Belagavi

ಗಣೇಶೋತ್ಸವ ಐದು ದಿನಗಳ ಮಿತಿಗೆ ಮಂಡಳಿಗಳ ವಿರೋಧ


ಬೆಳಗಾವಿ : ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಇಂದು ನಡೆದ ಗಣೇಶೋತ್ಸವ ಮಹಾಮಂಡಳಗಳ ಸಭೆಯಲ್ಲಿ ಉತ್ಸವವನ್ನು ಐದು ದಿನಗಳಿಗೆ ನಿರ್ಬಂಧಿಸಿರುವ ಸರ್ಕಾರದ ಕ್ರಮಕ್ಕೆ ನಗರದ ಸಾರ್ವಜನಿಕ‌ ಗಣೇಶ ಉತ್ಸವ ಮಂಡಳಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು.
ಹಿಂದೂ ಭಕ್ತಾಧಿಗಳ ಸಂಪ್ರದಾಯ ಹಾಗೂ ಭಾವನೆಗಳನ್ನು ಅರ್ಥ ಮಾಡಿಕೊಂಡು ಐದು ದಿನಗಳ ಬದಲಾಗಿ ಹತ್ತು ದಿನಗಳ ಉತ್ಸವಕ್ಕೆ ಅವಕಾಶ ಕಲ್ಪಿಸಬೇಕು ಎಂದು ‌ಎಲ್ಲರೂ ಒಕ್ಕೊರಲಿನಿಂದ ಆಗ್ರಹಿಸಿದರು.
ಸಭೆಯಲ್ಲಿ ಮಾತನಾಡಿದ ಲೋಕಮಾನ್ಯ ಟಿಳಕ ಗಣೇಶೋತ್ಸವ ಮಹಾಮಂಡಳದ ಅಧ್ಯಕ್ಷ ವಿಜಯ ಜಾಧವ, ಐದು ದಿನಗಳಿಗೆ ಮಾತ್ರ ‌ಉತ್ಸವ ಮಿತಿಗೊಳಿಸಿರುವುದಕ್ಕೆ ತಮ್ಮ ವಿರೋಧವಿದೆ. ಗಣೇಶೋತ್ಸವ ಐದು‌ ದಿನಗಳಿಗೆ ನಿರ್ಬಂಧಿಸಿರುವುದರಿಂದ ಗೊಂದಲ ಉಂಟಾಗಿದೆ.
ಉಳಿದ ಎಲ್ಲ ನಿಯಮಗಳನ್ನು ಪಾಲಿಸಲಾಗುವುದು. ಆದರೆ ಸಂಪ್ರದಾಯ ಪ್ರಕಾರ ಹತ್ತು ದಿನಗಳ ಉತ್ಸವ ಆಚರಿಸಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ನೇತಾಜಿ ಜಾಧವ ಮಾತನಾಡಿ, ಉತ್ಸವಕ್ಕೆ ಕೆಲವೇ ದಿನಗಳಿರುವಾಗ ಈ ರೀತಿಯ ಮಿತಿ‌ ವಿಧಿಸುವ ಮೂಲಕ ಸಂಪ್ರದಾಯಕ್ಕೆ ನಿರ್ಬಂಧ ವಿಧಿಸಿದಂತಾಗಿದೆ. ಅದ್ದರಿಂದ ಈ ಬಗ್ಗೆ ಶೀಘ್ರ ಸೂಕ್ತ ನಿರ್ಧಾರ ಪ್ರಕಟಿಸಸಬೇಕು ಎಂದು ಒತ್ತಾಯಿಸಿದರು.
ಏಕಗವಾಕ್ಷಿ ವ್ಯವಸ್ಥೆ ಮೂಲಕ ‌ಗಣೇಶೋತ್ಸವಕ್ಕೆ‌ ಅಗತ್ಯ ಅನುಮತಿಗಳನ್ನು ನೀಡಲು ವಿವಿಧ ಮಹಾಮಂಡಳಿಗಳ ಪದಾಧಿಕಾರಿಗಳು ಮನವಿ ಮಾಡಿಕೊಂಡರು. ಗಣೇಶೋತ್ಸವ ಮಹಾಮಂಡಳಗಳ ಒಕ್ಕೊರಲಿನ ಕೋರಿಕೆಯಂತೆ ಗಣೇಶೋತ್ಸವವನ್ನು ಐದು‌ ದಿನಗಳ ಬದಲಾಗಿ ಹತ್ತು ದಿನಗಳ ಉತ್ಸವಕ್ಕೆ ಅವಕಾಶ ಕಲ್ಪಿಸುವ ಬೇಡಿಕೆಗೆ ಸಂಬಂಧಿಸಿದಂತೆ ಸರಕಾರಕ್ಕೆ ‌ತಕ್ಷಣವೇ ವರದಿ ಕಳಿಸಲಾಗುವುದು. ಈ ಕುರಿತು ಅಂತಿಮವಾಗಿ ಸರಕಾರ ‌ನೀಡುವ ನಿರ್ದೇಶನವನ್ನು ಎಲ್ಲರೂ ಪಾಲಿಸಬೇಕು  ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.
ಗಣೇಶೋತ್ಸವಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವುದರಿಂದ ಏಕಗವಾಕ್ಷಿ ವ್ಯವಸ್ಥೆ ಮೂಲಕ ಗಣೇಶೋತ್ಸವ ಮಂಡಳಿಗಳಿಗೆ ಅಗತ್ಯ ಅನುಮತಿ ನೀಡಲು ಸಂಬಂಧಿಸಿದ ಇಲಾಖೆಗಳ ಸಮನ್ವಯದೊಂದಿಗೆ ಚರ್ಚಿಸಿ ಕೂಡಲೇ ಏಕ‌ಗವಾಕ್ಷಿ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿಲ್ಲಾಧಿಕಾರಿ
ಭರವಸೆ ನೀಡಿದರು.
ಗಣೇಶೋತ್ಸವ ಆಚರಣೆಗೆ ಸಂಬಂಧಿಸಿದಂತೆ ಸರಕಾರ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಗಣೇಶೋತ್ಸವ ಸ್ಥಳಗಳಲ್ಲಿ ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಬೇಕು. ಜನಸಂದಣಿ ಉಂಟಾಗದಂತೆ ಆಯೋಜಕರು ಕ್ರಮ ಕೈಗೊಳ್ಳಬೇಕು. ಮಾಸ್ಕ್, ಸ್ಯಾನಿಟೈಸರ್ ಗಳನ್ನು ಕಡ್ಡಾಯಗೊಳಿಸಬೇಕು ಎಂದರು.
ಸರಕಾರದ ಮಾರ್ಗಸೂಚಿಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ಆದೇಶ ಉಲ್ಲಂಘಿಸಿದರೆ ವಿಪತ್ತು ನಿರ್ವಹಣಾ ಕಾಯ್ದೆ ಪ್ರಕಾರ ಕ್ರಮಗಳನ್ನು ತೆಗೆದುಕೊಳ್ಳಲು‌ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಎಲ್ಲ ಗಣೇಶೋತ್ಸವ ಮಹಾಮಂಡಳಗಳು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದರು.
ಕೋವಿಡ್ ನಿಯಂತ್ರಣ ದೃಷ್ಟಿಯಿಂದ ‌ಮಾತ್ರ ಸರಕಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಆದ್ದರಿಂದ ಎಲ್ಲರೂ ‌ಸೇರಿ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಕೋವಿಡ್ ನಿಯಂತ್ರಣಕ್ಕೆ ಮುಂದಾಗಬೇಕಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮನವಿ ಮಾಡಿದರು.
ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಬೆಳಗಾವಿ ಉಪ ಪೊಲೀಸ್ ಆಯುಕ್ತರಾದ ಡಾ.ವಿಕ್ರಮ್ ಆಮ್ಟೆ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಮಹಾನಗರ ಪಾಲಿಕೆಯ ಆಯುಕ್ತ ಡಾ.ರುದ್ರೇಶ್ ಘಾಳಿ ಮತ್ತಿತರರು ಉಪಸ್ಥಿತರಿದ್ದರು.
ಬೆಳಗಾವಿ ಮಹಾನಗರದ‌ ವಿವಿಧ ಗಣೇಶೋತ್ಸವ ಮಹಾಮಂಡಳಿಗಳ ಪದಾಧಿಕಾರಿಗಳು, ಮಹಾನಗರ ಪಾಲಿಕೆ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.


Leave a Reply