Belagavi

ದೆಹಲಿ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಲು ಮಠಾಧೀಶರು ಆಗ್ರಹ


ಬೆಳಗಾವಿ: ನೂತನವಾಗಿ ನಿರ್ಮಾಣವಾಗುತ್ತಿರುವ ಸಂಸತ್ ಭವನ ಕಟ್ಟಡಕ್ಕೆ ಅನುಭವ ಮಂಟಪ ಎಂದು ಹಾಗೂ ಹೊಸದಾಗಿ ನಿರ್ಮಿಸಿರುವ ರೈಲು ನಿಲ್ದಾಣಕ್ಕೆ ನಾಗನೂರು ಶಿವಬಸವ ಸ್ವಾಮೀಜಿಗಳ ನಾಮಕರಣ ಮಾಡಮಾಬೇಕೆಂದು ವಿವಿಧ ಮಠಾಧೀಶರು ಹಾಗೂ ಹೋರಾಟಗಾರರು ಆಗ್ರಹಿಸಿದರು

ಶಿವಬಸವನಗರದ ನಾಗನೂರು ರುದ್ರಾಕ್ಷಿಮಠದಲ್ಲಿ ಹಮ್ಮಿಕೊಮಡ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶ್ರೀಗಳು, ‘ಸಮಸ್ತ ಭಕ್ತರ ಆಶಯದ ಮೇರೆಗೆ ನಾವು ಸರ್ಕಾರದ ಎದುರು ಹಕ್ಕೊತ್ತಾಯ ಮಂಡಿಸುತ್ತಿದ್ದೇವೆ. ಇದನ್ನು ಗೌರವಿಸುವ ಮೂಲಕ, ನಾಗನೂರು ಶ್ರೀಗಳ ಆದರ್ಶವನ್ನು ಇಂದಿನ ಮತ್ತು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ರಾಜ್ಯದಿಂದ ಶಿಫಾರಸು ಮಾಡಬೇಕು’ ಎಂದು ಒತ್ತಾಯಿಸಿದರು.

ಗದಗ–ಡಂಬಳ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ‘ಕರ್ನಾಟಕದ ಗಡಿ ಭಾಗವಾದ ಬೆಳಗಾವಿಗೆ 1932ರಲ್ಲಿ ಬಂದ ಶಿವಬಸವ ಸ್ವಾಮೀಜಿ ಇಲ್ಲಿ ನೆಲೆ ನಿಂತು ಗ್ರಾಮೀಣ ಮಕ್ಕಳಿಗೆ ಅನ್ನ–ಆಶ್ರಯ ಕಲ್ಪಿಸಿದರು. ಈ ಭಾಗದಲ್ಲಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪುನರುತ್ಥಾನಕ್ಕೆ ಕಾರಣವಾದರು. ಬಡ ಮಕ್ಕಳ ಬಾಳಿಗೆ ಬೆಳಕಾದರು. ಕೆಎಲ್‌ಇ ಸಂಸ್ಥೆಯು ಶಿಕ್ಷಣ ನೀಡುತ್ತಿದ್ದರೆ ಅದಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಆಹಾರ–ವಸತಿ ಕಲ್ಪಿಸಿದವರು’ ಎಂದು ಸ್ಮರಿಸಿದರು.

ಕರ್ನಾಟಕ ಏಕೀಕರಣದೊಂದಿಗೆ ಸ್ವಾತಂತ್ರ್ಯಕ್ಕಾಗಿಯೂ ಹೋರಾಡಿದ್ದರು. ಬೆಳಗಾವಿಯು ಕರ್ನಾಟಕದಲ್ಲಿ ಉಳಿಯುವಂತೆ ಮಾಡುವಲ್ಲಿ ಅವರ ಕೊಡುಗೆ ದೊಡ್ಡದಿದೆ. ಆಯೋಗಗಳ ಎದುರು ಪ್ರಬಲವಾಗಿ ಪ್ರತಿಪಾದಿಸಿದ್ದರು. ಜಾತಿ–ಮತ–ಪಂಥಗಳ ಭೇದವಿಲ್ಲದೆ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿ ಪ್ರಜಾಸತ್ತಾಸತ್ಮಕ ಮೌಲ್ಯಗಳನ್ನು ಎತ್ತಿ ಹಿಡಿದವರು. ಬಸವಾದಿ ಶರಣರ ಕಾಯಕ–ದಾಸೋಹ ತತ್ವಗಳ ತಳಹದಿಯಲ್ಲಿ ಪ್ರಸಾದ ನಿಲಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಸತತ 7 ದಶಕಗಳವರೆಗೆ ಮುನ್ನಡೆಸಿದ ಕರ್ನಾಟಕ ಕಂಡ ಅಪ್ರತಿಮ ಕಾಯಕ ಯೋಗಿ. ಅವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸಬೇಕು’ ಎಂದು ಒತ್ತಾಯಿಸಿದರು.

ಸ್ವಾಮೀಜಿಯು ಜಾತ್ಯತೀತ ಹಾಗೂ ರಾಷ್ಟ್ರೀಯತೆಯ ಮನೋಭಾವ ಹೊಂದಿದ್ದರು. ಮಹಾತ್ಮ ಗಾಂಧೀಜಿ ಅವರಿಂದ ಖಾದಿ ದೀಕ್ಷೆ ಪಡೆದು ಜೀವನದುದ್ದಕ್ಕೂ ಖಾದಿ ಬಟ್ಟೆಯನ್ನೇ ಧರಿಸಿದವರು. ಎಸ್. ನಿಜಲಿಂಗಪ್ಪ, ಮೊರಾರ್ಜಿ ದೇಸಾಯಿ ಮೊದಲಾದ ಆದರ್ಶ ರಾಜಕಾರಣಿಗಳ ನಿಕಟ ಸಂಪರ್ಕದಲ್ಲಿದ್ದರು. ಸಾಹಿತ್ಯ, ಸಂಗೀತ, ಸಂಸ್ಕೃತಿ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ಹೀಗಾಗಿ, ಆ ಮಹಾಚೇತನಕ್ಕೆ ಗೌರವ ನೀಡಬೇಕು ಎಂದು ಕೋರಿದರು.

ನಿಡಸೋಸಿ ದುರದುಂಡೇಶ್ವರ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ, ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಸೇರಿದಂತೆ ಹಲವು ಶ್ರೀಗಳು ಮತ್ತು ಹೋರಾಟಗಾರರಾದ ಅಶೋಕ ಚಂದರಗಿ ಹಾಗೂ ಸಿದಗೌಡ ಮೋದಗಿ ಇದ್ದರು.ದೆಹಲಿ ಸಂಸತ್ ಭವನಕ್ಕೆ “ಅನುಭವ ಮಂಟಪ” ಎಂದು ನಾಮಕರಣ ಮಾಡಲು ಮಠಾಧೀಶರು ಆಗ್ರಹ


Leave a Reply