Belagavi

ಕ.ಸಾ.ಪ ವತಿಯಿಂದ ಹಿರಿಯ ಮಕ್ಕಳ ಸಾಹಿತಿ ಶ್ರೀ ಚನ್ನಬಸಪ್ಪ ಹೊಸಮನಿ ಅವರಿಗೆ ಅಂತಿಮ ನಮನ


ಬೆಳಗಾವಿ-೧೫: ಕನ್ನಡ ನಾಡಿನ ಪ್ರಖ್ಯಾತ ಮಕ್ಕಳ ಸಾಹಿತಿ ಸತ್ಯಾರ್ಥಿ ಕಾವ್ಯ ನಾಮದ ಶ್ರೀ ಚನ್ನಬಸಪ್ಪ ಹೊಸಮನಿ ಅವರ ಅಗಲಿಕೆಯಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ಹಾನಿಯಾಗಿದೆ. ಇವರು ದಿವ್ಯ ಜೀವಿ, ಕಿತ್ತೂರ ವೀರಶ್ರೀ, ಮಕ್ಕಳ ಸೊಗಸು, ಪುಟ್ಟ ಭಾರತ, ಅನ್ನದಾತ ಮತ್ತು ಇತರ ಕವಿತೆಗಳು ಮುಂತಾದ ಕವನ ಸಂಕಲನಗಳನ್ನು, ‘ಪುಟ್ಟ ಕನಸು’ ಎಂಬ ಮಕ್ಕಳ ಕಾದಂಬರಿಯನ್ನು, ವೀರಸ್ವರ್ಗದಲ್ಲಿ ಭಾರತೀಯರು, ತಿರುಳ್ಗನ್ನಡ ಕನ್ನಡತಿಯರು ಎಂಬ ನಾಟಕ ರಚಿಸಿದ್ದರು. ಇವರ ಅಭಿಮಾನಿ ಬಳಗ ‘ಸತ್ಯಾರ್ಥಿ’ ಎನ್ನುವ ಅಭಿನಂದನ ಗ್ರಂಥವನ್ನು ಸಮರ್ಪಿಸಿದ್ದರು. ಹಾಗೂ ಬೈಲಹೊಂಗಲ ತಾಲೂಕಾ ೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಶ್ರೀಯುತರು ತಮ್ಮ ಸಾಹಿತ್ಯ ಮೂಲಕ ಮಕ್ಕಳ ಭಾವನೆಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ, ಮಕ್ಕಳ ಭಾವನೆಗಳನ್ನು ಅರಳಿಸುವ ಹೂವಾಗಿಸುವ ಮೂಲಕ ಕನ್ನಡ ನಾಡಿನ ಮಕ್ಕಳ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದಾರೆ ರಾಜ್ಯ ಸರ್ಕಾರದ ಏಳನೇ ತರಗತಿಯ ಪಠ್ಯಪುಸ್ತಕದಲ್ಲಿ ಇವರು ಬರೆದಿರುವ ‘ಅನ್ನದಾತ’ ಎಂಬ ಪದ್ಯ ವಿಷಯ ವಸ್ತುವಾಗಿರುವುದು ಇವರ ಸಾಹಿತ್ಯದ ಪ್ರಬುದ್ಧತೆಗೆ ಸಾಕ್ಷಿ. ಇವರ ಆತ್ಮಕ್ಕೆ ದೇವರು ಶಾಂತಿ ನೀಡಲಿ ಎಂದು ಬೆಳಗಾವಿ ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ, ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಅವರು ಹಾಗೂ ಮಾಜಿ ಅಧ್ಯಕ್ಷರಾದ, ಶ್ರೀ ಮೋಹನ ಬ ಪಾಟೀಲ ಮತ್ತು ಶ್ರೀ ವಿಜಯ ಶ್ರೀ ಮೆಟಗುಡ್ಡ ಹಾಗೂ ಬೆಳಗಾವಿ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿಯ ಮಾಜಿ ಸರ್ವ ಸದಸ್ಯರು, ಮಕ್ಕಳ ಸಾಹಿತಿಗಳಾದ ಅನ್ನಪೂರ್ಣ ಕನೋಜ. ಗೌರಾದೇವಿ ತಾಳಿಕೋಟಿಮಠ, ಪ್ರೇಮಾ ಅಂಗಡಿ, ಶಶಿಕಲಾ ಯಲಿಗಾರ, ನರಸನ್ನವರ ಮುಂತಾದ ಅಪಾರ ಸಂಖ್ಯೆಯ ಗುರುವೃಂದವು ಹಾಜರಿದ್ದು ತಮ್ಮ ಅಂತಿಮ ನಮನವನ್ನು ಸಲ್ಲಿಸಿದರು.


Leave a Reply