Belagavi

ಮಹಾನಗರ ಪಾಲಿಕೆ ಚುನಾವಣೆಗೆ ಸಕಲ ಸಿದ್ಧತೆ: ಜಿಲ್ಲಾಧಿಕಾರಿ ಹಿರೇಮಠ


ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ಮತದಾರರ ಆರೋಗ್ಯದ ದೃಷ್ಟಿಯಿಂದ ಎಲ್ಲ ರೀತಿಯ ಕಾಳಜಿ ವಹಿಸಿದ್ದೇವೆ. ಕೋವಿಡ್ ಆತಂಕ ಬಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಮನವಿ ಮಾಡಿಕೊಂಡರು.
ಶುಕ್ರವಾರ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ನಿಮಿತ್ತ ಗುರುವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ೪೦೨ ಮೂಲ ಮತಗಟ್ಟೆ, ೧೩ ಉಪ ಮತಗಟ್ಟೆ ಹೀಗೆ ಒಟ್ಟು ೪೧೫ ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಅಗತ್ಯ ಎಲ್ಲ ಮೂಲಭೂತ ಸೌಕರ್ಯ ಒದಗಿಸಲಾಗಿದೆ. ಒಟ್ಟು ೪,೩೧,೩೮೩ ಮತದಾರರಿದ್ದು, ೨,೧೫,೩೬೪ ಪುರುಷ, ೨,೧೬,೦೧೯ ಮಹಿಳಾ ಮತದಾರರಿದ್ದಾರೆ. ೫೬೨ ಹೆಚ್ಚುವರಿ ಇವಿಎಂ ಮಷೀನ್‌ಗಳನ್ನು ವ್ಯವಸ್ಥೆ ಮಾಡಲಾಗಿದೆ. ೪೧೫ ಮತದಾನ ಕೇಂದ್ರ ಸ್ಥಾಪಿಸಲಾಗಿದ್ದು, ಪ್ರತಿ ಕೇಂದ್ರಕ್ಕೆ ನಾಲ್ಕು ಸಿಬ್ಬಂದಿಯAತೆ ೧೮೨೮ ಸಿಬ್ಬಂದಿಯನ್ನು ೪೫೭ ತಂಡಗಳನ್ನು ಮಾಡಿ ನಿಯೋಜಿಸಲಾಗಿದೆ. ಯಾರು ಯಾವ ಮತದಾನ ಕೇಂದ್ರಕ್ಕೆ ಹೋಗಬೇಕು ಎಂಬ ಬಗ್ಗೆ ಸೂಚನೆ ನೀಡಿದ್ದೇವೆ. ಸಂಜೆ ಹೊತ್ತಿಗೆ ಚುನಾವಣೆ ಸಿಬ್ಬಂದಿ ಎಲ್ಲ ಮತದಾನ ಕೇಂದ್ರಗಳಿಗೆ ಚುನಾವಣಾ ಸಾಮಗ್ರಿಗಳ ಜೊತೆಗೆ ತೆರಳಲಿದ್ದಾರೆ ಎಂದು ತಿಳಿಸಿದರು.
ಕೊರೊನಾ ಹಿನ್ನೆಲೆ ಮತದಾನ ಕೇಂದ್ರಗಳಲ್ಲಿ ಸ್ಯಾನಿಟೈಸೇಶನ್, ಮಾಸ್ಕ್ ಸೇರಿ ಇನ್ನಿತರ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಎಲ್ಲಾ ಮತಗಟ್ಟೆ ಕೇಂದ್ರಗಳ ಬಳಿ ಆರೋಗ್ಯ ಇಲಾಖೆ ಸಿಬ್ಬಂದಿ ಇರಲಿದ್ದು, ಚುನಾವಣೆಗೆ ಬಹುತೇಕ ಶಿಕ್ಷಕರನ್ನು ಬಳಸಿಕೊಳ್ಳಲಾಗಿದ್ದು. ಶಾಲೆಗಳು ಆರಂಭವಾಗುತ್ತಿರುವ ಹಿನ್ನೆಲೆ ಶೇ.೧೦೦ರಷ್ಟು ಶಿಕ್ಷಕರು ಈಗಾಗಲೇ ಲಸಿಕೆ ಪಡೆದುಕೊಂಡಿದ್ದಾರೆ. ಇದು ಚುನಾವಣೆಯಲ್ಲಿ ಅನುಕೂಲ ಆಗಲಿದೆ ಎಂದು ಹೇಳಿದರು.
ಇನ್ನು ಅಬಕಾರಿ ಇಲಾಖೆಯಿಂದ ೧೪೦೦ ಲೀಟರ್ ಐಎಂಎಲ್, ೨೨೮ ಲೀಟರ್ ಬೀಯರ್, ೨೬೦ ಲೀಟರ್ ಕಳ್ಳಭಟ್ಟಿ ಸಾರಾಯಿ ಸೇರಿ ೬ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೆಚ್ಚಿನ ಮಾಹಿತಿ ನೀಡಿದರು.
ಬೆಳಗಾವಿ ಪಾಲಿಕೆ ಚುನಾವಣೆ ಜೊತೆಗೆ ರಾಯಬಾಗ ಪಟ್ಟಣ ಪಂಚಾಯತಿಯ ವಾರ್ಡ್ ೯ ಹಾಗೂ ಸವದತ್ತಿ ಯಲ್ಲಮ್ಮ ಪುರಸಭೆಯ ವಾರ್ಡ್ ೨೩ರಲ್ಲಿ ಚುನಾವಣೆ ನಡೆಯುತ್ತಿದೆ. ಬೆಳಿಗ್ಗೆ ೭ ಗಂಟೆಯಿAದ ಸಂಜೆ ೬ ಗಂಟೆವರೆಗೆ ಮತದಾನ ನಡೆಯಲಿದೆ. ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಚುನಾವಣೆ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.


Leave a Reply