Belagavi

ಎಸಿ ಕಚೇರಿಗೆ ದೌಡಾಯಿಸಿದ ಸಂಗೊಳ್ಳಿ ರಾಯಣ್ಣ ಸೊಸೈಟಿ ಠೇವಣಿದಾರರು


ಬೆಳಗಾವಿ: ಆನಂದ ಅಪ್ಪುಗೋಳ ಒಡೆತನದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯಲ್ಲಿ ಠೇವಣಿ ಇಟ್ಟಿದ್ದ ಗ್ರಾಹಕರ ಹಣ ಮರಳಿಸಲು ಅರ್ಜಿ ಆಹ್ವಾನಿಸಿದ್ದರಿಂದ ಠೇವಣಿದಾರರು ಅರ್ಜಿ ಸಲ್ಲಿಸಲು ಬೆಳಗಾವಿ ಎಸಿ ಕಚೇರಿಗೆ ಮುಗಿಬಿದ್ದರು.
ಸಂಗೊಳ್ಳಿ ರಾಯಣ್ಣ ಸೊಸೈಟಿ ಪರವಾಗಿ ಹೆಚ್ಚಿನ ಬಡ್ಡಿದರ ಆಮಿಷವೊಟ್ಟಿ ವಿವಿಧ ರೀತಿಯ ಠೇವಣಿಗಳನ್ನು ಸಂಗ್ರಹಿಸಿ ಅವುಗಳನ್ನು ನಿಗದಿತ ಅವಧಿ ಮುಗಿದರೂ ಹೂಡಿಕೆದಾರರಿಗೆ ಹಿಂತಿರುಗಿಸದೇ ವಂಚಿಸಿರುವುದು ಸರ್ಕಾರದ ಗಮನಕ್ಕೆ ಬಂದಿತ್ತು. ಇದರಿಂದ ಸಂಗೊಳ್ಳಿ ರಾಯಣ್ಣ ಸೊಸೈಟಿಯ ಆಸ್ತಿಯನ್ನು ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತ ಸಂರಕ್ಷಣಾ ಕಾಯ್ದೆ ೨೦೦೪ರ ಅಡಿಯಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದು ಹರಾಜು ಪ್ರಕ್ರಿಯೆಗಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ನ್ಯಾಯಾಲಯದ ಆದೇಶದಂತೆ ಹರಾಜಿನಿಂದ ಬಂದ ಹಣವನ್ನು ಠೇವಣಿದಾರರಿಗೆ ವಿತರಿಸಲು ಠೇವಣಿದಾರರ ವಿವರವನ್ನು ಸಲ್ಲಿಸಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸಲು ಸೆ.೨೪ರ ಗಡುವು ನೀಡಲಾಗಿದೆ. ಮಾಹಿತಿ ತಿಳಿದು ಗುರುವಾರ ಬೆಳಗಾವಿಯ ಎಸಿ ಕಚೇರಿಗೆ ಆಗಮಿಸಿದ ನೂರಾರು ಠೇವಣಿದಾರರು ತಮ್ಮ ಖಾತೆಯ ವಿವರಗಳನ್ನು ನೀಡಿ ಅರ್ಜಿ ಸಲ್ಲಿಸಿದರು.


Leave a Reply