲಾಗಿರುವ 24*7 ಸೇವೆ ಇದಾಗಿದೆ. ಪ್ರಾಣಿ ಕಲ್ಯಾಣ ಸಹಾಯವಾಣಿ(ವಾರ್ ರೂಂ)ಗೆ ಕಳೆದ ಒಂದೇ ತಿಂಗಳಲ್ಲಿ ರಾಜ್ಯದಲ್ಲಿ 10 ಸಾವಿರ ಕರೆಗಳು ರೈತರಿಂದ ಬಂದಿದ್ದು,ಅವುಗಳಲ್ಲಿ ಶೇ.85ರಷ್ಟು ಇತ್ಯರ್ಥಪಡಿಸಲಾಗಿದೆ. ಪಶುಸಂಗೋಪನಾ ಇಲಾಖೆಯ ನೌಕರರ ಮುಂಬಡ್ತಿ ನೀಡಿದ್ದೇವೆ. ಇಲಾಖೆಯಲ್ಲಿ ಜಾರಿಯಲ್ಲಿರುವ ವಿವಿಧ ಸೇವಾ ಸೌಲಭ್ಯಗಳ ಕುರಿತು ಪ್ರತಿಯೊಂದು ಗ್ರಾಮಗಳಿಗೆ ತೆರಳಿ ಗ್ರಾಮಸಭೆಗಳ ಮೂಲಕ ರೈತರಿಗೆ ಅರಿವು ಮೂಡಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈತರ ಜಾನುವಾರುಗಳಿಗೆ ಅಗತ್ಯ ಮೇವು ವಿತರಿಸಬೇಕು. ರೈತ ಸಂಪರ್ಕ ಕಾರ್ಯಕ್ರಮ ಮಾಡಬೇಕು. ಪಶು ಆರೋಗ್ಯ ಶಿಬಿರ ನಡೆಸಬೇಕು. ಗ್ರಾಮ ಸಭೆಯ ಮೂಲಕ ನಮ್ಮ ಇಲಾಖೆಯ ಯೋಜನೆಗಳ ಅರಿವು ಮೂಡಿಸಬೇಕು. ರೈತರಿಗೆ ಹಾಗೂ ಸಿಬ್ಬಂದಿಗೆ ತರಬೇತಿ ನೀಡಬೇಕು. ಕುರಿ ಮತ್ತು ಮೇಕೆ ವಿತರಿಸಬೇಕು.ಕೊಪ್ಪಳ ಜಿಲ್ಲೆಯಲ್ಲಿ 4 ಖಾಸಗಿ ಗೋಶಾಲೆಗಳಿಗೆ ವಾರದಲ್ಲಿ ಎರಡು ಬಾರಿ ಪಶು ವೈದ್ಯರು ಭೇಟಿ ನೀಡಿ, ಪಶುಗಳಿಗೆ ಚಿಕಿತ್ಸೆ ನೀಡಬೇಕು. ಔಷಧೀಯ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಇಲಾಖೆಯ ಯಾವುದೇ ಸಮಸ್ಯೆಗಳಿದ್ದರೆ ರಾಜ್ಯ ಮಟ್ಟದ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.
ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಖಾಸಗಿ ಗೋಶಾಲೆಗಳು ಜಾನುವಾರುಗಳ ರಕ್ಷಣೆಯ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ಅವುಗಳಿಗೆ ಸರ್ಕಾರದಿಂದ ಸಹಾಯಧನ ನೀಡಿದರೆ ಅನುಕೂಲವಾಗುತ್ತದೆ ಎಂದು ಪಶು ಸಂಗೋಪನೆ ಸಚಿವರಿಗೆ ಮನವಿ ಮಾಡಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಟಿ.ಶ್ರೀಧರ್ ಅವರು ಮಾತನಾಡಿ ನಗರಗಳಲ್ಲಿ ಬಿಡಾಡಿ ದನಗಳ ಕಳ್ಳತನ ಹಾಗೂ ಅವುಗಳಿಂದ ಅಪಘಾತಗಳು ಹೆಚ್ಚಾಗಿ ಸಂಬವಿಸುತ್ತಿದ್ದು, ಅವುಗಳಿಗಾಗಿ ಗೋಶಾಲೆಗಳ ಅವಶ್ಯಕತೆ ಇದೆ ಎಂದು ಸಚಿವರ ಗಮನಕ್ಕೆ ಮಾಹಿತಿ ತಿಳಿಸಿದರು.
ಸಭೆಯಲ್ಲಿ ಸಂಸದ ಕರಡಿ ಸಂಗಣ್ಣ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ಫೌಜಿಯಾ ತರನ್ನುಮ್, ಸಚಿವರ ವಿಶೇಷ ಅಧಿಕಾರಿ ಸಿದ್ದಲಿಂಗಪ್ಪ ಪ್ರಭು ಹಾಗೂ ಆಪ್ತ ಕಾರ್ಯದರ್ಶಿ ಭಾಸ್ಕರ್ ನಾಯ್ಕ್, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೆವಾ ಇಲಾಖೆ ಉಪನಿರ್ದೇಶಕ ಡಾ. ಹೆಚ್.ನಾಗರಾಜ್ ಹಾಗೂ ತಾಲ್ಲೂಕ ಪಶುವೈದ್ಯರು ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply