Koppal

ಜಿಲ್ಲೆಯ ಅಭಿವೃದ್ಧಿಗೆ ಶೈಕ್ಷಣಿಕ ಪ್ರಗತಿ ಮುಖ್ಯ: ಸಚಿವ ಹಾಲಪ್ಪ ಆಚಾರ್ ಹೇಳಿಕೆ


ಜಿಲ್ಲಾ ಗುರುಭವನ ಭೂಮಿಪೂಜೆ ಕಾರ್ಯಕ್ರಮ

ಕೊಪ್ಪಳ: ಆಸಕ್ತಿಯಿಂದ ಗುರುಭವನ ನಿರ್ಮಿಸಲಾಗಿದೆ. ಇದರಲ್ಲಿ ಶೈಕ್ಷಣಿಕವಾಗಿ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಚಟುವಟಿಕೆಗಳು ನಡೆಯಬೇಕು. ಜಿಲ್ಲೆ ಅಭಿವೃದ್ಧಿ ಹೊಂದಬೇಕಾದರೆ ಈ ಭಾಗ ಶೈಕ್ಷಣಿಕವಾಗಿ ಮುಂಚೂಣಿಯಲ್ಲಿ ಇರಬೇಕು ಎಂದು ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್ ಹೇಳಿದರು.
ನಗರದ ಸರ್ಕಾರಿ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಾನುವಾರ (ಅ. 10) ಜಿಲ್ಲಾಡಳಿತ, ಬೆಂಗಳೂರು ಶಿಕ್ಷಕರ ಕಲ್ಯಾಣ ನಿಧಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪ್ರಾಥಮಿಕ, ಪ್ರೌಢಶಾಲಾ, ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಸಂಯುಕ್ತಾಶ್ರದಲ್ಲಿ ನಡೆದ ಜಿಲ್ಲಾ ಗುರುಭವನಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಿರ್ದಿಷ್ಟ ಸಮಯದೊಳಗೆ ಗುರುಭವನ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಮುಖ್ಯಮಂತ್ರಿಗಳಿಗೂ ಅನುದಾನಕ್ಕೆ ಮನವಿ ಮಾಡಲಾಗುವುದು. ಈ ಭಾಗದವರು ಶೈಕ್ಷಣಿಕವಾಗಿ ಹಿಂದುಳಿದಿದ್ದೇವೆ. ಇದಕ್ಕೆ ಶಿಕ್ಷಕರ ನಿರ್ಣಯಕ್ಕೆ ರಾಜಕಾರಣಿಗಳು ಬದ್ಧರಿದ್ದೇವೆ. ಆದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಶೈಕ್ಷಣಿಕವಾಗಿ ಜಿಲ್ಲೆಯನ್ನು ಮೇಲ್ಪಂಕ್ತಿಯಲ್ಲಿ ನಿಲ್ಲಿಸಲು ಶಿಕ್ಷಕರೂ ಕೂಡಾ ಬದ್ಧರಾಗಬೇಕು. ಒಳ್ಳೆಯ ಶಿಕ್ಷಣ, ಸಂಸ್ಕೃತಿಯನ್ನು ಬೆಳೆಸಿ, ಮಕ್ಕಳನ್ನು ಒಳ್ಳೆಯ ವ್ಯಕ್ತಿಯನ್ನಾಗಿ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೇ ಸಮಾಜದಲ್ಲಿ ಉನ್ನತ ಸ್ಥಾನಮಾನ ಹೊಂದುತ್ತಾರೆ. ಸಮಾಜದಲ್ಲಿ ತಂದೆ-ತಾಯಿಯನ್ನು ಬಿಟ್ಟರೇ ಶಿಕ್ಷಕರಿಗೆ ಬಹುದೊಡ್ಡ ಸ್ಥಾನವಿದೆ. ರಾಜ್ಯದಲ್ಲಿ ನಂಬರ್ 1 ಶಾಲೆಯನ್ನಾಗಿ ಯಾವುದಾರೂ ಒಂದು ಶಾಲೆಯನ್ನು ನಿರ್ಮಿಸಿ. ಬೇರೆ ಜಿಲ್ಲೆಯವರಿಗೆ ಮಾದರಿ ಆಗಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.
ಸಂಸದ ಸಂಗಣ್ಣ ಕರಡಿ ಮಾತನಾಡಿ, ಶಿಕ್ಷಕರ 25 ವರ್ಷಗಳ ಬೇಡಿಕೆಯಾದ ಗುರುಭವನ ನಿರ್ಮಾಣಕ್ಕೆ ಪ್ರಸ್ತುತ ಭೂಮಿಪೂಜೆ ನೆರವೇರಿಸಲಾಗಿದೆ. ಶಿಕ್ಷಕರು ಪ್ರಜಾಪ್ರಭುತ್ವ ಭಾರತದ ಬುನಾದಿಯಾಗಿದ್ದಾರೆ. ಹಾಗಾಗಿ ಅವರಿಗೆ ಗುರುಭವನ ನಿರ್ಮಾಣ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಜಿಲ್ಲೆಯಲ್ಲಿ 8 ಸಾವಿರ ಶಿಕ್ಷಕರು ಇದ್ದಾರೆ. ಅವರಿಗೆ ಆಡಳಿತ ವ್ಯವಸ್ಥೆಯಲ್ಲಾಗುವ ಗೊಂದಲಗಳನ್ನು ನಿವಾರಣೆ ಮಾಡಿಕೊಳ್ಳಲು ಗುರುಭವನ ಬೇಕು. ಅಲ್ಲದೇ ಶಿಕ್ಷಣದ ಸುಧಾರಣೆ ಮಾಡಲು, ಬೋಧನಾ ಸಾಮಾರ್ಥ್ಯವನ್ನು ಹೆಚ್ಚಿಸಿಕೊಳ್ಳಲು, ತರಬೇತಿ ಕಾರ್ಯಾಗಾರ ಮಾಡಲು ಅನುಕೂಲವಾಗುತ್ತದೆ. ಮ್ಯಾಕ್ರೋ ಅನುದಾನ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಜಿಲ್ಲಾಧಿಕಾರಿಗಳು ಅನುದಾನ ಒದಗಿಸಬೇಕು. ಶಿಕ್ಷಕರಿಗೆ ಒಳ್ಳೆಯದಾದರೇ, ಮಕ್ಕಳಿಗೆ ಒಳ್ಳೆಯದಾಗುತ್ತದೆ. ಮಕ್ಕಳಿಗೆ ಒಳ್ಳೆಯದಾದರೇ ದೇಶಕ್ಕೆ ಒಳ್ಳೆಯದಾಗುತ್ತದೆ ಎಂದರು.
ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಗುರುಭವನಕ್ಕೆ ಸೂಕ್ತ ಸ್ಥಳ ಗುರುತಿಸುವಲ್ಲಿ ವಿಳಂಬವಾಯಿತು. ದೇಶದ ರಾಜ್ಯದ ಪ್ರಗತಿಯಲ್ಲಿ ಶಿಕ್ಷಕರ ಪಾತ್ರ ದೊಡ್ಡದು. ಶಿಕ್ಷಕರು ದೇಶದ ನಿರ್ಮಾಪಕರು. ಕೋವಿಡ್ ನಿಂದ ಶೈಕ್ಷಣಿಕ ಪ್ರಗತಿ ಕುಂಠಿತವಾಗಿದೆ‌. ಹಾಗಾಗಿ ಅದನ್ನು ಸುಧಾರಣೆ ಮಾಡಬೇಕು‌. ಈಗಿನ ಶಿಕ್ಷಕರನ್ನು ಮುಂದೆ ಬರುವಂತ ಶಿಕ್ಷಕರು ನೆನಪಿಟ್ಟುಕೊಳ್ಳುವಂತೆ ಮಾದರಿ ಗುರುಭವನ ನಿರ್ಮಿಸಬೇಕು ಎಂದರು.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಹಲಗೇರಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದು ಗುರುಭವನ ನಿರ್ಮಾಣವಾಗುತ್ತಿರುವುದು ಶಿಕ್ಷಕರಿಗೆ ಸಂತೋಷದ ದಿನವಾಗಿದೆ. ಉಸ್ತುವಾರಿ ಸಚಿವರು ಗುರುಭವನಕ್ಕೆ ಭೂಮಿಪೂಜೆ ಮಾಡುವ ಮೂಲಕ ಗುರುಗಳ ಮನಸ್ಸಿನಲ್ಲಿ ಇದ್ದೀರಿ. ಹಾಗಾಗಿ ಇದಕ್ಕೆ 2 ಕೋಟಿ ಅನುದಾನ ನೀಡಬೇಕು. ಶಿಕ್ಷಕರ ಕಲ್ಯಾಣ ನಿಧಿಯಿಂದ 1 ಕೋಟಿ ಅನುದಾನ ನೀಡುತ್ತೇವೆ ಎಂದರು.
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಫೌಜೀಯಾ ತರನ್ನುಮ್, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ನಗರಸಭೆ ಅಧ್ಯಕ್ಷೆ ಲತಾ ಗವಿಸಿದ್ದಪ್ಪ ಚಿನ್ನೂರ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದೊಡ್ಡಬಸಪ್ಪ ನೀರಲಕೆರೆ, ನಗರಸಭಾ ಸದಸ್ಯ ಅರುಣ್, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ‌, ಉಪನ್ಯಾಸಕರ ಸಂಘದ ಅಧ್ಯಕ್ಷ ಸೋಮನಗೌಡ‌ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶರಣಬಸವಗೌಡ ಪಾಟೀಲ್ ಸ್ವಾಗತಿಸಿದರು. ತಾಲ್ಲೂಕಾಧ್ಯಕ್ಷ ಪ್ರಾಣೇಶ ಪೂಜಾರ ವಂದಿಸಿದರು.

 

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Leave a Reply