Belagavi

ಜಿಲ್ಲೆಯಾದ್ಯಂತ ಲಸಿಕಾ ಮೇಳ: ಲಸಿಕಾಮೇಳಕ್ಕೆ ಸಂಸದೆ ಮಂಗಳಾ ಅಂಗಡಿ ಚಾಲನೆ


ಬೆಳಗಾವಿ, ಸೆ.೧೭ : ಸಂಭವನೀಯ ಮೂರನೇ ಅಲೆ ಹಿನ್ನೆಲೆಯಲ್ಲಿ ಎಲ್ಲರಿಗೂ ಕೋವಿಡ್ ನಿರೋಧಕ ಲಸಿಕೆ ನೀಡುವ ಮಹತ್ತರ ಉದ್ದೇಶದಿಂದ ಸರಕಾರವು ಇಂದು ರಾಜ್ಯದಾದ್ಯಂತ ಲಸಿಕಾಮೇಳ ಆಯೋಜಿಸಿದೆ. ಎಲ್ಲ ನಾಗರಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಂಸದರಾದ ಮಂಗಳಾ ಸುರೇಶ್ ಅಂಗಡಿ ಮನವಿ ಮಾಡಿಕೊಂಡರು.
ನಗರದ ಸರದಾರ ಹೈಸ್ಕೂಲ್ ಆವರಣದಲ್ಲಿ ಶುಕ್ರವಾರ (ಸೆ.೧೭) ಏರ್ಪಡಿಸಲಾಗಿದ್ದ ಮೆಗಾ ಲಸಿಕಾಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬೆಳಗಾವಿ ಜಿಲ್ಲೆಯಲ್ಲಿ ಮೂರು ಲಕ್ಷ ಲಸಿಕೆಗಳನ್ನು ನೀಡುವ ಗುರಿ ಹೊಂದಲಾಗಿದೆ. ಆ ಪ್ರಕಾರ ಜಿಲ್ಲೆಯಾದ್ಯಂತ ಲಸಿಕಾಮೇಳ ಆರಂಭಗೊAಡಿರುತ್ತದೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಶಾಸಕ ಅನಿಲ್ ಬೆನಕೆ ಅವರು, ಪ್ರತಿಯೊಬ್ಬರಿಗೂ ಉಚಿತವಾಗಿ ಲಸಿಕೆ ನೀಡುವುದು ಸರಕಾರದ ಆಶಯವಾಗಿದೆ. ಈ ನಿಟ್ಟಿನಲ್ಲಿ ಲಸಿಕಾಮೇಳ ಹಮ್ಮಿಕೊಳ್ಳಲಾಗಿದೆ ಎಂದರು. ಇದುವರೆಗೆ ಲಸಿಕೆ ಪಡೆಯದೇ ಇರುವವರು ಹಾಗೂ ಮೊದಲ ಡೋಸ್ ಪಡೆದುಕೊಂಡು ನಿಗದಿತ ಅವಧಿಯನ್ನು ಪೂರೈಸಿದವರು ಲಸಿಕೆ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿವಿಧ ಪ್ರದೇಶಗಳ ಲಸಿಕಾ ಮೇಳಕ್ಕೆ ಜಿಲ್ಲಾಧಿಕಾರಿ ಭೇಟಿ :
ಬೆಳಗಾವಿ ಜಿಲ್ಲೆಯಾದ್ಯಂತ ಕೋವಿಡ್ ಲಸಿಕಾಮೇಳ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಬೆಳಗಾವಿ ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ ಲಸಿಕಾ ಮೇಳವನ್ನು ವೀಕ್ಷಿಸಿದರು.ಬೆಳಗಾವಿ ಜಿಲ್ಲೆಯಲ್ಲಿ ಒಟ್ಟಾರೆ ಮೂರು ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಜಿಲ್ಲೆಯ ಎಲ್ಲ ಪ್ರಾಥಮಿಕ, ಸಮಯದಾಯ ಆರೋಗ್ಯ ಕೇಂದ್ರಗಳು, ಆಸ್ಪತ್ರೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಪ್ರತಿಯೊಂದು ಗ್ರಾಮದಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ವಾರ್ಡುವಾರು ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿ, ಲಸಿಕೆ ನೀಡಲಾಗುತ್ತಿದೆ.
ಇದಲ್ಲದೇ ಬೆಳಗಾವಿ ನಗರದ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಕೋವಿಡ್ ಸಂಭವನೀಯ ಮೂರನೇ ಅಲೆಯ ಬಗ್ಗೆ ವರದಿಗಳಿವೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು. ನಾಗರಿಕರು ತಮ್ಮ ಸಮೀಪದ ಕೇಂದ್ರಗಳಲ್ಲಿ ಲಸಿಕೆಯನ್ನು ಪಡೆದುಕೊಳ್ಳುವ ಮೂಲಕ ಲಸಿಕಾ ಮೇಳ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಮನವಿ ಮಾಡಿಕೊಂಡಿದ್ದಾರೆ.


Leave a Reply