Belagavi

ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಸಿಎಂಗೆ ಮನವಿ


ಬೆಳಗಾವಿ: ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಬರುವ ಅಧಿವೇಶನದಲ್ಲಿ ಮಂಡನೆ ಮಾಡಿ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡುವಂತೆ ಆಗ್ರಹಿಸಿ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳು ಇಂದು ರವಿವಾರ ಬೆಳಗಾವಿಯಲ್ಲಿ ಮುಖ್ಯಮಂತ್ರಿಗಳು ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.

ವಿಶ್ವವಿಖ್ಯಾತ ಸಿಂಧೂ ನಾಗರೀಕತೆಯನ್ನು ಕಟ್ಟಿ ರಾಜ್ಯರಾಗಿದ್ದ ಮಾದಿಗ, ಚಮ್ಮಾರ, ಡೋಹರ, ಮಚಗಾರ, ನಾಗ ಮತ್ತಿತ್ತರ ದ್ರಾವಿಡ ಆದಿ ಜನಾಂಗದವರು ಮನುವಾದಿ ಕುತಂತ್ರದಿಂದ ನಿರ್ಮಿತವಾದ ಶ್ರೇಣಿಕೃತ ಜಾತಿ ವ್ಯವಸ್ಥೆಯಿಂದ ಶತಮಾನಗಳಿಂದ ಶೋಷಣೆಗೆ ಗುರಿಯಾಗಿ ಅಸ್ಪೃಶ್ಯ ಸಮಾಜವೆನಿಸಿಕೊಂಡು ಶಿಕ್ಷಣ, ಉದ್ಯೋಗ, ಸಾಮಾಜಿಕ, ರಾಜಕೀಯ ಸ್ಥಾನಮಾನದಿಂದ ವಂಚಿತರಾಗಿದ್ದೇವೆ. ಆದರೆ ಬಹುಕಾಲ ದೇಶವನ್ನಾಳಿದ ಕಾಂಗ್ರೆಸ್ ಆಗಲಿ, ಬಿಜೆಪಿ ಆಗಲಿ, ಜನತಾ ಪಕ್ಷಗಳಾಗಲಿ 70 ವರ್ಷ ಕೊನೆಯಾದರೂ ಇನ್ನೂ ಪೂರ್ಣವಾಗಿ ಮೀಸಲಾತಿ ಮಾಡದೆ ಅನ್ಯಾಯ ಮಾಡಿದೆ. ಈಗಲೂ 10 ದಿನ ಅಧಿವೇಶನ ನಡೆದರೂ ಆಯೋಗದ ಬಗ್ಗೆ ಚರ್ಚೆ ಮಾಡದೆ ಇರುವದನ್ನು ನೋಡಿ ನಮಗೆ ತುಂಬಾ ನೋವಾಗಿದೆ ಎಂದು ಮಾದಿಗ ಜನಾಂಗ ಆಕ್ರೋಶ ವ್ಯಕ್ತಪಡಿಸಿದರು.

ಸುಮಾರು ಎರಡು ದಶಕಗಳಿಂದ ಹೋರಾಟ ಮಾಡುತ್ತ ಬಂದಿವೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರಯೋಜನವಾಗಿರುವದಿಲ್ಲ. ಇಷ್ಟೇಲ್ಲಾ ಕಾನೂನಿನ ಅಡಿಯಲ್ಲಿ ಆಯೋಗ ರಚನೆಯಾಗಿ ಎರಡು ದಶಕ ಕಳೆದರೂ ಇವಾಗ ಬೋವಿ ಮತ್ತು ಲಂಬಾಣಿಗಳ ಜನಪ್ರತಿನಿಧಿಗಳು ವಿರೋಧಿಸುವುದು ಸರಿಯಲ್ಲ. ಇನ್ನು ಬೆಳಗಾವಿ ಜಿಲ್ಲೆಯ ಪರವಾಗಿ ಛಲವಾದಿ ಮತ್ತು ಮಾದಿಗ ಸಂಬಂಧಿಸಿದ ಜಾತಿಗಳ ಪರವಾಗಿ ಕೂಡಲೆ ಕೇಂದ್ರ ಸರಕಾರಕ್ಕೆ
ಶಿಫಾರಸ್ಸು ಮಾಡಬೇಕು. ಒಂದು ವೇಳೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡದೆ ಹೋದರೆ ಮುಂಬರುವ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಹಿನ್ನಡೆಯಾಗಲು ನಮ್ಮ ಜನರು ಕಾರಣರಾಗುತ್ತಾರೆ. ಇದನ್ನು ಮನಗಂಡು ಆದಷ್ಟು ಬೇಗನೆ ಈ ಆಯೋಗವನ್ನು ಜಾರಿಗೆ ಮಾಡಿ ನಮ್ಮ ಸಮಾಜಕ್ಕೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಎಂಆರ್ ಎಚ್ ಎಸ್ ಜಿಲ್ಲಾಧ್ಯಕ್ಷ ರಾಜೇಂದ್ರ ಐಹೊಳೆ, ರಾಜ್ಯ ಕಾರ್ಯದರ್ಶಿ ಮಹಾವೀರ ಐಹೊಳೆ, ಜಿಲ್ಲಾ ಉಪಾಧ್ಯಕ್ಷ ರಮೇಶ ರಾಯಪ್ಪಗೋಳ, ಅಥಣಿ ತಾಲೂಕಾಧ್ಯಕ್ಷ ಹನಮಂತ ಅರ್ಧಾವೂರ, ಕಾನೂನು ಸಲಹೆಗಾರ ವಾಯ್.ಎಸ್. ಮೇತ್ರಾಣಿ, ಜಿಲ್ಲಾ ಉಪಾಧ್ಯಕ್ಷ ಯಲ್ಲಪ್ಪ ಹುದಲಿ, ಅಜೀತ ಮಾದರ ಸೇರಿದಂತೆ ಅನೇಕ ಮಾದಿಗ ಮುಖಂಡರು ಪಾಲ್ಗೊಂಡಿದ್ದರು.


Leave a Reply